ಬೆಂಗಳೂರು: ಬೆಂಗಳೂರಿನಲ್ಲಿ ಇಂದು ಕೇಸರಿ ಪಡೆ ಹಸಿರು ಶಾಲು ಹಾಕಿ ಪ್ರತಿಭಟನೆಗಿಳಿಯಿತು. ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ನಿಲುವು ತಳೆದಿದೆ ಎಂದು ಆರೋಪಿಸಿ ಇಂದು ಪ್ರತಿಭಟನೆ ನಡೆಸಿದವು.
ಸ್ವಾತಂತ್ರ್ಯ ಉದ್ಯಾನವನದಲ್ಲಿ ಇಂದು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಮಾಜಿ ಸಚಿವ ಅಶ್ವತ್ಥನಾರಾಯಣ, ರೈತರು ತಮ್ಮ ಬೆಳೆಯನ್ನು ಯಾವುದೇ ಅಡೆತಡೆಯಿಲ್ಲದೆ ಮಾರಾಟ ಮಾಡಲು ಅನುಕೂಲ ಮಾಡಿಕೊಡಲಾಗಿತ್ತು, ಆದರೆ ಇಂದು ಮಧ್ಯವರ್ತಿ ಹಾವಳಿ ತಪ್ಪಿಸುವ ಕೆಲಸಕ್ಕೆ ಕಾಂಗ್ರೆಸ್ ಸರ್ಕಾರ ಕಲ್ಲು ಹಾಕಿದೆ ಎಂದು ಆರೋಪಿಸಿದರು.
ಸಣ್ಣ ನೀರಾವರಿ ಯೋಜನೆಯಲ್ಲಿ ಕುಂಠಿತ ಆಗಿದೆ, ಜನವಿರೋಧಿ ಸರ್ಕಾರದಿಂದ ಏನನ್ನು ಬಯಸಬಹುದು? ಎಂದು ಪ್ರಶ್ನಿಸಿದರಲ್ಲದೆ, ಈ ಸರ್ಕಾರ ಬಂದ ನಂತರ 137 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಕೇವಲ ಒಬ್ಬರಿಗೆ ಪರಿಹಾರ ನೀಡಿದ್ದಾರೆ, ಕೇವಲ 37 ಅರ್ಜಿಗಳ ವಿಲೇವಾರಿ ಆಗಿದೆ ಎಂದು ಆರೋಪಿಸಿದರು.
135 ಜನ ಶಾಸಕರು ಗೆದ್ದಿದ್ದಾರೆ ಎನ್ನುವ ಡಿಸಿಎಂ ಒಬ್ಬ ರೈತರ ಮನೆಗೆ ಹೋಗಿದ್ದಾರಾ? ಎಂದು ಪ್ರಶ್ನಿಸಿದ ಅವರು, ಎಲ್ಲ ಅಧಿಕಾರಿಗಳಿಂದ ವಸೂಲಿ ಮಾಡುತ್ತಿದ್ದಾರೆ, ಈ ಸರ್ಕಾರ ಪ್ರತಿ ವಿಚಾರದಲ್ಲಿ ಭ್ರಷ್ಟಾಚಾರ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಶಾಸಕ ಸಿ.ಟಿ. ರವಿ ಮಾತನಾಡಿ, ನಿಮಗೆ ಕೇಂದ್ರ ಸರ್ಕಾರಕ್ಕೆ ಪೈಪೋಟಿ ನೀಡಬೇಕು ಎಂದಿದ್ದರೆ ಹೆಚ್ಚಿನ ಹಣ ನೀಡಿ, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ನೀಡಬೇಕಿತ್ತು ಎಂದು ಆಗ್ರಹಿಸಿದರು. ರೈತರಿಗೆ ನೀಡುವ ರಾಜ್ಯದ ಹಣ ಏಕೆ ನಿಲ್ಲಿಸಿದಿರಿ? ಎಂದು ಪ್ರಶ್ನಿಸಿದರು.
ಈಗ ತಮಿಳುನಾಡಿನ ರೈತರಿಗೆ ಕದ್ದುಮುಚ್ಚಿ ನೀರು ಬಿಡುತ್ತಿದ್ದೀರಿ, ಮೊದಲು ಮಂಡ್ಯ ರೈತರ ನಾಲೆಗಳಿಗೆ ನೀರು ಕೊಡಿ ಎಂದು ಆಗ್ರಹಿಸಿದ ಅವರು, ಇವತ್ತು ಕಾಂಟ್ರ್ಯಾಕ್ಟರ್ ಕೆಂಪಣ್ಣ ಪೇಚಾಡುತ್ತಿದ್ದಾರೆ, ಬಾಣಲೆಯಿಂದ ಬೆಂಕಿಗೆ ಬಿದ್ದೆವು ಎನ್ನುತ್ತಿದ್ದಾರೆ, ಇವತ್ತು ಚುನಾವಣೆ ನಡೆದರೆ ಕಾಂಗ್ರೆಸ್ ಸೋಲುತ್ತದೆ ಎಂದು ಸಿ ಟಿ ರವಿ ಭವಿಷ್ಯ ನುಡಿದರು.