Derogatory statement against Kharge: ಖರ್ಗೆ ವಿರುದ್ಧ ಅವಹೇಳನಕಾರಿ ಹೇಳಿಕೆ: ಅರಗ ಜ್ಞಾನೇಂದ್ರ ನೇರವಾಗಿ ಕ್ಷಮೆ ಕೇಳಬೇಕು ಇಲ್ಲದಿದ್ದರೆ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲು: ಕಿಮ್ಮನೆ ರತ್ನಾಕರ್‌

ಬೆಂಗಳೂರು : ಗೃಹಸಚಿವರಾಗಿ, ಎಂಪಿಎಂ ಅಧ್ಯಕ್ಷರಾಗಿ ಮತ್ತು ಅನೇಕ ಜವಾಬ್ದಾರಿಯುತ ಸ್ಥಾನಗಳನ್ನು ಅರಗ ಜ್ಞಾನೇಂದ್ರ ಅವರು ನಿಭಾಯಿಸಿದ್ದಾರೆ. ಇಂತಹ ವ್ಯಕ್ತಿ ಬಾಯಿ ತಪ್ಪಿನಿಂದ ಹೇಳಿದೆ, ಕಣ್ತಪ್ಪಿನಿಂದ ಹೇಳಿದೆ ಎನ್ನುವ ವಯಸ್ಸು ಅಲ್ಲ, ಜ್ಞಾನವೂ ಅಲ್ಲ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯ ಯಾವುದೇ ನಾಯಕರು ಅರಗ ಜ್ಞಾನೇಂದ್ರ ಅವರ ಈ ಹೇಳಿಕೆಯನ್ನು ಏಕೆ ಖಂಡಿಸುತ್ತಿಲ್ಲ, ಅವರ ಮನಸ್ಸಿನಲ್ಲಿಯೂ ಅದೇ ಆಲೋಚನೆ ಇದೆಯೇ? ಮೋದಿಯವರು ಸಹ ಇದೇ ಮನಸ್ಥಿತಿ ಹೊಂದಿರುವವರೆ, ಏಕೆಂದರೆ ಅವರ ಸಂಪುಟದ ಅನೇಕ ಸದಸ್ಯರು ಈ ತರಹದ ಹೇಳಿಕೆ ನೀಡಿದಾಗಲೂ ಸುಮ್ಮನಿದ್ದಾರೆ. ಅನಂತಕುಮಾರ್‌ ಹೆಗಡೆ “ನಾವು ಸಂವಿಧಾನ ಬದಲಾಯಿಸಲು ಬಂದಿದ್ದೇವೆ ಹೇಳಿಕೆಯಿಂದ ಹಿಡಿದು ಯತ್ನಾಳರ ತನಕ ಇಂತಹ ಸಂವಿಧಾನ ವಿರೋಧಿ ಹೇಳಿಕೆ ನೀಡಿದರು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಆರೋಪಿಸಿದರು.
ಅರಗ ಜ್ಞಾನೇಂದ್ರ ಅವರು ಕ್ಷಮೆ ಕೇಳಿ ಉಪಯೋಗವಿಲ್ಲ, ಅವರಿಂದ ರಾಜಿನಾಮೆ ಪಡೆಯಬೇಕು. ಖರ್ಗೆಯವರ ಹಾಗೂ ಈಶ್ವರ ಖಂಡ್ರೆ ಅವರ ಬಗ್ಗೆ ಹಗುರವಾಗಿ ಮಾತನಾಡಿರುವದರ ಜೊತೆಗೆ ಬಣ್ಣವೂ ಸೇರಿಕೊಂಡಿದೆ, ಇದಕ್ಕಿಂತ ದೊಡ್ಡ ಅಪರಾಧ ಇನ್ನಿಲ್ಲ. ಮನುಷ್ಯನ ಬಣ್ಣದ ಬಗ್ಗೆ ಮಾತನಾಡಿರುವುದು ಘೋರ ಅಪರಾಧ ಎಂದರು.
ಅರಗ ಅವರು “ನಾನು ಖರ್ಗೆಯವರ ಹೆಸರು ತೆಗೆದುಕೊಂಡಿಲ್ಲ ಎಂದು ಸುಳ್ಳು ಹೇಳಿದ್ದಾರೆ. ಸ್ಪೀಕರ್‌ಗೆ ದೂರು ಸಲ್ಲಿಸಲಾಗುವುದು, ಕೋರ್ಟಿಗೂ ಹೋಗಲಾಗುವುದು, ನಂದಿತಾ ಅವರ ಕೇಸಿನಲ್ಲೂ ಅತ್ಯಾಚಾರ ಎಂದು ಸುಳ್ಳು ಬಿಂಬಿಸಿದವರು ಅರಗ, ಪೊಲೀಸರನ್ನು ನಾಯಿಗಳು ಎಂದವರು, ಹೆಣ್ಣು ಮಕ್ಕಳು 7 ಗಂಟೆ ನಂತರ ಏಕೆ ಓಡಾಡಬೇಕು ಎಂದಂತಹ ವ್ಯಕ್ತಿ ಇವರು. ಖರ್ಗೆಯವರ ವಿಚಾರದಲ್ಲಿ ಕೇವಲ ವಿಷಾದ ವ್ಯಕ್ತಪಡಿಸುವುದು ಬೇಕಿಲ್ಲ, ನೇರವಾಗಿ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಬೃಹತ್‌ ಪತ್ರಿಭಟನೆ ಹಾಗೂ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದರು.
ಅರಗ ಜ್ಞಾನೇಂದ್ರ ಅವರು ತೀರ್ಥಹಳ್ಳಿಗೆ ಕಳಂಕ, ಕುವೆಂಪು ಅವರು, ಅನಂತಮೂರ್ತಿ, ಗೋಪಾಲಗೌಡರು, ಬದ್ರಿನಾರಾಯಣ್‌ ಅವರಂತಹ ಸಂಸದೀಯ ಪಟುಗಳು ಗೆದ್ದುಬಂದಂತಹ ಕ್ಷೇತ್ರ ಇಂತಹ ಕ್ಷೇತ್ರಕ್ಕೆ ಅವಮಾನ ಮಾಡುತ್ತಿದ್ದಾರೆ.
ಕಸ್ತೂರಿ ರಂಗನ್‌ ವಿಚಾರಕ್ಕೆ ರಾಷ್ಟ್ರಮಟ್ಟದಲ್ಲಿ ಬಿಜೆಪಿಯವರೇ ಒಪ್ಪಿಗೆ ನೀಡಿದ್ದಾರೆ. ನಮ್ಮ ಕಾಂಗ್ರೆಸ್‌ ಸರ್ಕಾರ ಇದಕ್ಕೆ ವಿರೋಧ ಮಾಡಿತ್ತು. ತೀರ್ಥಹಳ್ಳಿಯ ಜನರನ್ನು ಮಂಗ ಮಾಡಲು ಇಲ್ಲಿ ವಿರೋಧ ಮಾಡುವುದು, ಕೇಂದ್ರದಲ್ಲಿ ಒಪ್ಪಿಗೆ ನೀಡುವ ಕಣ್ಣಾಮುಚ್ಚಲೆ ಆಡುತ್ತಿದೆ.

More News

You cannot copy content of this page