TERRORIST NASIR: ಬೆಂಗಳೂರು ಸ್ಫೋಟ ಪ್ರಕರಣ; ಮೊಬೈಲ್ ಸಿಮ್ ಕಾರ್ಡ್ ಜಜ್ಜಿ ಸಾಕ್ಷ್ಯ ನಾಶಪಡಿಸಿದ ಉಗ್ರ ನಾಸಿರ್

ಬೆಂಗಳೂರು : ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃದಲ್ಲಿದ್ದುಕೊಂಡು ಬೆಂಗಳೂರು ಸ್ಪೋಟಕ್ಕೆ ಸಂಚು ರೂಪಿಸಿದ್ದ ಉಗ್ರ ನಾಸೀರ್, ತನ್ನ ಮೊಬೈಲ್ ಹಾಗೂ ಸಿಮ್ ಕಾರ್ಡ್ ಅನ್ನು ಜಜ್ಜಿ ಪುಡಿ ಮಾಡಿ ಸಾಕ್ಷ್ಯ ನಾಶ ಪಡಿಸಿರುವ ಅಂಶ ಬಯಲಾಗಿದೆ.
ಸಿಸಿಬಿ ಪೊಲೀಸರು ನಡೆಸುತ್ತಿರುವ ತನಿಖೆಯಲ್ಲಿ ಸಿಮ್ ನಾಶ ಪಡಿಸಿರುವುದು ಬೆಳಕಿಗೆ ಬಂದಿದ್ದು, ಪ್ರಕರಣದಲ್ಲಿ ಸಿಕ್ಕಿ ಬೀಳುವ ಭಯದಿಂದ ಈ ಕೃತ್ಯವೆಸಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಜುಲೈ 18ರಂದು ಹೆಬ್ಬಾಳ ಪೊಲೀಸ್ ಠಾಣಾ ವ್ಯಾಪ್ತಿಯ ಸುಲ್ತಾನ್ ಪಾಳ್ಯದ ಮನೆಯೊಂದರ ಮೇಲೆ ಪೊಲೀಸರು ದಾಳಿ ನಡೆಸಿ, ಸೈಯದ್ ಸುಹೇಲ್ ಖಾನ್, ಜಾಹೀದ್ ತಬ್ರೇಜ್, ಸೈಯದ್ ಮುದಾಸೀರ್ ಪಾಷಾ, ಮಹಮದ್ ಫೈಜಲ್ ರಬ್ಬಾನಿ ಮತ್ತು ಮೊಹಮ್ಮದ್ ಉಮರ್ ನನ್ನು ಬಂಧಿಸಲಾಗಿತ್ತು. ಇವರ ಸತತ ವಿಚಾರಣೆಯಿಂದ ಬಾಂಬ್ ಸ್ಪೋಟದ ಮಾಹಿತಿ ಬಯಲಾಗಿತ್ತು. ಇದಕ್ಕೆ ನಾಸೀರ್ ಸೂತ್ರದಾರ ಎಂದು ತನಿಖೆ ಸಂದರ್ಭದಲ್ಲಿ ಅವರು ತಿಳಿಸಿದ್ದರು.
ಕರ್ನಾಟಕ ಮತ್ತು ಕೇರಳದಲ್ಲಿ ಸುಮಾರು 36 ಪ್ರಕರಣಗಳು ನಾಸೀರ್ ವಿರುದ್ಧ ಇದ್ದು, ಈಗಾಗಲೇ ಈತನ ವಿರುದ್ದ ಎರಡು ಪ್ರಕರಣಗಳಲ್ಲಿ ಆತನಿಗೆ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾನೆ. ಹಾಗೆಯೇ ಈತ ಜೈಲಿನಲ್ಲಿದ್ದುಕೊಂಡೇ ನಿರಂತರವಾಗಿ ಭಯೋತ್ಪಾದನಾ ಕೃತ್ಯಗಳ ಸಂಚು ರೂಪಿಸುತ್ತಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ.
ಶಂಕಿತ ಉಗ್ರರಿಗೆ ದುಬೈನಿಂದ ಹಣ ಬಂದಿರುವುದಕ್ಕೆ ದಾಖಲೆಗಳು ಲಭ್ಯವಾಗಿದ್ದು, ಶಂಕಿತರ ಬ್ಯಾಂಕ್ ಖಾತೆಗಳಿಗೆ ದುಬೈ ಬ್ಯಾಂಕ್ ವೊಂದರಿಂದ ಹಣ ಜಮಾವಾಗಿದ್ದು, ತನಿಖೆಯಿಂದ ಕಂಡುಬಂದಿರುವ ಹಿನ್ನೆಲೆಯಲ್ಲಿ ಹಣ ಜಮಾ ಮಾಡಿರುವವರು ಯಾರು, ಅವರ ವಿಳಾಸವನ್ನು ಪತ್ತೆ ಹಚ್ಚುವ ಕೆಲಸ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಮಗ್ರ ಮಾಹಿತಿ ನೀಡಲು ಬ್ಯಾಂಕ್ ಗೆ ಈ ಮೇಲ್ ಕಳುಹಿಸಲಾಗಿದೆ ನಾಸೀರ್ ಗೆ ಹಣ ನೀಡಿದವರ ಗುರುತು ಪತ್ತೆ ಹಚ್ಚಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

More News