Police Transfer Issue: ಕುಮಾರಸ್ವಾಮಿ ಸಿಎಂ ಆಗಿದ್ದಾಗ ವರ್ಗಾವಣೆ ವಿಚಾರವಾಗಿ ಏನ್ ಸೂಚನೆ ಕೊಟ್ಟಿದ್ರು ಅಂತ ಹೇಳಿದ್ರೆ ಚನ್ನಾಗಿ ಕಾಣಲ್ಲ: ಪರಂ ಕೌಂಟರ್

ಬೆಂಗಳೂರು: ಸಚಿವರು ಮತ್ತು ಶಾಸಕರ ಅಸಮಧಾನ, ಬೇಡಿಕೆ ಹಿನ್ನಲೆಯಲ್ಲಿ ಭಾರೀ ಪೊಲೀಸ್ ವರ್ಗಾವಣೆ ಆದೇಶ ಹೊರಡಿಸಿದ್ದ ರಾಜ್ಯ ಸರ್ಕಾರ ಏಕಾಏಕಿ ತಡೆಯನ್ನ ನೀಡಿತ್ತು. ಇದು ಸಾಕಷ್ಟು ಟೀಕೆಗೂ ಗುರಿಯಾಗಿತ್ತು. ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಗೃಹ ಸಚಿವ ಜಿ ಪರಮೇಶ್ವರ್, ಕುಮಾರಸ್ವಾಮಿ ಸಿಎಂ ಆಗಿದ್ದಾಗಲೂ ನಾನೇ ಗೃಹ ಸಚಿವನಾಗಿದ್ದೆ. ಆಗ ಅವರು ಯಾವ ರೀತಿ ಸಲಹೆ ಸೂಚನೆಗಳನ್ನ ಮುಖ್ಯಮಂತ್ರಿಗಳಾಗಿದ್ದಾಗ ಕೊಡ್ತಿದ್ರು ಎಂಬುದನ್ನು ನಾನು ಹೇಳಿಲ್ಲ.‌ ಅದನ್ನ ಹೇಳುವುದು ಕೂಡ ಚೆನ್ನಾಗಿ ಕಾಣುವುದಿಲ್ಲ ಎಂದು ವ್ಯಂಗ್ಯ ಮಾಡಿದರು.

ಗೃಹ ಇಲಾಖೆಯಲ್ಲಿ ವರ್ಗಾವಣೆ ದಂಧೆ ಕುರಿತು ಕುಮಾರಸ್ವಾಮಿ ಆರೋಪಕ್ಕೆ ತಿರುಗೇಟು ನೀಡಿದ ಗೃಹ ಸಚಿವ ಡಾ.‌ಜಿ ಪರಮೇಶ್ವರ್, ಕುಮಾರಸ್ವಾಮಿಯವರು ಏನು ಬೇಕಾದ್ರೂ ಕಮೆಂಟ್ ಮಾಡಲಿ.‌ಸರ್ಕಾರ ನಡೆಸುವವರು ನಾವು. ನಮಗೆ ಯಾವುದು ಸರಿ ಕಾಣುತ್ತದೆಯೋ ಅದನ್ನ ಮಾಡುತ್ತೇವೆ. ನಮಗೆ ೧೨೦೦ ಇನ್ಸ್ ಪೆಕ್ಟರ್ ಗಳಿದ್ದಾರೆ. ಅಷ್ಟನ್ನು ನಾವು ವರ್ಗಾವಣೆ ಮಾಡೋದಿಲ್ಲ . ಎಷ್ಟು ಮಂದಿ ಅಗತ್ಯ ಇದೆಯೋ ಅಷ್ಟು ಜನರನ್ನ ಮಾತ್ರ ವರ್ಗಾವಣೆ ಮಾಡುತ್ತೇವೆ. ಯಾವ ಏರಿಯಾದಲ್ಲಿ ಯಾವ ರೀತಿ ಯಾರನ್ನು ಹಾಕಿದ್ರೆ ಅಪರಾಧ ಪ್ರಕರಣಗಳು ಕಂಟ್ರೋಲಿಗೆ ಬರುತ್ತೆ ಎಂದು ನೋಡಿ ಈ ದೃಷ್ಟಿಕೋನ ಇಟ್ಕೊಂಡು ವರ್ಗಾವಣೆ ಮಾಡುತ್ತೇವೆ. ಇವರು ಹೇಳಿದ ಹಾಗೆ ಮಾಡೋದಿಲ್ಲ. ಇವರು ಕೂಡ ಮುಖ್ಯಮಂತ್ರಿಗಳಾಗಿದ್ದವರು. ಆಗಲೂ ನಾನೇ ಗೃಹ ಸಚಿವನಾಗಿದ್ದೆ. ಆಗ ಅವರು ಯಾವ ರೀತಿ ಸಲಹೆ ಸೂಚನೆಗಳನ್ನ ಮುಖ್ಯಮಂತ್ರಿಗಳಾಗಿದ್ದಾಗ ಕೊಡ್ತಿದ್ರು ಎಂಬುದನ್ನು ನಾನು ಹೇಳಿಲ್ಲ.‌ ಅದನ್ನ ಹೇಳುವುದು ಕೂಡ ಚೆನ್ನಾಗಿ ಕಾಣುವುದಿಲ್ಲ. ಕೆಲ ವರ್ಗಾವಣೆ ಸರಿ ಎನಿಸಿಲ್ಲ ಎನ್ನುವ ಕಾರಣಕ್ಕಾಗಿ ನಿಲ್ಲಿಸಿದ್ದೇವೆ. ಅದನ್ನೆಲ್ಲ ನೋಡಿ ಸರಿ ಮಾಡಿ ವರ್ಗಾವಣೆ ಮಾಡುತ್ತೇವೆ ಎಂದು ಕುಟುಕಿದರು.

ವರ್ಗಾವಣೆ ದಂಧೆ ನಡೆಯುತ್ತಿದೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಬೆಂಗಳೂರಲ್ಲಿ ಮಾತನಾಡಿದ ಡಿಸಿಎಂ ಡಿಕೆ ಶಿವ ಕುಮಾರ್, ಏನ್ ಖುಷಿ ಇದೆಯೋ ಮಾತನಾಡಲಿ. ಸಮಧಾನಕ್ಕೆ ಏನಾದ್ರು ಮಾತನಾಡಲಿ. ಪಾಪ ರೆಸ್ಟ್ ತೆಗೆದುಕೊಂಡು ಬಂದಿದ್ದಾರೆ ಎಂದರು. ಇನ್ನು
ಆರ್ ಆರ್ ನಗರದ ಪೊಲೀಸ್ ವರ್ಗಾವಣೆಯಲ್ಲಿ ಅಸಮಧಾನ ವಿಚಾರದ ಬಗ್ಗೆ ಮಾತನಾಡಿದ ಡಿ ಕೆ ಶಿವಕುಮಾರ್, ನಾನು ವರ್ಗಾವಣೆ ಶಿಫಾರಸ್ಸು ಕೊಟ್ಟಿಲ್ಲ.
ಡಿ ಕೆ ಸುರೇಶ್ ಕೊಟ್ಟಿದ್ರೆ ಸುರೇಶ್ ಹತ್ರ ಕೇಳಿ. ಎಂದು
ಪೊಲೀಸ್ ವರ್ಗಾವಣೆ ವಿಚಾರವಾಗಿ ಉತ್ತರಿಸಲು ನಿರಾಕರಿಸಿದರು.

ವಾಮ ಮಾರ್ಗದಿಂದ ಅಧಿಕಾರಕ್ಕೆ ಕಾಂಗ್ರೆಸ್ ಬಂದಿದೆ ಎಂಬ ಕುಮಾರಸ್ವಾಮಿ ಆರೋಪದ ಕುರಿತು ಮಾತನಾಡಿದ ಅವರು, ಮಾಯನೋ,ಮಾಟಾನೋ, ಜೋತಿಷ್ಯನೋ, ಧರ್ಮನೋ ಶ್ರಮಾನೋ. ಮೂರು ವರ್ಷದ ಶ್ರಮ ಇದೆ
ಕಾಂಗ್ರೆಸ್ ಅಧಿಕಾರಕ್ಕೆ ಬರಲು. ಕಾರ್ಯಕರ್ತರನ್ನು ಮಲಗಲು ಬಿಡಲಿಲ್ಲ ನಾನು. ಜನರು ವಿಶ್ವಾಸ ಇಟ್ಟು ಅಧಿಕಾರ ಕೊಟ್ಟಿದ್ದಾರೆ. ಜನರ ಋಣ ಇದೆ ತೀರಿಸಬೇಕು.
ಪಾಪ ಅವರಿಗೆ ಅನುಭವ ಇದೆ ಮಾತನಾಡುತ್ತಾರೆ. ಅಣ್ಣ ಹೇಳಿದ್ದು ತಮ್ಮ ಕೇಳಬೇಕು ಎಂದು ಕುಮಾರಸ್ವಾಮಿ ಹೇಳಿಕೆಗೆ ಡಿ ಕೆ ಶಿವಕುಮಾರ್ ವ್ಯಂಗ್ಯವಾಗಿ ಉತ್ತರ ನೀಡಿದರು.

More News