ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲೂ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಯುವ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಸಂಜೂ ಸ್ಯಾಮ್ಸನ್ ಪ್ರದರ್ಶನದ ಬಗ್ಗೆ ಅಭಿಮಾನಿಗಳು ಟೀಕಿಸಿದ್ದಾರೆ.
ಈ ಹಿಂದೆ ಟೀಂ ಇಂಡಿಯಾಕ್ಕೆ ಆಯ್ಕೆ ಮಾಡದಿದ್ದಾಗ ಅಥವಾ ತಂಡದಲ್ಲಿ ಸ್ಥಾನ ನೀಡದ ಸಂದರ್ಭದಲ್ಲಿ ಸಂಜೂ ಸ್ಯಾಮ್ಸನ್ ಬೆಂಬಲಕ್ಕೆ ನಿಂತಿದ್ದ ಫ್ಯಾನ್ಸ್ ಇದೀಗ ಅವರ ಕಳಪೆ ಫಾರ್ಮ್ ವಿರುದ್ಧ ಸಾಕಷ್ಟು ಟೀಕೆ ವ್ಯಕ್ತಪಡಿಸಿದ್ದಾರೆ. ವಿಂಡೀಸ್ ವಿರುದ್ಧದ ಮೊಲದ ಟಿ20 ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಕಂಡಿದ್ದ ಸಂಜೂ, ಎರಡನೇ ಪಂದ್ಯದಲ್ಲಿ ಕೇವಲ 7 ರನ್‌ಗಳಿಗೆ ಔಟಾಗಿ ನಿರಾಸೆ ಮೂಡಿಸಿದರಲ್ಲದೆ, ತಮ್ಮ ಮೇಲಿನ ನಿರೀಕ್ಷೆಯನ್ನ ಹುಸಿಯಾಗಿಸಿದರು. ಯುವ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಸಂಜೂ ಅವರ ಈ ಪ್ರದರ್ಶನ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ.

ಐಪಿಎಲ್ ಟೂರ್ನಿಯಲ್ಲಿ ಅಬ್ಬರದ ಬ್ಯಾಟಿಂಗ್ ಮೂಲಕ ಮಿಂಚಿರುವ ಸಂಜೂ ಸ್ಯಾಮ್ಸನ್, 124.5ರ ಬ್ಯಾಟಿಂಗ್ ಸರಾಸರಿಯಲ್ಲಿ 119 ರನ್‌ಗಳ ಗರಿಷ್ಠ ಸ್ಕೋರ್ ಸಹ ಕಲೆಹಾಕಿದ್ದಾರೆ. ತಮ್ಮ ಈ ಅದ್ಬುತ ಪ್ರದರ್ಶನದಿಂದ ಗಮನ ಸೆಳೆದಿದ್ದ ಸಂಜೂ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಿರೀಕ್ಷಿತ ಯಶಸ್ಸು ಕಂಡಿಲ್ಲ. ಪರಿಣಾಮ ಆಡಿರುವ 18 ಟಿ20 ಪಂದ್ಯದಲ್ಲಿ 19.56ರ ಸರಾಸರಿಯಲ್ಲಿ ಕೇವಲ 320 ರನ್‌ಗಳಿಸಿದ್ದು, 132.07ರ ಸ್ಟ್ರೈಕ್ ರೇಟ್ ಹೊಂದಿದ್ದಾರೆ.

ಸಂಜೂ ಸ್ಯಾಮ್ಸನ್ ಅವರ ಈ ನಿರಾಶಾದಾಯಕ ಪ್ರದರ್ಶನದಿಂದಾಗಿ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಂಜೂ ಪ್ರದರ್ಶನದ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಟೀಕಿಸಿದ್ದಾರೆ. ಪ್ರಮುಖವಾಗಿ ಸಂಜೂ ಸ್ಯಾಮ್ಸನ್ ಅವರಿಗೆ ತಂಡದಲ್ಲಿ ಸ್ಥಾನ ನೀಡಿರುವ ಬಗ್ಗೆ ಪ್ರಶ್ನೆ ಮಾಡಿರುವ ಅಭಿಮಾನಿಗಳು, ಅವರ ಬದಲಿಗೆ ಬೇರೆ ಆಟಗಾರನಿಗೆ ತಂಡದಲ್ಲಿ ಸ್ಥಾನ ನೀಡುವ ಕುರಿತು ಸಲಹೆ ನೀಡಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ದೊಡ್ಡಮಟ್ಟದ ಯಶಸ್ಸು ಸಾಧಿಸಿದ್ದರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಾಣದ ಯುವ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮುಂದಿನ ಪಂದ್ಯದಲ್ಲಿ ಸ್ಥಾನ ಪಡೆಯುತ್ತಾರಾ? ಎಂಬುದು ದೊಡ್ಡ ಪ್ರಶ್ನೆಯಾಗಿದೆ.




