ಬೆಂಗಳೂರು: ಗೋವಾದ ಕ್ಯಾಸಿನೋದಲ್ಲಿ 25 ಲಕ್ಷ ರೂಪಾಯಿ ಗೆದ್ದು ನಗರಕ್ಕೆ ಬಂದಿದ್ದ ರಸ್ತೆ ಪಕ್ಕದಲ್ಲಿ ಟೀ ಮಾರುತ್ತಿದ್ದ ವ್ಯಕ್ತಿಯನ್ನು ಪರಿಚಯಸ್ಥರೇ ಅಪಹರಿಸಿ, ಹಲ್ಲೆ ಮಾಡಿ 15 ಲಕ್ಷ ರೂಪಾಯಿ ಹಣ ಬ್ಯಾಂಕ್ ಖಾತೆಯಿಂದ ವರ್ಗಾಯಿಸಿಕೊಂಡು ಜೀವ ಬೆದರಿಕೆ ಹಾಕಿರುವ ಘಟನೆ ರಾಜಧಾನಿಯಲ್ಲಿ ಬೆಳಕಿಗೆ ಬಂದಿದೆ.

ಶ್ರೀನಗರದ ನಿವಾಸಿಯಾಗಿರುವ 32 ವರ್ಷದ ತಿಲಕ್ ಮಣಿಕಂಠ ಅಪಹರಣಕ್ಕೊಳಗಾಗಿದ್ದು, ಈತ ನೀಡಿದ ದೂರಿನ ಮೇರೆಗೆ ಐವರು ಅಪಹರಣಕಾರರ ವಿರುದ್ಧ ಹನುಮಂತನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ರಚಿಸಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ.
ಹಲವು ವರ್ಷಗಳಿಂದ ನಗರದಲ್ಲಿ ಟೀ ವ್ಯಾಪಾರ ಮಾಡುತ್ತಿದ್ದ ತಿಲಕ್, ಗೋವಾಕ್ಕೆ ತೆರಳಿ ಅಲ್ಲಿ ಕ್ಯಾಸಿನೊ ಆಡಬೇಕೆಂದು ಮಹಾದಾಸೆ ಹೊಂದಿದ್ದ. ಕ್ಯಾಸಿನೊ ಜೂಜಿನ ಬಗ್ಗೆ ಹೆಚ್ಚು ತಿಳಿದುಕೊಂಡಿದ್ದ. ಇದರಂತೆ 4 ಲಕ್ಷ ಹಣ ಹೊಂದಿಸಿಕೊಂಡು ಸ್ನೇಹಿತರೊಂದಿಗೆ ಕಳೆದ ಜುಲೈ 30 ರಂದು ಬೆಂಗಳೂರಿನಿಂದ ಪಣಜಿಗೆ ವಿಮಾನದ ಮೂಲಕ ಹೋಗಿದ್ದರು. ಮೂರು-ನಾಲ್ಕು ದಿನಗಳ ಅಲ್ಲೇ ಉಳಿದು ಅಲ್ಲಿನ ಫ್ರೈಡ್ ಎಂಬ ಕ್ಯಾಸಿನೊ ಜೂಜು ಆಡಿ 25 ಲಕ್ಷ ಹಣ ಗೆದಿದ್ದ. ಕೆನರಾ ಬ್ಯಾಂಕ್ ಅಕೌಂಟ್ ನಂಬರ್ ನೀಡಿ ಆ.4ರಂದು ಗೋವಾದಿಂದ ಬೆಂಗಳೂರಿಗೆ ಬಂದಿದ್ದರು.

ಜೂಜಿನಲ್ಲಿ 25 ಲಕ್ಷ ಹಣ ಗೆದ್ದ ವಿಚಾರ ಮನೆಯವರು ಹಾಗೂ ಸ್ನೇಹಿತರೊಂದಿಗೆ ಹಂಚಿಕೊಂಡು ಸಂಭ್ರಮಿಸಿದ್ದ. ಎಂದಿನಂತೆ ತನ್ನ ಕಾಯಕದಲ್ಲಿದ್ದಾಗ ಆಗಸ್ಟ್ 5ರಂದು ಕಾರಿನಲ್ಲಿ ಬಂದಿದ್ದ ಪರಿಚಯಸ್ಥ ಅಪಹರಣಕಾರರು ತಿಲಕ್ ನನ್ನ ಕಾರಿನಲ್ಲಿ ಬಲವಂತವಾಗಿ ಕೂರಿಸಿ ಅಪಹರಿಸಿದ್ದಾರೆ.
ಜ್ಣಾನಭಾರತಿ ವಿವಿ ಬಳಿ ನಿರ್ಜನ ಪ್ರದೇಶದಲ್ಲಿ ಕರೆದೊಯ್ದು ಇಸ್ಟೀಟ್ ಆಟದ ಬಗ್ಗೆ ಕ್ಯಾತೆ ತೆಗೆದಿದ್ದಾರೆ. ನಂತರ ಗೋವಾದ ಕ್ಯಾಸಿನೋದಲ್ಲಿ 25 ಲಕ್ಷ ಗೆದ್ದಿರುವ ವಿಚಾರ ನಮಗೆ ಗೊತ್ತಿದೆ ಎಂದು ಹೇಳಿ ಹಣ ಕೊಡುವಂತೆ ಬೆದರಿಸಿ ಹಲ್ಲೆ ಮಾಡಿದ್ದಾರೆ.

ಮೊಬೈಲ್ ಕಸಿದುಕೊಂಡು ಬ್ಯಾಂಕ್ ಖಾತೆ ಪರಿಶೀಲಿಸಿದಾಗ 25 ಲಕ್ಷ ಇರುವುದನ್ನು ಖಾತರಿಪಡಿಸಿಕೊಂಡಿದ್ದಾರೆ. ಸುಮಾರು 15 ಲಕ್ಷ ಹಣದವರೆಗೂ ತಮ್ಮ ತಮ್ಮ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸಿಕೊಂಡಿದ್ದಾರೆ. ಬಳಿಕ ನೆಲಮಂಗಲ ಗೊಲ್ಲಹಳ್ಳಿ ಬಳಿಯಿರುವ ರೆಸಾರ್ಟ್ ಗೆ ಕರೆದೊಯ್ದು ಕೊಠಡಿಯೊಂದರಲ್ಲಿ ಕೂಡಿ ಹಾಕಿದ್ದಾರೆ.

ಮಾರನೇ ದಿನ ಅಪಹರಣಕಾರರು ನಮ್ಮನಿಂದ ಇಸ್ಟೀಟ್ ಮೋಸದಾಟದಲ್ಲಿ ಗೆದ್ದಿರುವ ದುಡ್ಡು. ಹೀಗಾಗಿ ಹಣ ವರ್ಗಾವಣೆ ಮಾಡಿಸಿಕೊಂಡಿದ್ದೇವೆ ಎಂದು ಹೇಳಿಸಿ ಮೊಬೈಲ್ ನಲ್ಲಿ ವಿಡಿಯೋ ಮಾಡಿಸಿಕೊಂಡಿದ್ದಾರೆ. ಪೊಲೀಸರಿಗೆ ಏನಾದರೂ ನಮ್ಮ ವಿರುದ್ಧ ದೂರು ನೀಡಿದರೆ ಸಾಯಿಸುವ ಬೆದರಿಕೆ ಹಾಕಿ ಬೆಂಗಳೂರು ಸಮೀಪ ತಿಲಕ್ ನನ್ನ ಬಿಟ್ಟು ಕಳುಹಿಸಿದ್ದಾರೆ. ಈ ಸಂಬಂಧ ನೀಡಿದ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಶೇಷ ತಂಡ ರಚಿಸಿ ಆರೋಪಿಗಳ ಬಂಧನಕ್ಕೆ ಶೋಧ ಕಾರ್ಯ ಆರಂಭಿಸಿದ್ದಾರೆ.




