ವಿಧಾನಸೌಧ ಖಾಲಿ ಖಾಲಿ : ಸಿಎಂ ಪ್ರಕಾರ ಕೆಲಸ ನಿಂತಿಲ್ಲ, ಸಿಎಂ ಕಚೇರಿಗೆ ಬಾರದೇ ಆಯ್ತು ಒಂದು ವಾರ

ವಿಜಯಪುರ : ಯಾವುದೇ ಸರ್ಕಾರಿ ಕೆಲಸಗಳು ನಿಂತಿಲ್ಲ, ಎರೆಡೆರಡು ದಿನ ಸಚಿವರು ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ತೆರಳುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

ವಿಜಯಪುರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸೌಧಕ್ಕೆ ಬೀಗ ಹಾಕಿ ಪ್ರಚಾರಕ್ಕೆ ಎಲ್ಲಾ ಸಚಿವರು ಬಂದಿದ್ದಾರೆ ಎಂಬ ಕಾಂಗ್ರೆಸ್ ಪಕ್ಷದ ಆರೋಪಕ್ಕೆ ಉತ್ತರ ನೀಡಿದರು. ಆ ಥರ ಏನಿಲ್ಲಾ, ಎರಡೆರಡು ಮೂರು ಮೂರು ದಿನ ಸಚಿವರು ಬಂದು ಹೋಗಿ ಮಾಡ್ತಿದ್ದಾರೆ, ಯಾವುದೇ ಸರ್ಕಾರಿ ಕೆಲಸಗಳು ನಿಂತಿಲ್ಲ ಎಂದರು.

ಆದರೆ, ಬೆಂಗಳೂರಿನ ವಿಧಾನಸೌಧ ಮತ್ತು ವಿಕಾಸಸೌಧದಲ್ಲಿ ಕಳೆದ ಒಂದು ವಾರದಿಂದ ಯಾವುದೇ ಒಬ್ಬ ಸಚಿವರು ಕಾಣಿಸುತ್ತಿಲ್ಲ. ಕಚೇರಿಯಲ್ಲಿ ಸಚಿವರ ಬಗ್ಗೆ ಮಾಹಿತಿ ಕೇಳಿದರೆ, ಚುನಾವಣಾ ಪ್ರಚಾರಕ್ಕೆ ತೆರಳಿದ್ದಾರೆ ಎಂಬ ಉತ್ತರ ಬರುತ್ತಿದೆ. ಆದರೆ ಅಕ ಸಚಿವರು ಅತ್ತ ವಿಧಾನಸೌಧದಲ್ಲಿಯೂ ಇಲ್ಲ, ಇತ್ತ ಚುನಾವಣಾ ಪ್ರಚಾರದಲ್ಲೂ ಕಾಣುತ್ತಿಲ್ಲ. ಪ್ರತಿಪಕ್ಷದವರು ಮಾಡಿದ ಟೀಕೆ ವಾಸ್ತವದಿಂದ ಕೂಡಿದೆ.

ಹಾಗೆಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉಪಚುನಾವಣೆ ಹಿನ್ನಲೆಯಲ್ಲಿ ವಿಧಾನಸೌಧಕ್ಕೆ ಬಾರದೇ ಒಂದು ವಾರ ಕಳೆದಿದೆ. ಉಪಚುನಾವಣೆಯ ಪ್ರಚಾರದಲ್ಲಿ ಫುಲ್ ಬ್ಯುಸಿಯಾಗಿರುವ ಮುಖ್ಯಮಂತ್ರಿ ಅಲ್ಲಿಯೇ ಆಯಾ ಭಾಗದಲ್ಲಿ ಹಲವಾರು ಯೋಜನೆಯನ್ನು ಘೋಷಿಸುತ್ತಿದ್ದಾರೆ. ಆದರೆ, ವಿಧಾನಸೌಧದಲ್ಲಿ ಮಾತ್ರ ಮುಖ್ಯಮಂತ್ರಿ ಅವರು ಕಾಣಿಸುತ್ತಿಲ್ಲ. ಸೋಲಿನ ಭೀತಿಯಲ್ಲಿ ಸಚಿವರು, ಶಾಸಕರು ಸೇರಿದಂತೆ ಎಲ್ಲರೂ ಉಪಚುನಾವಣಾ ಪ್ರಚಾರದಲ್ಲಿ ತಲ್ಲೀನರಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.   

ಹಿಂದೆ ಏನೆಲ್ಲಾ ಮಾಡಿದ್ದಾರೆ ಗೊತ್ತಿದೆ

ಮುಂದುವರೆದು ಮಾತನಾಡಿದ ಮುಖ್ಯಮಂತ್ರಿ, ಅವರು ಹಿಂದೆ ಏನೆಲ್ಲಾ ಮಾಡಿದ್ದಾರೆ ಎಂಬುದು ನಮಗೂ ಗೊತ್ತಿದೆ ಎಂದು ಆರೋಪಿಸಿದರು. ನಾನು ಮಂತ್ರಿಗಳಿಗೆ ಏನು ಸೂಚನೆ ಕೊಡಬೇಕೋ ಕೊಟ್ಟಿದ್ದೇನೆ, ಯಾವುದೇ ಕೆಲಸಗಳು ನಿಂತಿಲ್ಲ ಎಂದು ಸ್ಪಷ್ಟಪಡಿಸಿದರು.

ಪ್ರಾದೇಶಿಕ ಪಕ್ಷವನ್ನು ಬಿಜೆಪಿ, ಕಾಂಗ್ರೆಸ್ ಪಕ್ಷಗಳು ಮುಗಿಸುತ್ತವೆ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಹೇಳಿಕೆ ಉತ್ತರಿಸಿದ ಮುಖ್ಯಮಂತ್ರಿ, ಜೆಡಿಎಸ್ ಅನ್ನು ಮುಗಿಸುವ ಪ್ರಶ್ನೆಯೇ ಇಲ್ಲ, ನಮ್ಮ ಪಕ್ಷದ ಸಂಘಟನೆ ಮಾತ್ರ ನಾವು ಮಾಡುತ್ತಿದ್ದೇವೆ, ಇನ್ನೊಂದು ಪಕ್ಷದ ಕಡೆಗೆ ನಾವು ತಿರುಗಿಯೂ ನೋಡೋದಿಲ್ಲ ಎಂದರು.

ಜೆಡಿಎಸ್ ಪರವಾಗಿ ಬಿಜೆಪಿ ಹಣ ಹಂಚಿಕೆ ಆರೋಪ

ಜೆಡಿಎಸ್ ಅಭ್ಯರ್ಥಿಯ ಪರವಾಗಿ ಬಿಜೆಪಿ ಹಣ ಹಂಚುತ್ತಿದೆ ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಆರೋಪ ಮಾಡಿದ್ದರು, ಈ ಕುರಿತು ಮಾತನಾಡಿದ ಮುಖ್ಯಮಂತ್ರಿ ಅವರು, ಇದು ವಿಪರೀತ ಕಲ್ಪನೆ ಅಷ್ಟೆ, ಅದಕ್ಕೆ ಯಾವುದೇ ಆಧಾರವಿಲ್ಲ ಎಂದು ತಿಳಿಸಿದರು.

More News