ಬೆಂಗಳೂರು: ಲೆಕ್ಕ ಪರಿಶೋಧಕರು ಉದ್ಯಮ ವಲಯದಲ್ಲಿ ನಡೆಯುವ ತೆರಿಗೆ ವಂಚನೆ ಪ್ರಕರಣಗಳ ತಡೆಗೆ ಆದ್ಯತೆ ನೀಡುವ ಮೂಲಕ ದೇಶದ ಪ್ರಗತಿಯಲ್ಲಿ ಮಹತ್ವದ ಪಾತ್ರ ವಹಿಸಬೇಕು ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಹೇಳಿದ್ದಾರೆ.
ಬೆಂಗಳೂರಿನಲ್ಲಿಂದು ಆಯೋಜಿಸಿದ್ದ ಭಾರತೀಯ ಲೆಕ್ಕ ಪರಿಶೋಧಕರ “ಪ್ರಜ್ಞಾನ ಪ್ರಯತ್ನ” 19ನೇ ರಾಜ್ಯ ಮಟ್ಟದ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಉದ್ಯಮ ವಲಯ ಹಾಗೂ ಶ್ರೀಮಂತರು ಕಾನೂನು ಪ್ರಕಾರ ಪ್ರಾಮಾಣಿಕವಾಗಿ ತೆರಿಗೆ ಪಾವತಿಸುವುದರಿಂದ ದೇಶ ಸಮಗ್ರ ಪ್ರಗತಿ ಸಾಧಿಸಲು ಸಹಾಯಕವಾಗುತ್ತದೆ ಎಂದರು
ಸರಿಯಾದ ರೀತಿಯಲ್ಲಿ ತೆರಿಗೆ ಪಾವತಿ ಮಾಡುವುದರಿಂದ ಆಗುವ ಅನುಕೂಲಗಳು ಹಾಗೂ ತೆರಿಗೆ ವಂಚನೆ ಮಾಡುವುದರಿಂದ ಎದುರಿಸಬೇಕಾದ ಕಾನೂನಿನ ಕಟ್ಟಳೆಗಳ ಕುರಿತು ಲೆಕ್ಕ ಪರಿಶೋಧಕರು ಅರಿವು ಮೂಡಿಸುವುದು ಅಗತ್ಯ ಎಂದು ಅವರು ಹೇಳಿದರು.
ಸತ್ಯಂ ಕಂಪ್ಯೂಟರ್ ಹಗರಣದಿಂದ ದೇಶದಲ್ಲಿ ಕಾರ್ಪೊರೇಟ್ ವಲಯದ ತೆರಿಗೆ ವಂಚನೆ ಪ್ರಕರಣ ಮುನ್ನೆಲೆಗೆ ಬಂದಿತು ಮತ್ತು ಇದರಿಂದ ದೇಶ ಆಡಳಿತವು ಎಚ್ಚೆತ್ತಿಕೊಂಡಿತು. ಭವಿಷ್ಯದಲ್ಲಿ ಇಂತಹ ವಂಚನೆ ಪ್ರಕರಣ ಮರುಕಳಿಸದಂತೆ ಭಾರತೀಯ ಲೆಕ್ಕ ಪರಿಶೋಧಕರ ಸಮುದಾಯ ತಮ್ಮ ವೃತ್ತಿ ಪರತೆಯನ್ನು ಪ್ರದರ್ಶಿಸ ಬೇಕು ಎಂದು ಸಲಹೆ ನೀಡಿದರು.

ಇಂದು ದೇಶದಲ್ಲಿ ಜಿಎಸ್ ಟಿ ತೆರಿಗೆ ಪದ್ದತಿ ಸಂಪೂರ್ಣವಾಗಿ ಯಶಸ್ವಿಯಾಗಲು ಭಾರತೀಯ ಲೆಕ್ಕ ಪರಿಶೋಧಕರ ಪ್ರಾಮಾಣಿಕ ಪ್ರಯತ್ನವೆ ಕಾರಣವಾಗಿದ್ದು, ದೇಶವು ಸಮಗ್ತ ಅಭಿವೃದ್ಧಿ ಹೊಂದಲು ಅರ್ಹರು ಪ್ರಾಮಾಣಿಕವಾಗಿ ತೆರಿಗೆ ಪಾವತಿ ಮಾಡುವುದು ಅಗತ್ಯ ಎಂದರು.
ಭಾರತದ ಲೆಕ್ಕ ಪರಿಶೋಧಕರಿಗೆ ದೇಶ ವಿದೇಶಗಳಲ್ಲಿ ಅಪಾರ ಬೇಡಿಕೆಯಿದ್ದು ಅವರು ತಮ್ಮ ವೃತ್ತಿಪರ ಜ್ಞಾನವನ್ನು ದೇಶದ ಆರ್ಥಿಕ ಪ್ರಗತಿಗೆ ಹಾಗೂ ಸಮಾಜದ ಏಳಿಗೆಗೆ ಬಳಸಬೇಕು ಎಂದು ಅವರು ಲೆಕ್ಕಪರಿಶೋಧಕರಿಗೆ ಕಿವಿಮಾತು ಹೇಳಿದರು.
ಇದೇ ವೇಳೆ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರನ್ನು ಗೌರವಿಸಲಾಯಿತು. ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ ನ್ಯಾಯಮೂರ್ತಿ ಡಾ. ವಿನೀತ್ ಕೊಥಾರಿ, ಭಾರತೀಯ ಲೆಕ್ಕ ಪರಿಶೋಧಕರ ಸಂಘದ ಬೆಂಗಳೂರು ಶಾಖೆಯ ಅಧ್ಯಕ್ಷೆ ಸಿಎ.ದಿವ್ಯಾ.ಎಸ್, ಉಪಾಧ್ಯಕ್ಷ ಪ್ರಮೋದ್ ಆರ್ ಹೆಗಡೆ, ಕಾರ್ಯದರ್ಶಿ ಮಂಜುನಾಥ್ ಎಂ ಹುಲ್ಲೂರು, ಖಜಾಂಚಿ ಸಿಎ.ಕವಿತಾ ಪರಮೇಶ್ ಮತ್ತಿತರ ಗಣ್ಯರು ಹಾಜರಿದ್ದರು.
–
ಪೋಟೋ ಕ್ಯಾಪಶನ್ಸ್:
ಬೆಂಗಳೂರಿನಲ್ಲಿಂದು ಆಯೋಜಿಸಿದ್ದ ಭಾರತೀಯ ಲೆಕ್ಕ ಪರಿಶೋಧಕರ “ಪ್ರಜ್ಞಾನ ಪ್ರಯತ್ನ” 19ನೇ ರಾಜ್ಯ ಮಟ್ಟದ ಸಮಾವೇಶದಲ್ಲಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರನ್ನು ಗೌರವಿಸಲಾಯಿತು. ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ ನ್ಯಾಯಮೂರ್ತಿ ಡಾ ವಿನೀತ್ ಕೊಥಾರಿ, ಭಾರತೀಯ ಲೆಕ್ಕ ಪರಿಶೋಧಕರ ಸಂಘದ ಬೆಂಗಳೂರು ಶಾಖೆಯ ಅಧ್ಯಕ್ಷೆ ಸಿಎ.ದಿವ್ಯಾ.ಎಸ್, ಉಪಾಧ್ಯಕ್ಷ ಪ್ರಮೋದ್ ಆರ್ ಹೆಗಡೆ, ಕಾರ್ಯದರ್ಶಿ ಮಂಜುನಾಥ್ ಎಂ ಹುಲ್ಲೂರು, ಖಜಾಂಚಿ ಸಿಎ.ಕವಿತಾ ಪರಮೇಶ್ ಮತ್ತಿತರ ಗಣ್ಯರು ಹಾಜರಿದ್ದರು.




