Lookout Notice To Junaid: ರೈಲಿನಲ್ಲಿ ಸ್ಫೋಟಕಗಳು ಸಾಗಾಟ..!: ಶಂಕಿತ ಉಗ್ರ ಜುನೈದ್‍ಗೆ ಲುಕ್ ಔಟ್ ನೋಟಿಸ್

ರಾಜಧಾನಿ ಬೆಂಗಳೂರಿನಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದ ಉಗ್ರರನ್ನು ಸಿಸಿಬಿ ಪೊಲೀಸರು ಬಂಧಿಸಿದ ಪ್ರಕರಣ ಹಲವು ತಿರುವುಗಳನ್ನು ಪಡೆದುಕೊಂಡಿದೆ. ಜತೆಗೆ ತಲೆಮರೆಸಿಕೊಂಡಿರುವ ಶಂಕಿತ ಉಗ್ರ ಜುನೈದ್‍ಗೆ ಲುಕ್ ಔಟ್ ನೋಟಿಸ್ ಹೊರಡಿಸಲು ಸಿಸಿಬಿ ಸಿದ್ಧತೆ ನಡೆಸುತ್ತಿದೆ ಎಂಬ ಮಾಹಿತಿ ಹೊರಬಿದ್ದಿದೆ.

ಶಂಕಿತ ಉಗ್ರರನ್ನು ಬಂಧಿಸಿದ ಬಳಿಕ ಸಿಸಿಬಿ ಹೆಚ್ಚಿನ ಮಾಹಿತಿಗಳನ್ನು ಕಲೆ ಹಾಕುತ್ತಿದ್ದು, ಉಗ್ರರು ಬಾಯಿಬಿಟ್ಟಿರುವ ಸ್ಪೋಟಕ ವಿಚಾರಗಳು ಸಿಸಿಬಿ ಅಧಿಕಾರಿಗಳನ್ನೇ ಬೆಚ್ಚಿಬೀಳಿಸಿದೆ.
ಅಲ್ಲದೆ ಶಂಕಿತ ಉಗ್ರರು ಸಂಗ್ರಹಿಸಿದ್ದ ಗ್ರೆನೇಡ್ ಗಳ ಬಗ್ಗೆಯೂ ಸಮಗ್ರ ತನಿಖೆಯಾಗುತ್ತಿದೆ. ಈ ಗ್ರೆನೇಡ್ಗಳನ್ನು ಈ ಹಿಂದೆ ದೇಶದಲ್ಲಿ ಬಳಸಲಾಗಿದೆಯಾ? ಗ್ರೆನೇಡ್ ತಯಾರಿ ಎಲ್ಲಿ ನಡೆದಿದೆ ಸೇರಿದಂತೆ ಸಿಸಿಬಿ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದು, ಫುಲ್ ಅಲರ್ಟ್ ಆಗಿದ್ದಾರೆ.

ಇನ್ನೊಂದೆಡೆ ಶಂಕಿತ ಉಗ್ರರ ಮಾಸ್ಟರ್ ಮೈಂಡ್ ಜುನೈದ್‍ನನ್ನು ಪತ್ತೆಹಚ್ಚಲು ಇಂಟರ್‌ಪೋಲ್‌ ಮೂಲಕ ಲುಕ್ ಔಟ್ ನೋಟಿಸ್‍ಗೆ ಸಿಸಿಬಿ ಪೊಲೀಸರು ತಯಾರಿ ನಡೆಸಿದ್ದಾರೆ. ಆರೋಪಿ ವಿದೇಶಕ್ಕೆ ತೆರಳಿರುವ ಶಂಕೆ ಇದ್ದು ಆತನನ್ನು ಬಂಧಿಸಲು ಸೂಕ್ತ ಕ್ರಮಕ್ಕೆ ಪೊಲೀಸರು ಈಗ ಮುಂದಾಗಿದ್ದಾರೆ.

ನರಹಂತಕರ ಸ್ಫೋಟಕ ಜಾಲದ ಬೆನ್ನು ಬಿದ್ದಿರುವ ಸಿಸಿಬಿ, ಎಸ್ಕೇಪ್‌ ಆಗಿರುವ ಟೆರರಿಸ್ಟ್ ಗುಂಪಿನ ಪ್ರಮುಖ ಆರೋಪಿ ಜುನೈದ್ ಗಾಗಿ ಬಲೆ ಬೀಸಿದೆ.
2021ರಲ್ಲಿ ದುಬೈಗೆ ಪ್ರಯಾಣ ಮಾಡಿರುವ ಬಗ್ಗೆ ಸಿಸಿಬಿ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ. ಈ ಬಗ್ಗೆ ರಾಷ್ಟ್ರೀಯ ತನಿಖಾ ದಳಕ್ಕೆ (NIA) ಮಾಹಿತಿ ನೀಡಿರುವ ಸಿಸಿಬಿ ಅಧಿಕಾರಿಗಳು ಪರಿಶೀಲನೆ ನಡೆಸಿ ಶೀಘ್ರ ಲುಕ್ ಔಟ್ ನೋಟಿಸ್ ಜಾರಿಗೊಳಿಸಲು ಸಿದ್ಧತೆ ನಡೆಸಿದ್ದಾರೆ. 
ಉದ್ಯಾನನಗರಿಯೊಳಗೆ ನುಸುಳಿ ನರಮೇಧಕ್ಕೆ ಶಂಕಿತ ಉಗ್ರರು ನಡೆಸಿದ್ದ ಭಯಾನಕ ಸ್ಕೆಚ್‌ಗಳು ತನಿಖೆಯಲ್ಲಿ ಒಂದೊಂದಾಗೇ ಹೊರ ಬೀಳುತ್ತಿವೆ. ಶಂಕಿತ ಉಗ್ರರ ಬಳಿ ಇದ್ದ ಸ್ಫೋಟಕಗಳ ಜಾಲವನ್ನು ಭೇದಿಸಲು ಸಿಸಿಬಿ ಮುಂದಾಗಿದೆ.

ಕಳೆದ ಮೂರು ದಿನಗಳ ಹಿಂದೆ ಐವರು ಶಂಕಿತ ಉಗ್ರರನ್ನು ಬಂಧಿಸಿದ್ದ ಸಿಸಿಬಿ ಪೊಲೀಸರು ಅವರನ್ನು ತಮ್ಮ ಕಸ್ಟಡಿಗೆ ಪಡೆದಿದ್ದರು. ಬಳಿಕ ಅವರು ತಾವು ನಡೆಸಿದ್ದ ಸ್ಕೆಚ್‌ ಗಳ ಬಗ್ಗೆ ಬಾಯ್ಬಿಡಿಸಿದ್ದಾರೆ. ವಿಚಾರಣೆ ವೇಳೆ ಓರ್ವ ಶಂಕಿತ ಉಗ್ರ ಜಾಹಿದ್ ತಬ್ರೇಜ್ ಸ್ಫೋಟಕ್ಕೆ ಬಳಸುವ ಹ್ಯಾಂಡ್‌ ಗ್ರೆನೇಡ್‌ಗಳ ಬಗ್ಗೆ ಮಾಹಿತಿ ಬಾಯ್ಬಿಟ್ಟಿದ್ದ. ಅವನ ಮನೆಯ ಅಲ್ಮೇರಾದಲ್ಲಿ ಜೀವಂತ ಗ್ರೆನೇಡ್ ಇರುವ ಬಗ್ಗೆ ತಿಳಿಸಿದ್ದ. ಬಳಿಕ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ 4 ಜೀವಂತ ಗ್ರೆನೇಡ್‌ಗಳನ್ನ ಸಿಸಿಬಿ ಸೀಜ್ ಮಾಡಿತ್ತು.

ಇದೀಗ ಶಂಕಿತ ಉಗ್ರರ ಬಳಿ ಈ ಸ್ಫೋಟಕಗಳು ಬಂದಿದ್ಹೇಗೆ? ಎಂಬ ಜಾಲವನ್ನ ಸಿಸಿಬಿ ಭೇದಿಸಿದೆ.
ಸಿಕ್ಕಿರುವ ಗ್ರೆನೇಡ್ ಮಾದರಿಯ ಬಗ್ಗೆ ಎನ್​ಬಿಡಿಸಿ ಡಾಟಾ ಅನಾಲಿಸಿಸ್ ಮಾಡಿದ ಬಳಿಕ ದೇಶದಲ್ಲಿ ಈ ಗ್ರೆನೇಡ್ ಬಳಕೆಯಾಗಿದ್ಯಾ ಎಂಬ ಕುರಿತು ಪರಿಶೀಲನೆ ಮಾಡಲಾಗುತ್ತದೆ. ಪ್ರತಿ ಸ್ಫೋಟಕಗಳ ಡಾಟಾ ಸಂಗ್ರಹಿಸಿರುವ ಎನ್​ಬಿಡಿಸಿ, ಗ್ರೆನೇಡ್ ಎಲ್ಲಿಯದ್ದು? ಹೇಗೆ ತಯಾರಾಗಿದೆ ಎಂಬ ಪರಿಶೀಲನೆ ನಡೆಸಲಿದ್ದು, ಇವುಗಳ ಪರಿಣಾಮದ ವ್ಯಾಪ್ತಿಯ ಬಗ್ಗೆ ಮಾಹಿತಿ ಸಂಗ್ರಹಿಸಲಿದೆ ಎನ್ನಲಾಗಿದೆ.

ಇನ್ನೂ ಶಂಕಿತರ ಬಳಿ ಸಿಕ್ಕಿರುವ 4 ಗ್ರೆನೇಡ್‌ ರಾಜ್ಯಕ್ಕೆ ಬಂದಿದ್ದು ಹೇಗೆ ಅಂತಲೂ ಸಿಸಿಬಿ ತನಿಖೆಯಿಂದ ಮಾಹಿತಿ ಹೊರಬಿದ್ದಿದೆ. ಇದಕ್ಕೆಲ್ಲ ಜುನೈದ್ ಸೂತ್ರಧಾರ ಅನ್ನೋ ಸ್ಫೋಟಕ ಅಂಶ ಸಹ ವಿಚಾರಣೆ ವೇಳೆ ಬಯಲಾಗಿದೆ.
ಕಳೆದ 8 ತಿಂಗಳ ಹಿಂದೆ ಪ್ರಕರಣದ 2ನೇ ಆರೋಪಿ ಜುನೈದ್ ಪಾಕಿಸ್ತಾನದಿಂದ ಬಾಂಗ್ಲಾದೇಶಕ್ಕೆ ತೆರಳಿದ್ದ. ಈ ವೇಳೆ ಜುನೈದ್ ತನ್ನ ಕ್ರೈಂ‌ ಪಾರ್ಟ್ನರ್​ ಫೈಜರ್​ನನ್ನು ಬಾಂಗ್ಲಾದೇಶಕ್ಕೆ ಕರೆಸಿಕೊಂಡಿದ್ದ. ರೈಲಿನಲ್ಲಿ ತ್ರಿಪುರ ತಲುಪಿ ಬಳಿಕ ಅಗರ್ತಲ್ ಸಿಟಿಯ ಮುಖಾಂತರ ಫೈಜರ್‌ ಬಾಂಗ್ಲಾ ಪ್ರವೇಶಿಸಿದ್ದ. ಬಾಂಗ್ಲಾ, ಭಾರತದ ಬಾರ್ಡರ್ ಅಗರ್ತಲ್ ಹಳ್ಳಿಯಲ್ಲಿ ಡಿವೈಡ್ ಆಗುತ್ತದೆ. ಅದೇ ಮಾರ್ಗವಾಗಿ ಶಂಕಿತ ಫೈಜರ್ 4 ಗ್ರೆನೇಡ್​ಗಳನ್ನ ತಂದಿದ್ದ. ಅಲ್ಲಿಂದ ಮತ್ತೆ ಟ್ರೈನ್ ನಲ್ಲಿ ಗ್ರೆನೇಡ್​ಗಳನ್ನ ತಂದು ಮನೆಯಲ್ಲಿಟ್ಟಿದ್ದ ಎಂಬ ಮಾಹಿತಿ ಸಿಸಿಬಿ ತನಿಖೆಯಲ್ಲಿ ಗೊತ್ತಾಗಿದೆ.
ಹೀಗಾಗಿ ಇದೀಗ ರಾಜ್ಯಕ್ಕೆ ಹ್ಯಾಂಡ್ ಗ್ರೆನೇಡ್ ಕಳುಹಿಸಿದ್ದ A2 ಆರೋಪಿ ಜುನೈದ್ ಅಹಮದ್‌ಗೆ ಸಿಸಿಬಿ ಬಲೆ ಬೀಸಿದೆ.

ಬೆಂಗಳೂರಿನಲ್ಲಿ ಜುನೈದ್ ಅಹಮದ್ ಮೇಲೆ ೫ ಪ್ರಕರಣವಿದ್ದರೂ ವಿದೇಶಕ್ಕೆ ತೆರಳಿದ್ದೇಗೆ? ಬೇರೆಯವರ ಹೆಸರಲ್ಲಿ ಪಾಸ್ ಪೋರ್ಟ್ ಮಾಡಿಸಿಕೊಂಡು ವಿದೇಶಕ್ಕೆ ತೆರಳಿದ್ದಾನ ಎಂಬ ಶಂಕೆ ವ್ಯಕ್ತವಾಗಿದೆ. ಇದರ ಜೊತೆ ಸಿಸಿಬಿ ಶಂಕಿತ ಉಗ್ರರ ಫೋನ್ ಕರೆಗಳ ಬೆನ್ನು ಬಿದ್ದಿದೆ.
ಶಂಕಿತ ಉಗ್ರರ ವಿಚಾರಣೆಯಲ್ಲಿ ಇನ್ನು ಏನೇನು ಸ್ಫೋಟಕ ಮಾಹಿತಿಗಳು ಹೊರಬೀಳಲಿದೆಯೋ ಸಿಸಿಬಿ ತನಿಖೆ ಬಳಿಕ ತಿಳಿಯಲಿದೆ.

More News