4 TMC Water Flowed Into KRS Dam: 24 ಗಂಟೆಯಲ್ಲಿ KRS ಡ್ಯಾಂಗೆ ಹರಿದುಬಂದ 4 ಟಿಎಂಸಿ ನೀರು: ಆಲಮಟ್ಟಿ ಜಲಾಶಯದ ನೀರೂ ಏರಿಕೆ

ರಾಜ್ಯದಾದ್ಯಂತ ಭಾರೀ ಮಳೆ ಹಿನ್ನಲೆಯಲ್ಲಿ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಕೆಆರ್‌ಎಸ್ ಡ್ಯಾಂಗೆ ಒಳಹರಿವಿನ ಪ್ರಮಾಣ ಮತ್ತಷ್ಟು ಹೆಚ್ಚಳ ಆಗಿದೆ.

ಕಳೆದ 24 ಗಂಟೆಯಲ್ಲಿ ಡ್ಯಾಂಗೆ 4 ಟಿಎಂಸಿ ನೀರು ಹರಿದು ಬಂದಿದೆ. ಸದ್ಯ ಡ್ಯಾಂನಲ್ಲಿ 26.811 ಟಿಎಂಸಿ ನೀರು ಶೇಖರಣೆ ಆಗಿದ್ದು, ಡ್ಯಾಂಗೆ 51,508 ಕ್ಯೂಸೆಕ್ ಒಳ ಹರಿವು ಮತ್ತು ಡ್ಯಾಂನಿಂದ 5,156 ಕ್ಯೂಸೆಕ್‌ನಷ್ಟು ಹೊರಹರಿವು ಇದೆ.

ಇತ್ತ ಆಲಮಟ್ಟಿ ಜಲಾಶಯದಲ್ಲಿನ ನೀರಿನ ಮಟ್ಟವೂ ಏರಿಕೆ ಕಂಡಿದೆ. ಒಂದೇ ದಿನ 10 ಟಿಎಂಸಿ ನೀರು ಹೆಚ್ಚಳ ಆಗಿದ್ದು, ವಿಜಯಪುರ ಜಿಲ್ಲೆ ಜನರ ಸಂತಸಕ್ಕೆ ಕಾರಣ ಆಗಿದೆ. ಇನ್ನು ಬೀದರ್ ಜಿಲ್ಲೆಯಲ್ಲಿ 26 ರಿಂದ 28 ರ ವರೆಗೆ ಅತೀ ಹೆಚ್ಚು ಮಳೆ ಸಾಧ್ಯತೆಯಿದ್ದು, ಕಾರಂಜಾ ಜಲಾಶಯ ಈಗಾಗಲೇ ಶೇ. 90 ರಷ್ಟು ಭರ್ತಿಯಾಗಿದೆ. ಕಾರಂಜಾ ಜಲಾಶಯಕ್ಕೆ ಐದು ಸಾವಿರ ಕ್ಯೂಸೆಕ್ಸ್ ಒಳಹರಿವು ಇದ್ದು, 6.7 ಟಿಎಂಸಿ ನೀರು ಸಂಗ್ರಹವಾಗಿದೆ.

ಇತ್ತ ಗದಗ ಜಿಲ್ಲೆಯಲ್ಲಿ ವಾಡಿಕೆ 15 ಎಂಎಂ ಮಳೆಯಾಗುತ್ತಿತ್ತು. ಆದರೆ ಈ ಬಾರಿ ಹೆಚ್ಚುವರಿ ಮಳೆಯಾಗಿದೆ. ವಾರದಿಂದ ಸುರಿಯುತ್ತಿರುವ ಮಳೆಗೆ ಜಿಲ್ಲೆಯಾದ್ಯಂತ 57 ಮನೆಗಳಿಗೆ ಹಾನಿಯಾಗಿದೆ. ತುಂಗಭದ್ರಾ ನದಿ ನೀರಿನ ಹರಿವಿನ ಬಗ್ಗೆ ನಿಗಾ ವಹಿಸಲಾಗಿದ್ದು, ನವಿಲುತೀರ್ಥ ಹಾಗೂ ಭದ್ರಾ ಡ್ಯಾಂ ನ ಹೊರಹರಿವು ಬಗ್ಗೆ ನಿಗಾವಹಿಸಲಾಗಿದೆ. ಬೆಣ್ಣೆ ಹಳ್ಳ ಉಕ್ಕಿ ಬಂದಲ್ಲಿ ರೋಣ, ನರಗುಂದಕ್ಕೆ ತಾಲೂಕಿನ ಕೆಲ ಗ್ರಾಮಗಳಿಗೆ ಹಾನಿಯಾಗುವ ಸಂಭವ ಇದ್ದು, ಮುಂಜಾಗ್ರತ ಕ್ರಮ ವಹಿಸಲು ಜಿಲ್ಲಾಡಳಿತ ಸೂಚನೆ ನೀಡಿದೆ.

More News