Minister Demands Money For Grant Release: ಅನುದಾನ ಬಿಡುಗಡೆಗೆ ಸಚಿವರು ಹಣಕ್ಕೆ ಬೇಡಿಕೆ : ಶಾಸಕ ಬಿ.ಆರ್ ಪಾಟೀಲ ಆರೋಪ

ಬೆಂಗಳೂರು: ಅನುದಾನ ಬಿಡುಗಡೆಗೆ ಸಚಿವರು ಮೂರನೇ ವ್ಯಕ್ತಿ ಮೂಲಕ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಬರೆದ ಪತ್ರದಲ್ಲಿ ಕಾಂಗ್ರೆಸ್‌ ಶಾಸಕ ಬಿ.ಆರ್ ಪಾಟೀಲ್ ಆರೋಪ ಮಾಡಿದ್ದಾರೆ.

ಕಲಬುರಗಿ ಜಿಲ್ಲೆಯ ಅಳಂದ ಕ್ಷೇತ್ರದ ಶಾಸಕ ಬಿ.ಆರ್ ಪಾಟೀಲ್ ಈ ಪತ್ರ ಇದೀಗ ವೈರಲ್ ಆಗುತ್ತಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗುತ್ತಿದೆ. ಸಿಎಂ ಸಿದ್ದರಾಮಯ್ಯ ಅವರಿಗೆ ಹಲವು ಶಾಸಕರು ಪತ್ರ ಬರೆದಿರುವ ಕುರಿತಾಗಿ ಸುದ್ದಿಗಳು ಹರಿದಾಡುತ್ತಿರುವ ಬೆನ್ನಲ್ಲೇ ಬಿ.ಆರ್ ಪಾಟೀಲ್‌ ಅವರ ಪತ್ರ ಇದೀಗ ಬಿಡುಗಡೆಯಾಗಿದೆ.

ಪತ್ರದಲ್ಲಿ ಏನಿದೆ?

ಜನರ ವಿಶ್ವಾಸ, ಭರವಸೆ ಹಾಗೂ ಅವರ ಪ್ರೀತಿಯಿಂದ ನಾವು ಶಾಸಕರಾಗಿ ಆಯ್ಕೆಯಾಗಿದ್ದೇವೆ. ಆದರೆ, ನಮ್ಮನ್ನು ಆರಿಸಿ ಕಳುಹಿಸಿದ ಜನರ ವಿಶ್ವಾಸಕ್ಕೆ ತಕ್ಕಂತೆ ಅಭಿವೃದ್ಧಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ.

ಏಕೆಂದರೆ ವಿವಿಧ ಇಲಾಖೆಗೆ ಸಂಬಂಧಿಸಿದ 20ಕ್ಕೂ ಹೆಚ್ಚು ಸಚಿವರಿಗೆ ನಮ್ಮ ಕ್ಷೇತ್ರಕ್ಕೆ ಅನುದಾನ ನೀಡುವಂತೆ ಮನವಿ ಮಾಡಿದ್ದರೂ ಸ್ಪಂದಿಸುತ್ತಿಲ್ಲ. ಇದರಿಂದ ಜನರ ಆಶೋತ್ತರ ಈಡೇರಿಸುವುದಕ್ಕೆ ಸಾಧ್ಯವಾಗುತ್ತಿಲ್ಲ.

ಅಲ್ಲದೆ ಅನುದಾನ ಬಿಡುಗಡೆ ಮಾಡುವುದಕ್ಕೂ ಸಚಿವರು ಮೂರನೇ ವ್ಯಕ್ತಿ ಮೂಲಕ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದಾರೆ. ಸ್ಥಳೀಯ ಶಾಸಕರು ನಾವು ಆಗಿದ್ದರೂ ಅನುದಾನಕ್ಕಾಗಿ ಮೂರನೇ ವ್ಯಕ್ತಿಯ ಮೊರೆ ಹೋಗಬೇಕಾಗಿರುವುದು ಅತ್ಯಂತ ಬೇಸರದ ವಿಷಯ.

ಇದಲ್ಲದೆ ಸಚಿವರು ತಮಗೆ ಬೇಕಾದ ಅಧಿಕಾರಿಗಳಿಗೆ ಮಣೆ ಹಾಕಿ, ಸ್ವಜನಪಕ್ಷಪಾತ ಮಾಡುತ್ತಿದ್ದಾರೆ. ನಮ್ಮ ಯಾವುದೇ ವರ್ಗಾವಣೆ ಶಿಫಾರಸ್ಸು ಪತ್ರಗಳಿಗೆ ಮಾನ್ಯತೆ ಕೊಡುತ್ತಿಲ್ಲ.

ಇದರಿಂದಾಗಿ ಯಾವ ಅಧಿಕಾರಿಯೂ ನಮ್ಮ ಕೆಲಸಗಳನ್ನು ಮಾಡಿ ಕೊಡುತ್ತಿಲ್ಲ, ನಮ್ಮ ಮಾತಿಗೆ ಬೆಲೆಯೂ ನೀಡುತ್ತಿಲ್ಲ. ಆದ್ದರಿಂದ ತಾವು ತಕ್ಷಣವೇ ಮಧ್ಯಪ್ರವೇಶಿಸಿ ಸಮಸ್ಯೆ ಪರಿಹರಿಸಬೇಕು ಎಂಬುದು ನಮ್ಮ ಕೋರಿಕೆ.ನಮ್ಮ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ತಾವು ನಡೆದುಕೊಳ್ಳುತ್ತೀರೆಂದು ಭಾವಿಸಿದ್ದೇವೆ.

More News