ಸೌಜನ್ಯ ಸಾವಿಗೆ ನ್ಯಾಯ ಬೇಕು ಎಂಬ ಧ್ವನಿಗೆ ನಟ ಕಿಶೋರ್ ಸಾಥ್ ನೀಡಿದ್ದಾರೆ. ಎಲ್ಲೇ ಮಹಿಳೆ ವಿರುದ್ಧ ದಾಳಿ ನಡೆದರೂ, ಸಮಾಜದ ಸ್ವಾಸ್ಥ್ಯ ಕಾಪಾಡಲು ಎಲ್ಲರೂ ಧ್ವನಿ ಎತ್ತಬೇಕು ಎಂದು ಕಾಂತಾರ ನಟ ಹೇಳಿಕೆ ನೀಡಿದ್ದಾರೆ.
ಈ ಮೊದಲು ಮಣಿಪುರ ಮಹಿಳೆ ದಾಳಿ ಖಂಡಿಸಿ ಮಾತನಾಡಿದ್ದ ಕಿಶೋರ್, ಸೌಜನ್ಯ ಕೇಸ್ ಪರವೂ ಮಾತನಾಡಿದ್ದಾರೆ. ಈ ಕುರಿತು ನಗರದಲ್ಲಿ ಮಾತನಾಡಿದ ನಟ ಕಿಶೋರ್, ಸೌಜನ್ಯ ಕೇಸ್ ಗೆ ನ್ಯಾಯ ಸಿಗ್ಲಿ ಎಂಬ ಕಾರಣಕ್ಕೆ ಸಾಕಷ್ಟು ಪ್ರತಿಭಟನೆ ನಡೆಯುತ್ತಿದೆ. ಹೋರಾಟ ನಡೆಯುತ್ತಿದೆ. ಈ ರೀತಿಯ ಅನ್ಯಾಯದ ವಿರುದ್ಧ ಯಾವತ್ತೂ ನನ್ನ ಮನಸ್ಸು ಮಿಡಿಯುತ್ತೆ. ಈ ಬಾಲಕಿ ಅತ್ಯಾಚಾರ ಪ್ರಕರಣ ಮೂಲಕ ಈ ವಿಚಾರವನ್ನ ಮುನ್ನೆಲೆಗೆ ತರೋದು ಬಹಳ ಮುಖ್ಯ. ಇಷ್ಯು ಮಾಡ್ತಾ ಮಾಡ್ತಾನೇ ಜನರಿಗೆ ಒಂದು ಅವೇರ್ ನೆಸ್ ಬರುತ್ತೆ. ಸ್ವಸ್ಥ ಸಮಾಜದ ನಿರ್ಮಾಣದ ಕೆಲಸ ಮಾಡ್ಬೇಕಿರೋದು ಬಹಳ ಮುಖ್ಯ. ಸೌಜನ್ಯ ರೀತಿಯ ಸಾವಿರಾರು ಕೇಸ್ ಇದೆ. ಮೊನ್ನೆ ಅಷ್ಟೇ ಲಕ್ಷಾಂತರ ಮಟ್ಟದಲ್ಲಿ ಹೆಣ್ಮಕ್ಳು ಕಾಣೆಯಾಗಿದ್ದಾರೆ ಎಂದು ಸುದ್ದಿ ಆಗಿದೆ. ಆದ್ರೆ ಏನಾಗ್ತಿದೆ ಇಲ್ಲಿ..!? ಎಂದು ಪ್ರಶ್ನಿಸಿದರು.

ನಾವಿಷ್ಟು ಪುರಾತನ ಕಲ್ಚರ್ ಅಂತ ಹೇಳ್ಕೊಳ್ತೀವಿ. ಎಲ್ಲದಕ್ಕೂ ಗುರು ನಾವೇ ಅಂತ ಹೇಳ್ಕೊಳ್ತೀವಿ.ಎಲ್ಲವೂ ನಮ್ಮಲ್ಲೇ ಹುಟ್ಕೊಂಡಿದ್ದೆಂದು ಹೇಳ್ಕೊಳ್ತೀವಿ. ಬುದ್ದ ಗಾಂಧಿ ಹುಟ್ಟಿದ ನಾಡಿದು. ಗಾಂಧಿ ಪೂರ್ತಿ ಜಗತ್ತಿಗೇ ಶಾಂತಿ ಹೇಳ್ದವ್ರು ನಾವ್ ಯಾಕೆ ಹೀಗೆ ಆಗಿದ್ದೀವಿ ಇವತ್ತು..?
ಎಂದು ಬೇಸರ ಗೊಂಡರು.
ಸಾವಿನ ಮೇಲೆ ರಾಜಕೀಯ ವಿಚಾರದ ಕುರಿತು ಮಾತನಾಡಿದ ಅವರು, ರಾಜಕೀಯ ನಾಯಕರು ಅವರ ಕೆಲಸದ ಬಗ್ಗೆ ಮಾತಾಡಲಿ. ಲೀಡರ್ ಅಂತ ಬಂದಾಗ ಜನಗಳನ್ನ ಮುನ್ನಡೆಸೋ ಜವಾಬ್ದಾರಿ ಹೆಗಲ ಮೇಲೆ ಇರುತ್ತೆ.ಅವ್ರು ಜನರನ್ನ ಪ್ರೀತಿಯಿಂದ ಒಗ್ಗೂಡಿಸಿಕೊಂಡು ನಡೆಸಬೇಕೇ ಹೊರತು. ಅವರನ್ನು ಹೊಡ್ದಾಕಿ, ಗಲಾಟೆ ಮಾಡ್ಸಿ, ಅವರ ಮಧ್ಯೆ ಕಲಹ ಸೃಷ್ಟಿಸಿ, ಒಬ್ಬರನ್ನೊಬ್ಬರು ಸಾಯಿಸುವ ಮಟ್ಟಕ್ಕೆ ತಂದಿರೋದು ತುಂಬಾನೇ ಅಕ್ಷಮ್ಯ ಅಪರಾಧ. ಇತ್ತೀಚೆಗೆ ಒಂದಷ್ಟು ಸೆನ್ಸಿಬಲ್ ರಾಜಕೀಯ ನಾಯಕರು ಬರ್ತಿದ್ದಾರೆ. ಭರವಸೆ ಇದೆ. ಆದ್ರೆ ಯಾರದೋ ಸಾವಿನ ಮೇಲೆ ರಾಜಕೀಯ ಮಾಡೋದು ತೀರ ಕೆಳ ಮಟ್ಟದ ರಾಜಕೀಯ ಎಂದು ದೂರಿದರು.