ತುಮಕೂರು: ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದ ತುರುವೇಕೆರೆ ಜೆಡಿಎಸ್ ಶಾಸಕ ಎಂ.ಟಿ.ಕೃಷ್ಣಪ್ಪ, ಇದು ಅತ್ಯಂತ ನೀಚ ಸರ್ಕಾರ, ಸಿಎಂ ಸಿದ್ದರಾಮಯ್ಯ ಅವರು ಪುಕ್ಕಟ್ಟೆ ಸಿದ್ದರಾಮಣ್ಣ ಎಂದು ಲೇವಡಿ ಮಾಡಿದ್ದಾರೆ.
ತುಮಕೂರಿನಲ್ಲಿ ಇಂದು ಈ ಹೇಳಿಕೆ ನೀಡಿದ ಅವರು, ಇವರ ತೆವಲಿಗೋಸ್ಕರ ಚುನಾವಣೆ ಸಂದರ್ಭದಲ್ಲಿ ಕೊಟ್ಟ ಮಾತು ಈಗ ಈಡೇರಿಸಿಕೊಳ್ಳುತ್ತಿದ್ದಾರೆ. ಅದು ಮಾಡ್ತೀವಿ ಇದು ಮಾಡ್ತೀವಿ ಅಂತ ಹೇಳಿ ರೈತರ ತಲೆ ಒಡೆಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಲೆ ಏರಿಕೆಯಿಂದ ಜನ ಸಾಮಾನ್ಯರ ಬದುಕು ಮೂರಾಬಟ್ಟೆ ಆಗಿದೆ. ತರಕಾರಿ ಬೆಲೆ ಮಾತನಾಡಿಸೋಕೆ ಆಗೋಲ್ಲ, ಮೆಣಸಿನಕಾಯಿ, ಟೊಮ್ಯಾಟೋ, ಅಕ್ಕಿ ರೇಟ್ ಜಾಸ್ತಿ ಆಗಿದೆ, ಜನರು ತಿನ್ನೋದಾದ್ರು ಏನು ಎಂದು ಪ್ರಶ್ನಿಸಿದ್ದಾರೆ.
ಎಪಿಎಲ್ ಕಾಡ್೯ ಇರೋರೆಲ್ಲಾ ಹಣವಂತರಲ್ಲ, ಬಡವರೂ ಇದ್ದಾರೆ. ಅವರು ಬೆಲೆ ಏರಿಕೆ ನಡುವೆ ಎಲ್ಲಾ ಅಗತ್ಯ ವಸ್ತುಗಳ್ನು ಖರೀದಿ ಮಾಡಿ ಜೀವನ ಮಾಡೋದು ಬಹಳ ಕಷ್ಟ ಇದೆ. ಈ ಸರ್ಕಾರ ಬಂದ ಮೇಲೆ ಮನುಷ್ಯನ ಬದುಕು ಅತ್ಯಂತ ದುಬಾರಿಯಾಗಿದೆ ಜೀವನ ಮಾಡೋಕೆ ಆಗೋಲ್ಲ ಎಂದು ಟಿಕೀಸಿದರು.
ಈ ಸರ್ಕಾರದಲ್ಲಿ ವರ್ಗಾವಣೆ ದಂಧೆ ಜೋರಾಗಿ ನಡೆಯುತ್ತಿದೆ. ಪೇ 40% ಸಿಎಂ ಅಂತಾ ಕಾಂಗ್ರೆಸ್ಸಿಗರು ಹೇಳುತ್ತಿದ್ದರಲ್ಲಾ, ಇದೀಗ 60% ಪೇ ಸಿಎಂ ಅಂತಾ ನಾವು ಹೇಳಬೇಕಾಗುತ್ತೆ ಎಂದು ಕಿಡಿ ಕಾರಿದ್ದಾರೆ. ಸರ್ಕಾರಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿದರು.
ಗೃಹಸಚಿವ ಡಾ.ಜಿ.ಪರಮೇಶ್ವರ್ ರನ್ನು ಹಾಡಿಹೊಗಳಿದ ಎಂ.ಟಿ.ಕೃಷ್ಣಪ್ಪ
ತಮ್ಮದೇ ಜಿಲ್ಲೆಯ ಶಾಸಕರು ಹಾಗೂ ಗೃಹ ಸಚಿವರೂ ಆಗಿರುವ ಡಾ.ಜಿ.ಪರಮೇಶ್ವರ್ ಅವರನ್ನು ಹಾಡಿ ಹೊಗಳಿದ ಎಂ.ಟಿ.ಕೃಷ್ಣಪ್ಪ, ಗೃಹಸಚಿವರನ್ನ ಬಿಟ್ರೆ ಉಳಿದೆಲ್ಲಾ ಖಾತೆಯಲ್ಲೂ ದಂಧೆ ನಡೆಯುತ್ತಿದೆ ಎಂದು ಆರೋಪಿಸಿದರು.
ಗೃಹಸಚಿವರು ಇಂತಹದ್ದಕ್ಕೆಲ್ಲಾ ಹೋಗೋಲ್ಲ, ನೇರವಾಗಿದ್ದಾರೆ, ಇರೋದರಲ್ಲಿ ಪ್ರಾಮಾಣಿಕರಿದ್ದಾರೆ ಅವರ ಬಗ್ಗೆ ಗೌರವ ಇದೆ. ಮಿಕ್ಕ ಎಲ್ಲಾ ಖಾತೆಯವರು ಸಹ ಸಂತೆ ಮಾಡಿಕೊಂಡಿದ್ದಾರೆ, ಸಂತೆ ಮಾಡಿಕೊಂಡು ವ್ಯಾಪಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಶಾಸಕರ ಅನುದಾನ ಬಿಡುಗಡೆಯಾಗದೇ ಇರುವುದಕ್ಕೆ ಆಕ್ರೋಶ
ಎಂ ಎಲ್ ಎ ಆಗಿ ಮೂರು ತಿಂಗಳಾಗಿದೆ, ಒಂದು ರೂಪಾಯಿ ಎಂಎಲ್ ಎ ಅನುದಾನ ಕೊಡೋ ಯೋಗ್ಯತೆ ಆ ಸರ್ಕಾರಕ್ಕಿಲ್ಲ, ನಿಮ್ಮ ತೆವಲು ಕಟ್ಟಿಕೊಂಡು ನಮಗೆ ಏನ್ ಆಗಬೇಕಾಗಿದೆ ರೀ, ಜನರಿಗೆ ಏನು ಅಂತ ಮುಖ ತೋರಿಸೋಣ ಎಂದು ರಾಜ್ಯ ಸರ್ಕಾರವನ್ನು ಟೀಕಿಸಿದರು.
ಜನರು ಬೆಳಗ್ಗೆ ದೇವಸ್ಥಾನಕ್ಕೆ ಎರಡು ಲಕ್ಷ ಅನುದಾನ ಕೊಡಿ ಅಂತಾರೆ ಒಂದು ರೂಪಾಯಿ ಇಲ್ಲ, ಮೂರು ತಿಂಗಳಿಂದ ಹೋದ ಪುಟ್ಟ ಬಂದ ಪುಟ್ಟ ಎಂಎಲ್ಎ ಆಗಿದ್ದೇನೆ, ನೂರು ರೂಪಾಯಿ ಜನರಿಗೆ ಕೆಲಸ ಮಾಡೋಕೆ ಆಗುತ್ತಿಲ್ಲ, ಇದೆಂಥಾ ಸರ್ಕಾರ ರೀ.., ಇಂತಹ ಸರ್ಕಾರಗಳು ಬೇಕಾ ಜನರಿಗೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನೊಂದು ಎರಡು ತಿಂಗಳು ಕಳೆದರೆ, ಜನರೇ ದಂಗೆ ಎಳುತ್ತಾರೆ, ನಮಗಿಂತ ಮುಂಚೆ ಕಾಂಗ್ರೆಸ್ ನವರೇ ದಂಗೆ ಎಳುತ್ತಾರೆ, ನಾವು ಅವರಿಗೆ ಸರ್ಪೋಟ್ ಮಾಡ್ತೀವಿ ಎಂದರು. ಪಾಪ ಕ್ಯಾನ್ಸರ್ ಆಗಿ ಸಾಯುತ್ತಿದ್ದಾರೆ, ಎರಡು ಲಕ್ಷ ಮೆಡಿಕಲ್ ಬಿಲ್ ಕೊಡಿಸೋಕೆ ಆಗಿಲ್ಲ. ಯಾವ ಖಾಯಿಲೆಗೂ ಏನು ಇಲ್ಲ ಪುಕ್ಕಟ್ಟೆ ಸಿದ್ದರಾಮಣ್ಣ ಆಗಿ ಕುಂತವನೇ ಎಂದು ಏಕವಚನದಲ್ಲೇ ಕಿಡಿಕಾರಿದರಲ್ಲದೆ, ಸಿಎಂ ಸಿದ್ದರಾಮಯ್ಯ ಪುಕ್ಕಟ್ಟೆ ಸಿದ್ದರಾಮಣ್ಣ ಎಂದು ಲೇವಡಿ ಮಾಡಿದರು.