ಬೆಂಗಳೂರು : ನಾವು ಕುಟುಂಬ ಸಮೇತರಾಗಿ ಹೋಗಿದ್ದು ಯೂರೋಪ್ ದೇಶಕ್ಕೆ, ಸರ್ಕಾರ ಪತನಕ್ಕೆ ಸಿಂಗಾಪುರದಲ್ಲಿ ಷಡ್ಯಂತ್ರ ಮಾಡಲಾಗುತ್ತಿದೆ ಎಂಬ ಗುಲ್ಲು ಹಬ್ಬಿಸಿದ್ದರು, ಇವರದ್ದೇ ಸರ್ಕಾರ ಇವರದ್ದೆ ಗುಪ್ತಚರ ಇಲಾಖೆ ಎಷ್ಟು ಸರಿಯಾಗಿ ಕೆಲಸ ಮಾಡುತ್ತಿದೆ ಎನ್ನುವುದಕ್ಕೆ ಇದೇ ಉದಾಹರಣೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ವಿದೇಶ ಪ್ರವಾಸ ಮುಗಿಸಿ ಕುಟುಂಬ ಸಮೇತರಾದಿ ಬೆಂಗಳೂರಿಗೆ ಮರಳಿದ ಹೆಚ್ ಡಿ ಕುಮಾರಸ್ವಾಮಿ, ಏರ್ ಪೋರ್ಟ್ ನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ಈ ರೀತಿ ಕೌಂಟರ್ ನೀಡಿದರು.
ಜೆಡಿಎಸ್ 19 ಸ್ಥಾನ ಗೆದ್ರೂ ಕೂಡಾ ಅವರಿಗೆ ನಮ್ಮ ಭಯ ಎಷ್ಟರ ಮಟ್ಟಿಗೆ ಇದೆ ಅನ್ನೋದನ್ನ ಕಾಣಬಹುದು ಎಂದು ಹೇಳಿದ ಕುಮಾರಸ್ವಾಮಿ, ನಾನು ವಿದೇಶದಲ್ಲಿದ್ರು ಪ್ರತಿನಿತ್ಯದ ಬೆಳವಣಿಗೆಗಳನ್ನ ಗಮನಿಸಿದ್ದೇನೆ, ಗೃಹ ಇಲಾಖೆಯಲ್ಲಿ ಯಾವ ರೀತಿ ವರ್ಗಾವಣೆ ದಂಧೆ ನಡೆಯಿತು, ಪೊಲೀಸ್ ಅಧಿಕಾರಿಗಳನ್ನ ಆ ಮಟ್ಟಿಗೆ ಬಳಸಿಕೊಂಡ್ರೆ , ಪೊಲೀಸ್ರು ಜನ ಸಾಮಾನ್ಯರಿಗೆ ಯಾವ ಮಟ್ಟದ ರಕ್ಷಣೆ ನೀಡಬಹುದು ಎಂದು ಪ್ರಶ್ನಿಸಿದರು.
ಪೊಲೀಸ್ ಮೆಸ್ ನಲ್ಲಿ ವೈಎಸ್ ವಿ ಟ್ಯಾಕ್ಸ್ ನೊಂದಿಗೆ ಸಭೆ
ಇತ್ತೀಚೆಗೆ ಗರುಡಾ ಮಾಲ್ ಬಳಿಯ ಪೊಲೀಸ್ ಮೆಸ್ ನಲ್ಲಿ ನಡೆದ ಸಭೆಯಲ್ಲಿ ಯಾರು ಇದ್ದರು, ವೈಎಸ್ ವಿ ಟ್ಯಾಕ್ಸ್ ನವರು ಅಲ್ಲೇ ಇದ್ರು ಅಲ್ವಾ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು. ಅಧಿಕಾರಿಗಳ ವರ್ಗಾವಣೆ ಬಗ್ಗೆ ಮುಖ್ಯಮಂತ್ರಿಗಳು, ಗೃಹ ಸಚಿವರು ಚರ್ಚೆ ಮಾಡುವಾಗ ವೈಎಸ್ ವಿ ಟ್ಯಾಕ್ಸ್ ನವರು ಯಾಕೆ ಇದ್ದರು ಎಂದು ಅವರು ಸರ್ಕಾರವನ್ನು ಪ್ರಶ್ನಿಸಿದರು.
ಈ ವರ್ಷದೊಳಗೆ ಎಲ್ಲಾ ಗ್ಯಾರೆಂಟಿ ಜಾರಿಯಾಗುತ್ತಾ ಎಂದು ಸರ್ಕಾರವನ್ನು ಪ್ರಶ್ನಿಸಿದ ಅವರು, ಕಾಂಗ್ರೆಸ್ ಶಾಸಕರೇ ಅಭಿವೃದ್ಧಿಗೆ ದುಡ್ಡಿಲ್ಲ ಅಂತಾ ಹೇಳುತ್ತಿದ್ದಾರೆ, ಹಾಗಾದ್ರೆ ರಾಜ್ಯದ ಅಭಿವೃದ್ಧಿ ಕಥೆ ಏನು ಎಂದ ಅವರು, ರಾಜ್ಯ ಸರ್ಕಾರ ಈಗಾಗಲೇ 72 ಸಾವಿರ ಕೋಟಿ ಸಾಲ ಮಾಡಿದೆ ಎಂದು ಆರೋಪಿಸಿದರು.
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಈ ಸರ್ಕಾರದ ಅವಧಿ ಬಹಳ ದಿನ ಇರಲ್ಲ ಅಂತಾ ಅಂದ್ಕೊಂಡಿರಬೇಕು, ಅದಕ್ಕಾಗಿ ಹಾಗೆ ಮಾತನಾಡಿದ್ದಾರೆ ಎಂದು ಆರೋಪಿಸಿದ ಕುಮಾರಸ್ವಾಮಿ, ನನಗಿಂತ ಜಾಸ್ತಿ ಅವರೇ ಶಾಸ್ತ್ರ ಕೇಳುತ್ತಾರೆ, ಜೋತಿಷ್ಯದವರನ್ನ ಬಹಳ ನಂಬಿರೋರು, ಹಲವಾರು ರೀತಿ ಕುತಂತ್ರಗಳನ್ನ ಮಾಡುತ್ತಾರೆ ಎಂದು ಟೀಕಿಸಿದರು.
ಗುತ್ತಿಗೆದಾರರಿಂದ ಪರ್ಸಂಟೇಡ್ ಕೇಳಿದ್ದಾರೆ
ರಾಜ್ಯದಲ್ಲಿ ಗುತ್ತಿಗೆದಾರರಿಗೆ ಬಿಲ್ ರಿಲೀಸ್ ಗಾಗಿ ಇಂತಿಷ್ಟು ಪರ್ಸೆಂಟೇಜ್ ನೀಡಿಲು ಡಿಮ್ಯಾಂಡ್ ಇಟ್ಟಿದ್ದಾರೆ ಎಂದು ಆರೋಪಿಸಿದ ಕುಮಾರಸ್ವಾಮಿ, ನಾನು ಯುರೋಪ್ ನಲ್ಲಿ ಇದ್ದಾಗಲೇ ಮಾಹಿತಿ ಬಂತು, ಈ ಬಗ್ಗೆ ಗುತ್ತಿಗೆದಾರ ಸಂಘ ಮೀಟಿಂಗ್ ಮಾಡಬೇಕಿತ್ತು, ಮಂತ್ರಿ, ಮಂತ್ರಿ ಚೇಲಾಗಳು ಪರ್ಸೆಂಟೇಜ್ ಕೇಳುತ್ತಿದ್ದಾರಂತೆ ಎಂದರು.
ಹೊರನೋಟಕ್ಕೆ ಭ್ರಷ್ಟಾಚಾರವನ್ನು ತೆಗೆದುಹಾಕೋಣ ಅಂತಾ ಹೇಳುತ್ತಾರೆ, ಆದ್ರೆ, ಕಾಂಗ್ರೆಸ್ ನವರಿಗೆ ಈ ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ವಸೂಲಿಗೆ ಮಾಡಿ ಅಭ್ಯಾಸ ಎಂದ ಅವರು, ಅಂದಿನ ಈಸ್ಟ್ ಇಂಡಿಯಾ ಕಂಪನಿಯ ವಸೂಲಿಯನ್ನು ಕಾಂಗ್ರೆಸ್ ಮುಂದುವರೆಸಿಕೊಂಡು ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯಾವುದೇ ಕಾರಣಕ್ಕೂ ಸದ್ಯಕ್ಕೆ ತಮ್ಮ ಬಳಿ ಇರುವ ಪೆನ್ ಡ್ರೈವ್ ರಿಲೀಸ್ ಮಾಡಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.




