ಚುನಾವಣೆಗೂ ಮೊದಲು ಸಹಾಯದ ಭರವಸೆ ನೀಡಿ ನಂತರ ಏಕಾಏಕಿ ಒಕ್ಕಲೆಬ್ಬಿಸೋ ಕಾಂಗ್ರೆಸ್ ಸರ್ಕಾರದ ಇಬ್ಬಗೆ ನೀತಿ ವಿರುದ್ಧ ರಾಜ್ಯದೆಲ್ಲೆಡೆ ಭಾರೀ ವಿರೋಧ ವ್ಯಕ್ತವಾಗ್ತಿದೆ. ಬ್ರ್ಯಾಂಡ್ ಬೆಂಗಳೂರು ಹೆಸರಲ್ಲಿ ಬೀದಿ ಬದಿ ವ್ಯಾಪಾರಿಗಳ ಹೊಟ್ಟೆಗೆ ತಣ್ಣೀರು ಬಟ್ಟೆ ಹಾಕಲು ಮುಂದಾಗಿರುವ ಡಿಸಿಎಂ ಡಿಕೆಶಿವಕುಮಾರ್ ನಡೆ ವಿರುದ್ಧ ಇದೀಗ ಬೆಂಗಳೂರಿನಲ್ಲೂ ಅಸಮಧಾನ ವ್ಯಕ್ಯವಾಗ್ತಿದೆ.

ಚುನಾವಣೆ ಪೂರ್ವ ಬೀದಿ ಬದಿ ವ್ಯಾಪಾರಿಗಳ ಜೊತೆ ಮಾಜಿ ಎಐಸಿಸಿ ಅಧ್ಯಕ್ಷ ರಾಹುಲ್
ಗಾಂಧಿ ಸಂವಾದ ನಡೆಸಿದ್ದರು. ಸಂವಾದದಲ್ಲಿ ತಮಗಾಗ್ತಿರೋ ಕಷ್ಟಗಳನ್ನ ಹೇಳಿಕೊಂಡಿದ್ದ ಬೀದಿ ಬದಿ ವ್ಯಾಪಾರಿಗಳು, ಪೊಲೀಸರ ಕಿರುಕುಳ.. ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯಡಿ ಸಾಲ ಅಲಭ್ಯತೆ ಬಗ್ಗೆ ಗಮನಕ್ಕೆ ತಂದಿದ್ದರು. ಈ ವೇಳೆ ಮಾತನಾಡಿದ್ದ ರಾಹುಲ್ ಗಾಂಧಿ, ಬೀದಿ ಬದಿ ವ್ಯಾಪಾರಿಗಳು ನಗರದ ಒಂದು ಭಾಗ. ಬೆಂಗಳೂರಿನ ಆಸ್ತಿ. ಸುಲಭ ರೀತಿಯಲ್ಲಿ ಲೋನ್ ಸಿಗುವ ರೀತಿಯಲ್ಲಿ ವ್ಯವಸ್ಥೆ ಮಾಡ್ತೀವಿ. ನಿಮ್ಮನ್ನ ರಕ್ಷಣೆ ಮಾಡಲೇಬೇಕು ಅಂತ ಭರವಸೆ ಕೊಟ್ಟಿದ್ದರು. ಈ ಸಂವಾದದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಕೂಡ ಭಾಗಿಯಾಗಿದ್ದರು. ಇದೀಗ ಬ್ರ್ಯಾಂಡ್ ಬೆಂಗಳೂರು ಹೆಸರಿನಲ್ಲಿ ನಗರದ ಬೀದಿ ಬದಿ ವ್ಯಾಪಾರಿಗಳ ತೆರವಿಗೆ ಡಿಸಿಎಂ ಡಿಕೆ ಶಿವಕುಮಾರ್ ಕರೆ ನೀಡಿದ್ದು, ಭಾರೀ ಟೀಕೆ ವ್ಯಕ್ತವಾಗ್ತಿದೆ.
ಈಗಾಗಲೇ ಬೀದಿ ಬದಿ ವ್ಯಾಪಾರಿಗಳ ತೆರವು ಮಾಡ್ತಿರುವ ಬಿಬಿಎಂಪಿ, ತನ್ನ ವ್ಯಾಪ್ತಿಯ ಎಂಟು ವಲಯಗಳಲ್ಲೂ ಕಾರ್ಯಾಚರಣೆ ಶುರು ಮಾಡಿದೆ. ಇದಕ್ಕೆ ಗರಂ ಆಗಿರುವ ಬೀದಿ ಬದಿ ವ್ಯಾಪಾರಿಗಳ ಸಂಘ, ಬಿಬಿಎಂಪಿಯಿಂದಲೇ ವ್ಯಾಪಾರ ಮಾಡಲು ಪರವಾನಗಿ ಕೊಟ್ಟು ಈಗ ತೆರವು ಎಂದರೆ ಹೇಗೆ? ಈಗಾಗಲೇ ಬಿಬಿಎಂಪಿಯಲ್ಲಿ 89,000 ಬೀದಿ ಬದಿ ವ್ಯಾಪಾರಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯಡಿ ನೋಂದಣಿ ಮಾಡಿಕೊಂಡಿದ್ದಾರೆ. 25,000 ವ್ಯಾಪಾರಿಗಳಿಗೆ ಬಿಬಿಎಂಪಿ ಗುರುತಿನ ಚೀಟಿಯನ್ನೂ ನೀಡಿದ್ಯಾಕೆ ಎಂದು ಬಿಬಿಎಂಪಿ ಅಧಿಕಾರಿಗಳ ಡಬಲ್ ಸ್ಟಾಂಡರ್ಡ್ ವಿರುದ್ಧ ಕಿಡಿಕಾರಿದ್ದಾರೆ. ವ್ಯಾಪಾರಕ್ಕೆ ಅವಕಾಶ ಮಾಡಿಕೊಡದಿದ್ದರೆ ಬಿಬಿಎಂಪಿ ಮುತ್ತಿಗೆ ಎಚ್ಚರಿಕೆ ಕೊಟ್ಟಿದ್ದಾರೆ.

ನಿಯಮ ಏನು ಹೇಳುತ್ತೆ..?
2014 ಬೀದಿ ವ್ಯಾಪಾರಿ ಅಧಿನಿಯಮ ಪ್ರಕಾರ ಬೀದಿ ಬದಿ ವ್ಯಾಪಾರ ಮಾಡಲು ಗುರುತಿನ ಚೀಟಿ ಇರಬೇಕು.
ನಿರ್ದಿಷ್ಟ ಸ್ಥಳದಲ್ಲಿ ವ್ಯಾಪಾರ ಮಾಡಬೇಕು. ಗುರುತಿನ ಚೀಟಿ ಸಿಕ್ಕಮೇಲೆ ಒಕ್ಕಲೆಬ್ಬಿಸೋ ಕೆಲ್ಸ ಮಾಡಬಾರದು. ಇದಕ್ಕಾಗಿಯೇ ತಜ್ಞರು, ಅಧಿಕಾರಿಗಳ ಒಂದು ಸಮಿತಿ ರಚಿಸಬೇಕು. ತೆರವು ಮಾಡಬೇಕಂದ್ರೆ ಸಮಿತಿಯ ಅನುಮತಿ ಪಡೆದು ತೆರವು ಮಾಡಬೇಕು ಎಂದಿದೆ.
ಎಷ್ಟಿದ್ದಾರೆ ಬೀದಿ ಬದಿ ವ್ಯಾಪಾರಿಗಳು..?

ನಗರದಲ್ಲಿ ಅಂದಾಜು 1.50 ಲಕ್ಷಕ್ಕೂ ಅಧಿಕ ಬೀದಿಬದಿ ವ್ಯಾಪಾರಿಗಳು ಇದ್ದಾರೆ. ಈ ಪೈಕಿ 25 ಸಾವಿರ ಮಂದಿಗೆ ಈಗಾಗಲೇ ಬಿಬಿಎಂಪಿ ಲೈಸೆನ್ಸ್ ಕೊಡಲಾಗಿದೆ. 89 ಸಾವಿರ ಬೀದಿ ಬದಿ ವ್ಯಾಪಾರಿಗಳು ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯಲ್ಲಿ ನೋಂದಣಿಯಾಗಿದ್ದಾರೆ. ನಗರದಲ್ಲಿ ಒಟ್ಟು 13 ಸಾವಿರ km ಉದ್ದದ ರಸ್ತೆ ಇದ್ದು, 1,300 km ಉದ್ದದ ಮುಖ್ಯ ರಸ್ತೆ ಬದಿಯಲ್ಲಿರುವ ವ್ಯಾಪಾರಿಗಳ ತೆರವಿದೆ ಆದೇಶ ಹೊರಡಿಸಲಾಗಿದೆ.
ಬಿಬಿಎಂಪಿಯ ವಾದವೇನು..?
ಬ್ರ್ಯಾಂಡ್ ಬೆಂಗಳೂರು ಅಡಿ ಸಾರ್ವಜನಿಕರ ಸಲಹೆ ಸ್ವೀಕಾರ ಮಾಡ್ತಾ ಇದ್ದೀವಿ. ಇದೂವರೆಗೂ 30 ಸಾವಿರ ಸಲಹೆಗಳು ಬಿಬಿಎಂಪಿಗೆ ಬಂದಿವೆ. ಬೀದಿ ಬದಿ ವ್ಯಾಪಾರಿಗಳನ್ನ ಒಕ್ಕಲೆಬ್ಬಿಸುವ ಕೆಲ್ಸ ಮಾಡ್ತಿಲ್ಲ. ಫುಟ್ ಪಾತ್ ಒತ್ತುವರಿ ಮಾಡಿಕೊಂಡಿರುವುದನ್ನ ಮಾತ್ರ ತೆರವು ಮಾಡ್ತಿದ್ದೀವಿ. ಬೀದಿ ಬದಿ ವ್ಯಾಪಾರಿಗಳು ಹೆದರುವ ಅಗತ್ಯವಿಲ್ಲ ಅಂತ ಸಬೂಬು ನೀಡ್ತಾರೆ. ಏನೇ ಆಗ್ಲಿ. ಸರ್ಕಾರದ ಯಾವುದೇ ಯೋಜನೆ ಆದರೂ ಜನರ ಪರ ನಿಲ್ಲುವಂತಿರಬೇಕು. ಜನರ ಹೊಟ್ಟೆ ಮೇಲೆ ಹೊಡೆದು ಅಭಿವೃದ್ಧಿ ಮಾಡ್ತೀವಿ ಅನ್ನೋ ಪರಿಕಲ್ಪನೆಗೆ ಅರ್ಥವಿಲ್ಲ.




