ಬೆಂಗಳೂರು: ಸೌಜನ್ಯ ಕೊಲೆ ಪ್ರಕರಣದ ತನಿಖೆ ಬಗ್ಗೆ ಯಾವುದೇ ಯೋಚನೆ ಮಾಡಿಲ್ಲ. ಮುಖ್ಯಮಂತ್ರಿಗಳಿಂದಲೂ ನನಗೆ ಯಾವುದೇ ಸೂಚನೆ ಬಂದಿಲ್ಲ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದರು.
ಸೌಜನ್ಯ ಹತ್ಯೆ ಪ್ರಕರಣ ಮರು ತನಿಖೆ ಒತ್ತಾಯದ ವಿಚಾರದ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮತ್ತೆ ಸೌಜನ್ಯ ಕೊಲೆ ಪ್ರಕರಣದ ತನಿಖೆ ಬಗ್ಗೆ ಯಾವುದೇ ಯೋಚನೆ ಮಾಡಿಲ್ಲ. ಸದ್ಯಕ್ಕೆ ಅಂತಹ ಯೋಚನೆ ನಮ್ಮ ಮುಂದೆ ಇಲ್ಲ.ಮುಖ್ಯಮಂತ್ರಿಗಳಿಂದಲೂ ನನಗೆ ಯಾವುದೇ ಸೂಚನೆ ಬಂದಿಲ್ಲ ಎಂದು ಪರೋಕ್ಷವಾಗಿ ಸೌಜನ್ಯ ಕೊಲೆ ಕೇಸ್ ಮರು ತನಿಖೆ ಇಲ್ಲ ಎಂದು ತಿಳಿಸಿದರು.
“ನೈತಿಕ ಪೊಲೀಸ್ ನಿಯಂತ್ರಣಕ್ಕೆ ಪ್ರತ್ಯೇಕ ವಿಂಗ್ ಸ್ಥಾಪನೆ”

ಮಂಗಳೂರಿನಲ್ಲಿ ನಡೆದ ನೈತಿಕ ಪೊಲೀಸ್ ಗಿರಿ ಪ್ರಕರಣ ವಿಚಾರದ ಕುರಿತು ಮಾತನಾಡಿದ ಅವರು, ನೈತಿಕ ಪೊಲೀಸ್ ಗಿರಿ ನಿಯಂತ್ರಣಕ್ಕೆ ಕಠಿಣ ಕ್ರಮ ತೆಗೆದುಕೊಂಡಿದ್ದೇವೆ. ನೈತಿಕ ಪೊಲೀಸ್ ನಿಯಂತ್ರಣ ಮಾಡಲು ಪ್ರತ್ಯೇಕ ವಿಂಗ್ ಸ್ಥಾಪನೆ ಮಾಡಿದ್ದೇವೆ.
ಆ ವಿಂಗ್ ಪರಿಣಾಮಕಾರಿಯಾಗಿ ಕೆಲಸ ಮಾಡ್ತಿದೆ.
ಅದು ಮಾಡಿದ ಕೂಡಲೇ ತಕ್ಷಣ ನಿಲ್ಲುತ್ತದೆ ಅಂತ ಅಲ್ಲ.
ನಾವು ಕಠಿಣವಾಗಿ ಇಂತಹ ಪ್ರಕರಣ ಆಗಬಾರದು ಅಂತ ಸೂಚನೆ ನೀಡಿದ್ದೇವೆ. ಯಾವುದೇ ಧರ್ಮದವರು ಇದ್ದರೂ ಅವರ ವಿರುದ್ಧ ಕ್ರಮ ಆಗಬೇಕು. ಕಾನೂನು ಕೈಗೆ ಎತ್ತಿಕೊಳ್ಳೋ ಕೆಲಸ ಮಾಡಬಾರದು ಅಂತ ಸೂಚನೆ ನೀಡಿದ್ದೇವೆ. ಯಾರೇ ಇದರಲ್ಲಿ ಭಾಗಿಯಾಗಿದ್ದರು ಕಾನೂನಿನ ಪ್ರಕಾರ ಕ್ರಮ ಆಗಲಿದೆ ಎಂದರು.
ಸಿಎಂ ಜೊತೆ ರಹಸ್ಯ ಮಾತುಕತೆ ವಿಚಾರದ ಕುರಿತು ಮಾತನಾಡಿದ ಅವರು, ಹೌದು ಸಿಎಂ ಜತೆಗೆ ಕುಳಿತು ರಹಸ್ಯವಾಗಿಯೇ ಮಾತನಾಡಿದ್ದೇವೆ. ವರ್ಗಾವಣೆ ವಿಚಾರವನ್ನು ಬೀದಿಯಲ್ಲಿ ಕುಳಿತು ಮಾತನಾಡುವುದಕ್ಕೆ ಸಾಧ್ಯಾನಾ ? ವರ್ಗಾವಣೆ ವಿಚಾರವಾಗಿ ರಹಸ್ಯವಾಗಿಯೇ ಮಾತನಾಡಿದ್ದೇನೆ.ಈ ಹಿಂದೆಯೂ ಮಾತನಾಡಿದ್ದೇವೆ ಮುಂದೆಯೂ ರಹಸ್ಯವಾಗಿಯೇ ಮಾತನಾಡ್ತೇವೆ. ಇಂಥ ವಿಚಾರಗಳನ್ನು ಬೀದಿಯಲ್ಲಿ ಕುಳಿತು ಮಾತನಾಡುವುದಕ್ಕೆ ಆಗುತ್ತಾ? ಎಂದು ಪ್ರಶ್ನೆ ಹಾಕಿದರು.

ಉಡುಪಿ ಕಾಲೇಜು ಪ್ರಕರಣ ನ್ಯಾಯಾಂಗ ತನಿಖೆಗೆ ಬಿಜೆಪಿ ಆಗ್ರಹ ವಿಚಾರದ ಕುರಿತು ಮಾತನಾಡಿದ ಜಿ.ಪರಮೇಶ್ವರ್,
ಬಿಜೆಪಿ ಅವರು ವಿರೋಧ ಪಕ್ಷದಲ್ಲಿ ಇದ್ದಾರೆ. ಅವರು ಒತ್ತಾಯ ಮಾಡಲೇಬೇಕು. ಅವರು ಹೇಳಿದ್ರು ಅಂತ ನಾವು ಅದನ್ನ ಕೇಳಬೇಕು ಅಂತ ಏನು ಇಲ್ಲ. ಅವರು ಬೇಕಾದ್ರೆ ರಚನಾತ್ಮಕವಾಗಿ ಸಲಹೆ ಕೊಟ್ಟರೆ ಪರವಾಗಿಲ್ಲ.
ಅದು ಬಿಟ್ಟು ಪ್ರತಿಭಟನೆ ಮಾಡಿದ್ರೆ ಅವರು ಪ್ರತಿಭಟನೆ ಮಾಡಲಿ. ಅವರ ಪಕ್ಷದ ಖುಷ್ಬು ಅವರೇ ಹೇಳಿದ ಮೇಲೂ ಅವರು ನಂಬಲಿಲ್ಲ ಅಂದ್ರೆ ಹೇಗೆ? ಎಂದು ಕುಟುಕಿದರು.
ದೆಹಲಿ ಭೇಟಿ ವಿಚಾರದ ಕುರಿತು ಮಾತನಾಡಿದ ಅವರು, ಏನು ಅಜೆಂಡಾ ಇದೆ ಗೊತ್ತಿಲ್ಲ. ಈ ಹಿಂದೆ ನಾಯಕರುಗಳು ಇಲ್ಲಿಗೇ ಬರುತ್ತಿದ್ದರು. ಕೆಲವೊಮ್ಮೆ ನಮ್ಮನ್ನು ಕರೆಸಿಕೊಳ್ಳುತ್ತಿದ್ದರು. ಗುಲಾಂ ನಬಿ ಆಜಾದ್ ಪ್ರಧಾನ ಕಾರ್ಯದರ್ಶಿಯಾದಾಗ ಅವರೇ ಸಚಿವರ ಜೊತೆಗೆ ಒನ್ ಟು ಒನ್ ಮಾಹಿತಿ ಪಡೆಯುತ್ತಿದ್ದರು. ಲೋಕಸಭೆ ಚುನಾವಣೆ ಸಿದ್ಧತೆಗಳ ಬಗ್ಗೆಯೂ ಚರ್ಚೆ ಆಗಬಹುದು. ಸಚಿವರ ಕಾರ್ಯ ಪರಿಶೀಲನೆ ಬಗ್ಗೆ ನಮಗೆ ಮಾಹಿತಿ ಇಲ್ಲ. ಸಮನ್ವಯ ಸಮಿತಿ ರಚನೆ ವಿಚಾರದಲ್ಲಿ ಏನು ಅಭಿಪ್ರಾಯ ಇದೆಯೋ ಗೊತ್ತಿಲ್ಲ ಎಂದರು.




