Complaint Against Cheluvarayaswamy: ಪತ್ರ ಮುಖೇನ ದೂರು ನೀಡಿದ ಜಂಟಿ ನಿರ್ದೆಶಕರುಗಳೇ ಇಲ್ಲ..!: ಸಿದ್ದರಾಮಯ್ಯ

ಬೆಂಗಳೂರು: ಲಕ್ಷ ಲಕ್ಷ ಹಣ ಕೇಳ್ತಾರೆ ಸ್ವಾಮಿ.. ಎಲ್ಲಿಂದ ತರೋಣ..? ಲಂಚಕ್ಕೆ ಮಟ್ಟ ಹಾಕ್ದಿದ್ರೆ ಕುಟುಂಬ ಸಮೇತ ವಿಷ ಕುಡಿದು ಸಾಯುತ್ತೇವೆ ಎಂದು ರಾಜ್ಯಪಾಲರಿಗೆ ಸರ್ಕಾರಿ ಅಧಿಕಾರಿಗಳು ಬರೆದಿದ್ದಾರೆ ಎನ್ನಲಾದ ಪತ್ರ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿತ್ತು. ವಿಪಕ್ಷ ನಾಯಕರ ರಾಜಕೀಯ ಅಸ್ತ್ರಕ್ಕೆ ಗುರಿಯಾದ ಬೆನ್ನಲ್ಲೇ ಅದೆಲ್ಲಾ ಫೇಕು ಪತ್ರ.. ಪತ್ರದಲ್ಲಿ ಉಲ್ಲೇಖಿಸಿದ ಜಂಟಿ ನಿರ್ದೇಶಕರೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಸಚಿವ ಚೆಲುವರಾಯ ಸ್ವಾಮಿ ವಿರುದ್ದ ರಾಜ್ಯ ಪಾಲರಿಗೆ ಪತ್ರ ಬರೆದ ವಿಚಾರದ ಕುರಿತು ವಿಧಾನಸೌಧದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಅದೊಂದು ಫೇಕ್ ಲೆಟರ್ ಎಂದು ಚೆಲುವರಾಯಸ್ವಾಮಿ ಹೇಳಿದ್ದಾರೆ. ಈ ಬಗ್ಗೆ ಪೊಲೀಸರಿಗೂ ತನಿಖೆ ಮಾಡುವುದಕ್ಕೆ ಹೇಳಿದ್ದೇನೆ.
ಪತ್ರದಲ್ಲಿ ಇರುವ ಜಂಟಿ ನಿರ್ದೆಶಕರುಗಳೇ ಇಲ್ಲ . ಹೀಗಾಗಿ ತನಿಖೆ ಮಾಡಿದ ಮೇಲೆ ಗೊತ್ತಾಗುತ್ತದೆ ಎಂದು ಹೇಳುವ ಮೂಲಕ ಆರೋಪ ನಿರಾಕರಿಸಿದರು.

“ಸಚಿವರಾಗಲಿ, ಅಧಿಕಾರಿಗಳಾಗಲಿ ಯಾರು ಹಣಕ್ಕೆ ಬೇಡಿಕೆ ಇಟ್ಟಿಲ್ಲ” ..?

ಇತ್ತ ಕೃಷಿ ಸಚಿವರ ವಿರುದ್ದ ಕೃಷಿ ಅಧಿಕಾರಿಗಳೇ ದೂರು ನೀಡಿದ ವಿಚಾರವನ್ನು ವಿರೋಧಿಸಿ ಮಂಡ್ಯ ಎಸ್ಪಿಗೆ ಮಂಡ್ಯ ಜಂಟಿ ಕೃಷಿ ನಿರ್ದೇಶಕ ಅಶೋಕ್ ದೂರ ನೀಡಿದ್ದಾರೆ. ರಾಜ್ಯಪಾಲರಿಗೆ ಸಹಾಯಕ ಕೃಷಿ ನಿರ್ದೇಶಕರು ದೂರು ನೀಡಿಲ್ಲ. ಆ ಸಂಬಂಧ ನಾನು ಖುದ್ದಾಗಿ ವಿಚಾರಿಸಿದ್ದೇನೆ. ಸಚಿವರಾಗಲಿ, ಅಧಿಕಾರಿಗಳಾಗಲಿ ಯಾರು ಹಣಕ್ಕೆ ಬೇಡಿಕೆ ಇಟ್ಟಿಲ್ಲ. ದೂರು ಪ್ರತಿಯಲ್ಲಿನ ಸಹಿ ಕೂಡ ನಮ್ಮದಲ್ಲ ಎಂದು ಹೇಳಿದ್ದಾರೆ.

ದುರುದ್ದೇಶದಿಂದ ನಮ್ಮ ಅಧಿಕಾರಿಗಳ ಹೆಸರಲ್ಲಿ ನಕಲಿ ದೂರು ಸಲ್ಲಿಸಿರುವ ಸಾಧ್ಯತೆ ಇದೆ. ಆದ್ದರಿಂದ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮಕೈಗೊಳ್ಳಿ ಎಂದು ದೂರಿನಲ್ಲಿ ಉಲ್ಲೇಖಿಸಿ ಜಂಟಿ ಕೃಷಿ ನಿರ್ದೇಶಕ ಅಶೋಕ್ ದೂರು ನೀಡಿದ್ದಾರೆ. ಕೃಷಿ ಅಧಿಕಾರಿಯ ಜೊತೆ ಶಾಸಕ ಗಣಿಗ ರವಿಕುಮಾರ್, ದಿನೇಶ್ ಗೂಳಿಗೌಡ, ರಮೇಶ್ ಬಾಬು ಬಂಡಿಸಿದ್ದೇಗೌಡ, ಮಧು ಜಿ ಮಾದೇಗೌಡ ಕೂಡ ದೂರು ನೀಡಿದ್ದು, ದೂರು ದಾಖಲಿಸಿ ಕ್ರಮ ಕೈಗೊಳ್ಳಲು ಮನವಿ ಮಾಡಿದ್ದಾರೆ.

ಅಸಲಿಯಾದ್ರೆ ಕ್ರಮ ಕೈಗೊಳ್ಳಲಿ

ಇನ್ನು ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಸಚಿವರ ವಿರುದ್ಧ ಕೊಟ್ಟ ದೂರಿನ ಪತ್ರದ ಕುರಿತು ತನಿಖೆ ಆಗಲಿ. ರಾಜ್ಯಪಾಲರು ಕೊಟ್ಟ ಪತ್ರದ ಕುರಿತು ತನಿಖೆಯಾಗಲಿ, ಅಸಲಿಯಾದ್ರೆ ಕ್ರಮ ಕೈಗೊಳ್ಳಲಿ ಎಂದು ತಿಳಿಸಿದರು.

“ಕಿಡಿಗೇಡಿಗಳ ಮೇಲೆ ಕ್ರಮ ಜರುಗಿಸಿ”

ಕೃಷಿ ಸಚಿವರ ವಿರುದ್ದ ಕೃಷಿ ಅಧಿಕಾರಿಗಳ ಹೆಸರಿನಲ್ಲಿ ನಕಲಿ ದೂರು ಆರೋಪ ಖಂಡಿಸಿ, ಮಂಡ್ಯ ಜಿಲ್ಲಾ ಕಾಂಗ್ರೆಸ್ ನಿಂದ ಬೃಹತ್ ಪ್ರತಿಭಟನೆಗೆ ಕರೆ ನೀಡಲಾಗಿದೆ.
ಸಚಿವರ ಮೇಲೆ ಷಡ್ಯಂತ್ರ ನಡೆಸಲಾಗ್ತಿದೆ ಎಂದು ಆರೋಪಿಸಿ, ಇಂದು ಮಂಡ್ಯದ ಸಂಜಯ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯ್ತು. ರಾಜ್ಯಪಾಲರಿಗೆ ಕೃಷಿ ಅಧಿಕಾರಿಗಳ ಹೆಸರಲ್ಲಿ ನಕಲಿ ದೂರು ನೀಡಲಾಗಿದೆ.ಕೃಷಿ ಅಧಿಕಾರಿಗಳ ಸಹಿಯನ್ನು ನಕಲಿ ಮಾಡಿದ್ದಾರೆ. ನಕಲಿ ದೂರು ಪತ್ರ ಸಲ್ಲಿಸಿದವರ ಪತ್ತೆ ಹಚ್ಚಬೇಕು.ಕಿಡಿಗೇಡಿಗಳ ಮೇಲೆ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.

More News