ಕೋರ್ಟ್ ಗೆ ಹೋಗ್ಬೇಕಂದ್ರೂ ಕೊಡ್ಬೇಕು ಲಂಚ. ಲಂಚ ಕೊಟ್ರೆ ಒಳ್ಳೆ ರೂಂ ಟಿವಿ ಫೆಸಿಲಿಟಿ.. ಹಣ ಕೊಡದಿದ್ರೆ ಜೈಲಿನ ಸಿಬ್ಬಂದಿ ಯಿಂದಲೇ ಹಲ್ಲೆ.. ಅಬ್ಬಬ್ಬಾ.. ಒಂದಾ ಎರಡಾ..? ಹಿಂಡಲಗಾ ಜೈಲಿನ ಕರ್ಮಕಾಂಡ ದಿನಕ್ಕೊಂದು ಹೊರ ಬೀಳ್ತಿದೆ.
ತಪ್ಪಿತಸ್ಥರಿಗೆ ಶಿಕ್ಷೆ ಆಗ್ಬೇಕು. ಆ ಮೂಲಕ ಸಮಾಜದಲ್ಲಿ ಅವರನ್ನ ಒಳ್ಳೆ ನಾಗರಿಕರನ್ನಾಗಿ ಪರಿವರ್ತಿಸಬೇಕೆಂದು ಕಳಿಸುವ ಕೇಂದ್ರವೇ ರಕ್ಕಸರ ತಯಾರಿಕಾ ಸಂಸ್ಥೆಯಾಗಿ ಪರಿವರ್ತನೆಯಾಗಿಬಿಟ್ಟರೆ ಹೇಗೆ..!? ಕೈದಿಯೋರ್ವನ ಮೇಲೆ ಮತ್ತೊಬ್ಬ ಕೈದಿ ಮಾರಣಾಂತಿಕ ಹಲ್ಲೆ ಮಾಡಲು ಮುಂದಾದ ಘಟನೆ ಬೆನ್ನಲ್ಲೇ ಹಿಂಡಲಗಾ ಜೈಲಿನ ಒಂದೊಂದೇ ಕರಾಳ ಮುಖ ಬೀದಿಗೆ ಬರ್ತಿದೆ.

ಈ ಬಗ್ಗೆ ಖಾಸಗಿ ವಾಹಿನಿಗೆ ಮಾತನಾಡಿದ ಹಲ್ಲೆಗೆ ಒಳಗಾದ ಕೈದಿ ಸುರೇಶ್ ಸಹೋದರಿ ಶಶಿಕಲಾ, ಸುಮ್ಮನೆ ಸೆಲ್ ಒಳಗೆ ಕೂತ ಮನ್ಷನಿಗೆ ಕಣ್ಣಿಗೆ ಕಾರದ ಪುಡಿ ಎರಚಿ ಹಲ್ಲೆಗೆ ಮುಂದಾಗ್ತಾರೆ ಅದೂ ಜೈಲಲ್ಲಿ ಅಂದ್ರೆ ಏನರ್ಥ..? ಕೇಳಿದ್ರೆ ಹುಚ್ಚ ಅಂತಾರೆ. ಹುಚ್ಚ ನ್ನ ಓಡಾಡೋಕೆ ಬಿಟ್ಟು, ಇವ್ರನ್ನ ಸೆಲ್ ಒಳಗೆ ಕೂಡಾಕ್ತಾರಾ..? ಭೇಟಿ ಕೊಡುವ ಪ್ರತೀ ಬಾರಿಯೂ ಹೇಳ್ತಿದ್ದ. ನನ್ನ ಜೀವಕ್ಕೆ ಭಯ ಇದೆ ಇಲ್ಲಿ. ತುಂಬಾ ಟಾರ್ಚರ್ ಕೊಡ್ತಿದ್ದಾರೆ. ಜೈಲಿನ ಎಲ್ಲಾ ಅವ್ಯವಹಾರದ ವೀಡಿಯೋ ನನ್ನ ಬಳಿ ಇದೆ. ಬಿಡುಗಡೆ ಮಾಡ್ತೇನೆ ಎಂದರು.
ಬೇಸಿಕ್ ಮೊಬೈಲ್ ಸೆಟ್ ಗೆ 10 ಸಾವಿರಕ್ಕೆ, ಆ್ಯಂಡ್ರಾಯ್ಡ್ 20 ಸಾವಿರಕ್ಕೆ ಮಾರಾಟ ಮಾಡ್ತಾರೆ. ಹಣ ಇರೋ ಕೈದಿಯನ್ನ ಒಂದು ರೀತಿ ನೋಡೋದು, ಹಣ ಇಲ್ಲದ ಕೈದಿಯನ್ನೇ ಬೇರೆ ರೀತಿ ನಡೆಸಿಕೊಳ್ಳೋದು.. ಹಣ ಇರವ್ರಿಗೆ ಒಳ್ಳೆ ರೂಂ ಮತ್ತು ಟಿವಿ ವ್ಯವಸ್ಥೆ ಮಾಡಿಕೊಡ್ತಾರೆ. ಹಣ ಇಲ್ಲದವರ ಮೇಲೆ ಸಿಬ್ಬಂದಿ ಯಿಂದಲೇ ಬೇಕು ಬೇಕಂತಲೇ ಹಲ್ಲೆ ಮಾಡಲಾಗುತ್ತೆ. ಇಲ್ಲದಿದ್ರೆ ಸಹ ಕೈದಿಯಿಂದ ಹಲ್ಲೆ ಮಾಡಿಸಲಾಗುತ್ತೆ ಎಂದು ದೂರಿದ್ದಾರೆ.

ನನ್ನ ಸಹೋದರ ಕೂಡ ಹಿಂಸೆ ತಡೆಯಲಾರದೆ ನಮ್ಮಿಂದ ಹಣ ಪಡೆದು ಜೈಲಿನ ಸಿಬ್ಬಂದಿಗೆ ಕೊಟ್ಟಿದ್ದಾನೆ. ಜಾಮೀನಿಗೆ ಕೋರ್ಟ್ ಗೆ ಕರ್ಕೊಂಡ್ ಹೋಗ್ಬೇಕಂದ್ರೂ ಹಣ ಬೇಕು ಎಂದು ಜೈಲರ್ ಗಳಿಂದ ಒತ್ತಾಯ ಬೆನ್ನಲ್ಲೇ ನೇರವಾಗಿ ಜೈಲರ್ ಮೊಬೈಲ್ ಗೆ ಹಣ ಕಳಿಸಿದ ಬಗ್ಗೆ ಖಾಸಗಿ ವಾಹಿನಿ ಜೊತೆಗಿನ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಪ್ರತೀ ಬಾರಿ ಕೋರ್ಟ್ ಗೆ ಕರೆದುಕೊಂಡು ಬರುವಾಗಲೂ 5 ರಿಂದ 6 ಸಾವಿರ ಬೇಡಿಕೆ ಇಡುತ್ತಾರೆ. ಸುಮಾರು ಐದಾರು ಬಾರಿ ನಾವು ಜೈಲರ್ ಗಳಿಗೆ ಹಣ ವರ್ಗಾವಣೆ ಮಾಡಿದ್ದೇವೆ ಎಂದು ತಿಳಿಸಿದ್ದು, ಹಿಂಡಲಗಾ ಜೈಲಿನ ಕರ್ಮಕಾಂಡ ಹೊರ ಬಿದ್ದಿದೆ.