ಸಿಂಧಗಿ : ಬಿಜೆಪಿಯವರು ನನ್ನ ವೈಯಕ್ತಿಕ ವಿಚಾರಗಳನ್ನು ಇಲ್ಲಿಗೆ ಬಿಡುವುದು ಒಳ್ಳೆಯದು. ಇಲ್ಲವಾದರೆ ಆರ್ ಎಸ್ ಎಸ್ ಶಾಖೆಗಳಿಂದ ತರಬೇತಿ ಪಡೆದುಕೊಂಡು ಬಿಜೆಪಿಗೆ ಬಂದವರೆಲ್ಲ ನಡೆಸುತ್ತಿರುವ ಅಸಹ್ಯ ಕೆಲಸವನ್ನೆಲ್ಲಾ ಬಿಚ್ಚಿಡಬೇಕಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಖಡಕ್ ಎಚ್ಚರಿಕೆ ನೀಡಿದರು.
ಸಿಂಧಗಿ ಕ್ಷೇತ್ರದಲ್ಲಿ ಪ್ರಚಾರದ ವೇಳೆ ಮಾತನಾಡಿದ ಅವರು, ಇವತ್ತು ಬಿಜೆಪಿಯವರು ನನ್ನ ಖಾಸಗಿ ವಿಚಾರಗಳನ್ನು ಕೆದಕಿದ್ದಾರೆ. ಮತ್ತೆ ಮತ್ತೆ ಕೆದಕುತ್ತಿದ್ದಾರೆ. ಅವರಿಗೆ ನೇರವಾಗಿ ಹೇಳಲು ಬಯಸುತ್ತೇನೆ. ನಾನು ಆರ್ ಎಸ್ ಎಸ್ ಬಗ್ಗೆ ಎತ್ತಿರುವ ಪ್ರಶ್ನೆಗಳ ಬಗ್ಗೆ ಉತ್ತರ ನೀಡಲಿ. ಅದರ ಹೊರತಾಗಿ ನನ್ನ ವೈಯಕ್ತಿಕ ವಿಚಾರಗಳನ್ನು ಪ್ರಸ್ತಾಪ ಮಾಡಿದರೆ ನಾನು ಅವರೆಲ್ಲರ ವಿಚಾರಗಳನ್ನು ಮಾಧ್ಯಮಗಳ ಮುಂದೆ ಬಿಚ್ಚಿಡಬೇಕಾಗುತ್ತದೆ. ಅವೆಲ್ಲವನ್ನೂ ನೀವು ನೋಡಿದರೆ ಅಸಹ್ಯಪಡುತ್ತೀರಿ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಬಿಜೆಪಿ ನಾಯಕರ ಬ್ರಹ್ಮಾಂಡ ಬಂಡವಾಳ ಇದೆ
ಬಿಜೆಪಿ ನಾಯಕರದ್ದು ಬ್ರಹ್ಮಾಂಡ ಬಂಡವಾಳ ಇದೆ. ಹಿಂದೆ ಚಿಕ್ಕಮಗಳೂರಿನ ಮಹಿಳಾ ಸರಕಾರಿ ಅಧಿಕಾರಿಯೊಬ್ಬರ ಪತಿ ಕೆಆರ್ ಎಸ್ ಜಲಾಶಯಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು ಸೇರಿ ಅನೇಕರ ಕಥೆಗಳು ನನಗೆ ಚೆನ್ನಾಗಿ ಗೊತ್ತಿವೆ. ಸುಮ್ಮನೆ ಕೆಣಕುತ್ತಾ ಹೋದರೆ ಅದೇ ನಿಮಗೆ ತಿರುಗುಬಾಣ ಆಗುತ್ತದೆ. ಬಿಜೆಪಿ ನಾಯಕರಿಗೆ ಇದು ನಾನು ಕೊಡುವ ನೇರ ಎಚ್ಚರಿಕೆ ಎಂದು ಹೇಳಿದ್ದಾರೆ.
ಈ ಆತ್ಮಹತ್ಯೆಗೆ ಕಾರಣನಾದವರು ಯಾರು? ಆ ನಾಯಕನ ಬಗ್ಗೆ ತಾಕತ್ತಿದ್ದರೆ ಬಿಜೆಪಿಯವರು ಮಾತನಾಡಲಿ. ಆ ಪಕ್ಷ ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದರಲ್ಲದೆ, ಮಂಗಳೂರಿನಲ್ಲಿ ಸಂಘದ ಪ್ರಚಾರಕರೊಬ್ಬರ ಕುಟುಂಬದ ಹೆಣ್ಣು ಮಗಳೊಬ್ಬರನ್ನು ಹಾಳು ಮಾಡಿ ಬಾಂಬೆಗೆ ಕದ್ದು ಓಡಿ ಹೋಗಿದ್ದವರು ಯಾರು? ನೀವೇ ಹೇಳಿ. ಇಲ್ಲವಾದರೆ ಅದೆಲ್ಲವನ್ನೂ ನಾನೇ ಬಿಚ್ಚಿ ಇಡಬೇಕಾಗುತ್ತದೆ ಎಂದು ತಾಕೀತು ಮಾಡಿದ್ದಾರೆ.
ನಾನು ಕುಟಂಬ ಹಾಳು ಮಾಡಿಲ್ಲ, ಬಿಜೆಪಿಯವರು ಎಷ್ಟು ಕುಟುಂಬ ಹಾಳು ಮಾಡಿದ್ದೀರಾ
ನಾನು ಪದೇ ಪದೆ ಹೇಳುತ್ತಿದ್ದೇನೆ. ನಾನು ಯಾವುದೇ ಕುಟುಂಬಗಳನ್ನು ಹಾಳು ಮಾಡಿಲ್ಲ. ಬಿಜೆಪಿಯವರು ಎಷ್ಟು ಮನೆಗಳನ್ನು ಹಾಳು ಮಾಡಿದ್ದಾರೆ ಎಂಬುದು ನನಗೆ ಮಾತ್ರವಲ್ಲ ಇಡೀ ನಾಡಿಗೇ ಗೊತ್ತಿದೆ, ಅದಕ್ಕೆ ಹೇಳುತ್ತಿದ್ದೇನೆ, ನನ್ನ ವಿಷಯಕ್ಕೆ ಬರಬೇಡಿ. ಸಾಧ್ಯವಾದರೆ ನಾನು ಆರ್ ಎಸ್ ಎಸ್ ಬಗ್ಗೆ ಎತ್ತಿರುವ ಪ್ರಶ್ನೆಗಳಿಗೆ ಉತ್ತರ ಕೊಡಿ. ಶಾಖೆಗಳಿಂದ ತರಬೇತಿ ಪಡೆದು ಬಂದಿದ್ದಿರಲ್ಲ, ನಿಮ್ಮದೆಲ್ಲ ಹೊರಗೆ ತೆಗೆದರೆ, ಸೂರ್ಯ ಚಂದ್ರರ ರೀತಿ ಬೆಳಗುತ್ತಿದೆ ಎಂದು ಆರ್ ಎಸ್ ಎಸ್ ಎಂದು ಹೇಳುತ್ತಿದ್ದೀರಿ ಅಲ್ಲವಾ, ಅದನ್ನು ಕತ್ತಲೆಗೆ ತಂದು ಬಿಡುತ್ತೀರಿ. ಹಾಗೆ ಆಗುವುದು ಬೇಡ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.




