BJP State President Race: ಬಿಜೆಪಿಯಲ್ಲಿ ಯಾವುದೂ ಶಾಶ್ವತವಲ್ಲ, ಯಾವಾಗ- ಯಾರು ಸೂಕ್ತ ಎಂಬುದನ್ನ ಪಕ್ಷ ನಿರ್ಧರಿಸುತ್ತೆ: ಸಿಟಿ ರವಿ

ಚಿಕ್ಕಮಗಳೂರು: ರಾಜ್ಯ ಬಿಜೆಪಿ ಅಧ್ಯಕ್ಷ ರ ರೇಸ್ ರಂಗೇರುತ್ತಿದೆ. ಸಿಟಿ ರವಿ ರಾಜ್ಯಾಧ್ಯಕ್ಷ, ಯತ್ನಾಳ್ ವಿಪಕ್ಷ ನಾಯಕ ಎಂಬ ಹೆಚ್ ಡಿ ದೇವೇಗೌಡ ಭವಿಷ್ಯ ದ ಬೆನ್ನಲ್ಲೇ ರಾಷ್ಟ್ರೀಯ ಕಾರ್ಯದರ್ಶಿ ಹುದ್ದೆಯಿಂದ ಸಿಟಿ ರವಿಗೆ ಕೋಕ್ ನೀಡಿದ್ದು, ಬಿಜೆಪಿಯಲ್ಲಿ ಅಧ್ಯಕ್ಷನ ಆಯ್ಕೆ ಕಸರತ್ತು ನಡೆಯುತ್ತಿದೆ.

ಏನ್ ಸರ್.. ಕೇಸರಿ ಪಡೆಯ ದಂಡನಾಯಕ ನೀವೇನಾ ಎಂಬ ಪ್ರಶ್ನೆಗೆ ಚಿಕ್ಕಮಗಳೂರಿನಲ್ಲಿ ಮಾತನಾಡಿದ ಸಿಟಿ ರವಿ, ಯಾವಾಗ ಯಾರು ಸೂಕ್ತ ಅನ್ನೋದನ್ನ ವರಿಷ್ಠರು ತೀರ್ಮಾನಿಸ್ತಾರೆ. ಬಿಜೆಪಿಯಲ್ಲಿ ಯಾವುದೂ ಶಾಶ್ವತವಲ್ಲ, ಯಾವಾಗ-ಯಾರೂ ಸೂಕ್ತ ಅನ್ನೋದನ್ನ ಪಕ್ಷ ನಿರ್ಧರಿಸುತ್ತೆ
ರಾಜ್ಯಾಧ್ಯಕ್ಷ ಹುದ್ದೆಗೆ ರೇಸ್ ಅಂತ ಕಾಂಪಿಟೇಶನ್ ಇಟ್ಟಿಲ್ಲ . ರೇಸ್ ಪ್ರಶ್ನೆ ಇಲ್ಲ, ಕಾಂಪಿಟೇಶನ್ ಇದ್ದಾಗ ರೇಸ್‍ನಲ್ಲಿ ಇರಬೇಕಾಗುತ್ತೆ. ರೇಸ್‍ನಲ್ಲಿದ್ದಾರೆಂದು ಭಾವಿಸಬೇಡಿ, ನಾನು ರೇಸ್‍ನಲ್ಲಿ ಇಲ್ಲ ಎಂದರು.

ನಮ್ಮ ಸಹಜ ಚಟುವಟಿಕೆಗಳನ್ನು ಕುತೂಹಲದ ರೀತಿ ತೋರಿಸುತ್ತೀರಾ, ನನಗದು ಇಷ್ಟವಿಲ್ಲ. ಅದೊಂದು ಜವಾಬ್ದಾರಿ ಅಷ್ಟೇ, ಅದನ್ನ ಯಾರೂ ಕೇಳಿ ಪಡೆಯಬಾರದು. ದೆಹಲಿ ಜವಾಬ್ದಾರಿ ಮುಗಿದಿದೆ, ಮೀಟಿಂಗ್ ಇದ್ದಾಗಷ್ಟೆ ದೆಹಲಿಯಲ್ಲಿ ಇರ್ತಿದ್ದೆ. ಉಳಿದಂತೆ ಜವಾಬ್ದಾರಿ ನೀಡಿದ್ದ ರಾಜ್ಯದಲ್ಲಿ ಪ್ರವಾಸ ಮಾಡುತ್ತಿದ್ದೆ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಪಕ್ಷ ಮುಕ್ತನನ್ನಾಗಿಸಿದೆ. ಈಗ ದೆಹಲಿಯಲ್ಲಿ ಯಾವುದೇ ಕೆಲಸ ಇಲ್ಲ, ಆಫೀಸ್ ಕ್ಲೋಸ್ ಮಾಡೋದಷ್ಟೆ ಬಾಕಿ ಇದೆ ಎಂದು ತಿಳಿಸಿದರು.

ಇದೇ ವೇಳೆ ಕಾಂಗ್ರೆಸ್ ಸರ್ಕಾರದ ದರ ಏರಿಕೆ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಹಾಲಿನ ದರ, ಅಬಕಾರಿ ಸುಂಕ ಏರಿಕೆ ಮಾಡಿದ್ದಾರೆ. ಹೋಟೆಲ್ ತಿಂಡಿ ದರ ಒಳಗೊಂಡು ಏರಿಕೆ ಪರ್ವ ಕಾಣುತ್ತಿದೆ. ಬೆಲೆ ಏರಿಕೆಯ ಬರೆ ಎಳೆಯಿರಿ ಎಂದು ರಾಜ್ಯದ ಜನ ಅಧಿಕಾರ ಕೊಟ್ಟಿಲ್ಲ. ರಾಜ್ಯದ ಜನ ಅಧಿಕಾರ ಕೊಟ್ಟಿದ್ದು ನೀವು ಕೊಟ್ಟ ಗ್ಯಾರಂಟಿ ನಂಬಿ. ಬೆಲೆ ಏರಿಕೆಯ ಬರೆ ಎಳೆಯುತ್ತಾರೆ ಅಂತ ಯಾರು ಊಹಿಸಿರಲಿಲ್ಲ ಎಂದು ದೂರಿದರು.

ಚುನಾವಣೆ ವೇಳೆ ಅಮಿತ್ ಶಾ ಹೇಳಿಕೆಯನ್ನ ತಪ್ಪಾಗಿ ವ್ಯಾಪಕ ಪ್ರಚಾರ ಮಾಡಿದ್ರು. ಅಮುಲ್ ಮತ್ತು ನಂದಿನಿ ತಾಂತ್ರಿಕ ಸಹಕಾರ ಪಡೆದು ಕೆಲಸ ಮಾಡಬೇಕು. ರೈತರಿಗೆ ಸಹಾಯ ಮಾಡುವ ಸದುದ್ದೇಶದಿಂದ ಅಮಿತ್ ಶಾ ಸಲಹೆ ನೀಡಿದ್ರು. ಇಡೀ ರಾಜ್ಯದಲ್ಲಿ ತಪ್ಪು ಅರ್ಥ ಬರುವ ರೀತಿ ಬಿಂಬಿಸುವ ಕೆಲಸ ಮಾಡಿದ್ರು. ತಿರುಪತಿಗೆ ನಂದಿನಿ ತುಪ್ಪ 50 ವರ್ಷದಿಂದ ಸರಬರಾಜು ಆಗುತ್ತಿದೆ. ಚುನಾವಣೆ ಮುಗಿದ ಮೇಲೆ ತಿರುಪತಿಗೆ ನಂದಿನಿತುಪ್ಪ ಸರಬರಾಜು ನಿಲ್ಲಿಸಲಾಗಿದೆ ಎಂದು ಕೇಳಿ ದುಃಖವಾಗಿದೆ. ತಿರುಪತಿ ಪ್ರಸಾದದೊಂದಿಗೆ ನಮ್ಮ ರಾಜ್ಯದ ನಂದಿನಿ ತುಪ್ಪ ಸೇರುತ್ತೆ ಅನ್ನುವುದೇ ಹೆಮ್ಮೆ ಸಂಗತಿ. ಟಿ.ಟಿ.ಡಿ‌ ನಮ್ಮ ದೊಡ್ಡ ಕಸ್ಟಮರ್ ಅವರನ್ನು ಕಳೆದುಕೊಳ್ಳಬಾರದು. ಕೆ.ಎಂ.ಎಫ್. ಅಧ್ಯಕ್ಷರು, ಸಹಕಾರ ಸಚಿವರು, ಶಾಸಕ ಭೀಮ ನಾಯಕ್ ಪ್ರತಿಷ್ಠೆ ಬಿಟ್ಟು ಮಾತನಾಡಬೇಕು. 50 ವರ್ಷದ ವ್ಯವಹಾರಿಕ ಸಂಬಂಧವನ್ನು ಮುಂದುವರಿಸಬೇಕು. ಸಲಹೆ ಸ್ವೀಕಾರ ಮಾಡದೆ ಇದ್ರೆ ಹಾಲು ಉತ್ಪಾದಕರಿಗೆ ನಷ್ಟವಾಗುತ್ತೆ ಎಂದು ಸಲಹೆ ನೀಡಿದರು.

More News