Young Players Batting Failure: ಯುವ ಆಟಗಾರರ ಬ್ಯಾಟಿಂಗ್ ವೈಫಲ್ಯ: ಆಯ್ಕೆ ಸಮಿತಿಗೆ ತಲೆನೋವು!

ಅತಿಥೇಯ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಸೋಲಿನ ಆಘಾತ ಕಂಡಿರುವ ಟೀಂ ಇಂಡಿಯಾ ಪ್ರದರ್ಶನದ ಬಗ್ಗೆ ಸಾಕಷ್ಟು ಟೀಕೆ ವ್ಯಕ್ತವಾಗುತ್ತಿದೆ. ವರ್ಷಾಂತ್ಯದಲ್ಲಿ ತವರಿನಲ್ಲಿ ನಡೆಯುವ ಏಕದಿನ ವಿಶ್ವಕಪ್ ಟೂರ್ನಿಗೆ ತಯಾರಿ ಆರಂಭಿಸಿರುವ ಭಾರತದ ಈ ಪ್ರದರ್ಶನದ ಬಗ್ಗೆ ಮಾಜಿ ಕ್ರಿಕೆಟಿಗರು ಸಹ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಾರ್ಬಡೊಸ್ ನಲ್ಲಿ ನಡೆದ ಪಂದ್ಯದಲ್ಲಿ ಭಾರತದ ಬ್ಯಾಟ್ಸ್‌ಮನ್‌ಗಳು ತೋರಿದ ನೀರಸ ಪ್ರದರ್ಶನ ತಂಡದ ಸೋಲಿಗೆ ಪ್ರಮುಖ ಕಾರಣವಾಯಿತು. ಭಾರತದ ಬ್ಯಾಟಿಂಗ್ ಅಸ್ತ್ರವಾಗಿರುವ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅವರುಗಳು ವಿಶ್ರಾಂತಿ ಪಡೆದ ಕಾರಣ ಯುವ ಆಟಗಾರರಿಗೆ ಅವಕಾಶ ನೀಡಲಾಗಿತ್ತು. ಆದರೆ ಈ ಅವಕಾಶವನ್ನು ಬಳಸಿಕೊಳ್ಳುವಲ್ಲಿ ಎಡವಿದ ಬ್ಯಾಟ್ಸ್‌ಮನ್‌ಗಳು ತಂಡಕ್ಕೆ ಆಸರೆಯಾಗದ ಪರಿಣಾಮ 2ನೇ ಪಂದ್ಯದಲ್ಲಿ ಸೋಲಿನ ಆಘಾತ ಎದುರಿಸಬೇಕಾಯಿತು. ಇದರೊಂದಿಗೆ ಮೂರು ಪಂದ್ಯಗಳ ಸರಣಿ ಸದ್ಯ 1-1ರಿಂದ ಸಮಗೊಂಡಿದೆ.

ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿದ್ದ ಭಾರತ, ಎರಡನೇ ಪಂದ್ಯದಲ್ಲೂ ಸುಲಭದ ಗೆಲುವಿನ ನಿರೀಕ್ಷೆ ಹೊಂದಿತ್ತು. ಆದರೆ ತಂಡದಲ್ಲಿ ಮಾಡಿಕೊಂಡ ಕೆಲ ಬದಲಾವಣೆಗಳು ತಂಡಕ್ಕೆ ಮುಳುವಾಯಿತು. 2ನೇ ಪಂದ್ಯಕ್ಕೆ ರೋಹಿತ್ ಹಾಗೂ ಕೊಹ್ಲಿಗೆ ವಿಶ್ರಾಂತಿ ನೀಡಿದ್ದರ ಪರಿಣಾಮ ಸಂಜೂ ಸ್ಯಾಮ್ಸನ್ ಹಾಗೂ ಅಕ್ಸರ್ ಪಟೇಲ್ ಅವರಿಗೆ ತಂಡದಲ್ಲಿ ಸ್ಥಾನ ನೀಡಲಾಗಿತ್ತು. ಆದರೆ ಈ ಇಬ್ಬರು ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾದರು, ಇವರ ಜೊತೆಗೆ ಸೂರ್ಯಕುಮಾರ್ ಯಾದವ್, ನಾಯಕ ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ ಅವರುಗಳು ಕೂಡ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು.

ಯುವ ಆಟಗಾರರ ಈ ಪ್ರದರ್ಶನ ಇದೀಗ ತಂಡದ ಮ್ಯಾನೇಜ್ಮೆಂಟ್ ಹಾಗೂ ಬಿಸಿಸಿಐ ಆಯ್ಕೆ ಸಮಿತಿಗೆ ದೊಡ್ಡ ತಲೆನೋವು ಮೂಡಿಸಿದೆ. ಏಕದಿನ ವಿಶ್ವಕಪ್ ಟೂರ್ನಿಗೆ ಆಟಗಾರರ ಆಯ್ಕೆಗೆ ಸದ್ದಿಲ್ಲದೆ ತಯಾರಿ ‌ನಡೆಯುತ್ತಿದ್ದರೂ, ಯುವ ಆಟಗಾರರಿಂದ ಇಂತಹ ಪ್ರದರ್ಶನ ಬರುತ್ತಿರುವುದು ಗೊಂದಲ ಮೂಡಿಸಿದೆ. ಮಹತ್ವದ ಟೂರ್ನಿಯಲ್ಲಿ ಈ ಆಟಗಾರರು ಯಾವ ರೀತಿ ಪ್ರದರ್ಶನ ನೀಡುತ್ತಾರೆ ಎಂಬ ಪ್ರಶ್ನೆ ಮೂಡಿದೆ. ಪ್ರಮುಖ ಬ್ಯಾಟ್ಸ್‌ಮನ್‌ಗಳಾದ ಕೊಹ್ಲಿ ಹಾಗೂ ರೋಹಿತ್ ಅನುಪಸ್ಥಿತಿಯಲ್ಲಿ ತಂಡದ ಬ್ಯಾಟಿಂಗ್ ಜವಾಬ್ದಾರಿ ಯಾರು ನಿರ್ವಹಿಸುತ್ತಾರೆ? ಎಂಬ ಪ್ರಶ್ನೆ ಸಹ ಎದುರಾಗಿದೆ.

ಕಾಡಿದ ಅನುಭವಿಗಳ ಗೈರು

ವಿಂಡೀಸ್ ವಿರುದ್ಧದ ಎರಡನೇ ಪಂದ್ಯದಲ್ಲಿ ಸೋಲು ಕಂಡಿರುವ ಭಾರತದ ಪ್ರದರ್ಶನದ ಮೇಲೆ ಸಾಕ್ಷರತೆ ಚರ್ಚೆ ನಡೆಯುತ್ತಿದೆ. ಈ ನಡುವೆ ತಂಡದ ಬ್ಯಾಟಿಂಗ್ ವಿಭಾಗದ ವೈಫಲ್ಯ, ತಂಡದ ಅನುಭವಿ ಆಟಗಾರರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ಗಾಯದ ಸಮಸ್ಯೆಯಿಂದ ತಂಡದಿಂದ ಹೊರಗುಳಿದಿರುವ ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ ಅವರುಗಳು ವಿಶ್ವಕಪ್ ವೇಳೆಗೆ ತಂಡಕ್ಕೆ ಕಮ್‌ಬ್ಯಾಕ್ ಮಾಡಲೇಬೇಕಾದ ಅನಿವಾರ್ಯತೆ ಎದುರಾಗಿದೆ.

ವಿಶ್ವಕಪ್‌ಗೆ ಸೂರ್ಯ ಡೌಟ್?

ಟಿ20ಯಲ್ಲಿ ಭಾರತದ ಬ್ಯಾಟಿಂಗ್ ಅಸ್ತ್ರವಾಗಿರುವ ಸೂರ್ಯಕುಮಾರ್ ಯಾದವ್, ಏಕದಿನ ಕ್ರಿಕೆಟ್‌ನಲ್ಲಿ ಸತತ ವೈಫಲ್ಯ ‌ಅನುಭವಿಸುತ್ತಲೇ ಇದ್ದಾರೆ. ಏಕದಿನ ತಂಡದಲ್ಲಿ ನಿರಂತರವಾಗಿ ಸ್ಥಾನ ಪಡೆಯುತ್ತಿರುವ ಸೂರ್ಯಕುಮಾರ್, ತಮ್ಮ ಮೇಲಿನ ಎಲ್ಲಾ ನಿರೀಕ್ಷೆಗಳನ್ನ ಹುಸಿಯಾಗಿಸಿದ್ದಾರೆ. ಇವರ ಈ ಪ್ರದರ್ಶನ ಏಕದಿನ ವಿಶ್ವಕಪ್ ಟೂರ್ನಿಗೆ ಇವರಿಗೆ ತಂಡದಲ್ಲಿ ಸ್ಥಾನ ಲಭಿಸುವ ಸಾಧ್ಯತೆಯನ್ನ ಕಡಿಮೆ ಮಾಡುತ್ತಿದೆ.‌ ಈ ಹಿಂದೆ ನ್ಯೂಜಿಲೆಂಡ್‌, ಆಸ್ಟ್ರೇಲಿಯಾ ವಿರುದ್ಧದ ಸರಣಿಗಳಲ್ಲೂ ಬ್ಯಾಟಿಂಗ್ ವೈಫಲ್ಯ ಕಂಡಿದ್ದ ಸೂರ್ಯಕುಮಾರ್, ವಿಂಡೀಸ್ ಸರಣಿಯಲ್ಲೂ ಇದೇ ಪ್ರದರ್ಶನ ನೀಡಿರುವುದು ‌ಆಯ್ಕೆ ಸಮಿತಿಯ ಚಿಂತೆ ಹೆಚ್ಚಿಸಿದೆ.

ಮಾಜಿ ಕ್ರಿಕೆಟ್‌ಗರ ಅಸಮಾಧಾನ

ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಪಂದ್ಯದಲ್ಲಿ ಭಾರತದ ಪ್ರದರ್ಶನದ ಬಗ್ಗೆ ಮಾಜಿ ಕ್ರಿಕೆಟ್‌ಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರಮುಖವಾಗಿ ಮಾಜಿ ಕ್ರಿಕೆಟ್‌ಗ ವೆಂಕಟೇಶ್ ಪ್ರಸಾದ್, ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಭಾರತದ ಪ್ರದರ್ಶನ ಸಾಮಾನ್ಯವಾಗಿದೆ ಎಂದು ಟೀಕಿಸಿದ್ದರೆ. ಎರಡನೇ ಪಂದ್ಯದಿಂದ ರೋಹಿತ್ ಹಾಗೂ ಕೊಹ್ಲಿಗೆ ವಿಶ್ರಾಂತಿ ನೀಡಿದ ನಿರ್ಧಾರವನ್ನ ಮಾಜಿ ಕ್ರಿಕೆಟ್‌ಗ ಆಕಾಶ್ ಚೋಪ್ರಾ ಪ್ರಶ್ನಿಸಿದ್ದಾರೆ.

More News