ಬೆಂಗಳೂರು : ವಂಚನೆ ಪ್ರಕರಣದಲ್ಲಿ ಆರೋಪಿ ಪತ್ತೆಗೆ ಕೇರಳಾಗೆ ತೆರಳಿದ್ದ ಬೆಂಗಳೂರು ಪೊಲೀಸ್ರು ಎಡವಟ್ಟಿಗೆ ಸಿಲುಕಿದ್ದಾರೆ.
ಮುಖ್ಯ ಆರೋಪಿಯನ್ನ ವಶಕ್ಕಡ ಪಡೆದು ಮತ್ತಿಬ್ಬರು ವ್ಯಕ್ತಿಗಳಿಂದ ಲಂಚಕ್ಕೆ ಬೇಡಿಕೆಯಿಟ್ಟ ಆರೋಪದಡಿ ಬೆಂಗಳೂರಿನ ವೈಟ್ ಫೀಲ್ಡ್ ಸಿಇಎನ್ ಠಾಣೆಯ ಇನ್ಸ್ಪೆಕ್ಟರ್ ಸಹಿತ ನಾಲ್ವರು ಸಿಬ್ಬಂದಿಗಳನ್ನ ಕೇರಳ ಪೊಲೀಸರು ವಶಕ್ಕೆ ಪಡೆದಿದ್ದಾರೆ. 3 ಲಕ್ಷ ರೂ ಲಂಚಕ್ಕೆ ಬೇಡಿಕೆಯಿಟ್ಟ ಆರೋಪದಡಿ ಇನ್ಸ್ಪೆಕ್ಟರ್ ಶಿವಪ್ರಕಾಶ, ಹಾಗೂ ಇಬ್ಬರು ಹೆಡ್ ಕಾನ್ಸ್ಟೇಬಲ್ಸ್ ಸೇರಿ ಮೂವರು ಸಿಬ್ಬಂದಿಯನ್ನ ಕೇರಳದ ಕೊಚ್ಚಿಯ ಕಲಂಸ್ಸೇರಿ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಉದ್ಯೋಗದ ಹೆಸರಿನಲ್ಲಿ 26 ಲಕ್ಷ ರೂ ವಂಚಿಸಲಾಗಿದೆ ಎಂದು ಶ್ರೀಕಾಂತ್ ಎಂಬುವವರು ಜೂನ್ 16ರಂದು ವೈಟ್ ಫೀಲ್ಡ್ ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತನಿಖೆಯ ವೇಳೆ ಹತ್ತು ಸಾವಿರ ರೂ ಮಡಿಕೇರಿ ಮೂಲದ ಐಸಾಕ್ ಎಂಬಾತನ ಖಾತೆಗೆ ವರ್ಗಾವಣೆಯಾಗಿರುವುದು ಪತ್ತೆಯಾಗಿತ್ತು. ಐಸಾಕ್ ನ ವಿಚಾರಣೆ ವೇಳೆ ಬ್ಯಾಂಕ್ ಖಾತೆಯನ್ನ ರಾಜೇಶ್ ಎಂಬಾತನ ಪರವಾಗಿ ತೆರೆಯಲಾಗಿದೆ ಎಂಬುದನ್ನ ತಿಳಿದ ಪೊಲೀಸರು ಆತನ ವಿಚಾರಣೆ ನಡೆಸಿದ್ದರು. ಕೇರಳ ಮೂಲದ ಪರೇಶ್ ಹಾಗೂ ನಿಶಾಂತ್ ಎಂಬಾತನ ಸೂಚನೆಯಂತೆ ಖಾತೆ ತೆರೆಯಲಾಗಿದೆ ಎಂದು ರಾಜೇಶ್ ತಿಳಿಸಿದ್ದ. ಅದರಂತೆ ಪರೇಶ್ ಹಾಗೂ ನಿಶಾಂತ್ ನನ್ನ ವಿಚಾರಿಸಿದಾಗ, ವಂಚನೆಯ ಸೂತ್ರಧಾರ ಮಣಪ್ಪುರಂ ಮೂಲದ ನೌಶಾದ್ ಎಂಬುದು ತಿಳಿದುಬಂದಿತ್ತು.ಜುಲೈ 31ರಂದು ವೈಟ್ ಫೀಲ್ಡ್ ಸಿಇಎನ್ ಠಾಣಾ ಇನ್ಸ್ಪೆಕ್ಟರ್ ಶಿವಪ್ರಕಾಶ್, ಹೆಡ್ ಕಾನ್ಸ್ಟೇಬಲ್ ಗಳಾದ ವಿಜಯ್ ಕುಮಾರ್, ಶಿವಾನಿ, ಕಾನ್ಸ್ಟೇಬಲ್ ಸಂದೇಶ್ ನೇತೃತ್ವದ ತಂಡ ಕೇರಳಕ್ಕೆ ತೆರಳಿತ್ತು. ಅದೇ ದಿನ ವೆಂಗಾರದಲ್ಲಿ ನೌಶಾದ್ ನನ್ನ ವಶಕ್ಕೆ ಪಡೆದಿದ್ದ ತಂಡ, ಬಳಿಕ ನಿಖಿಲ್ ಹಾಗೂ ಅಖಿಲ್ ಎಂಬ ಇನ್ನಿಬ್ಬರು ಶಂಕಿತರನ್ನ ಎರ್ನಾಕುಲಂನ ಪಲ್ಲುರ್ತಿಯಲ್ಲಿ ವಶಕ್ಕೆ ಪಡೆದು ಸ್ಥಳಿಯ ಠಾಣೆಗೆ ಮಾಹಿತಿ ನೀಡಿತ್ತು.
ಆಗಸ್ಟ್ 2ರಂದು ವೈಟ್ ಫೀಲ್ಡ್ ಸಿಇಎನ್ ಪೊಲೀಸರ ತಂಡಕ್ಕೆ ಕರೆ ಮಾಡಿದ್ದ ಕೊಚ್ಚಿಯ ಕಲಂಸ್ಸೇರಿ ಠಾಣಾ ಪೊಲೀಸರು, ಆರೋಪಿ ಅಖಿಲ್ ಪರ ವಕೀಲರು ನೀಡಿದ ದೂರಿನಂತೆ ಆನಿಂದ 3 ಲಕ್ಷಕ್ಕೆ ಬೇಡಿಕೆಯಿಟ್ಟ ಆರೋಪದಡಿ ರಾಜ್ಯ ಪೊಲೀಸ್ ಸಿಬ್ಬಂದಿಗಳನ್ನ ವಶಕ್ಕೆ ಪಡೆದಿದ್ದಾರೆ. ಸದ್ಯ ಕಲಂಸ್ಸೇರಿ ಠಾಣಾ ಪೊಲೀಸರು ತಮ್ಮ ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆಯ ಮಾಹಿತಿಯನ್ನ ಪಡೆಯಲಾಗುತ್ತಿದೆ ಎಂದು ವೈಟ್ ಫೀಲ್ಡ್ ವಿಭಾಗದ ಡಿಸಿಪಿ ಎಸ್.ಗಿರೀಶ್ ತಿಳಿಸಿದ್ದಾರೆ.