ರಾಜ್ಯದಲ್ಲಿ ಈ ವರ್ಷ ಮುಂಗಾರು ಮಳೆ ಕಣ್ಣಾಮುಚ್ಚಾಲೆಯಾಟವಾಡುತ್ತಿದ್ದು, ಬರಗಾಲ ಘೋಷಣೆಗೆ ಕೇಂದ್ರದ ಷರತ್ತುಗಳು ಕಗ್ಗಂಟಾಗಿರುವ ಹಿನ್ನೆಲೆಯಲ್ಲಿ ಅವುಗಳನ್ನು ಸಡಿಲಿಕೆ ಮಾಡುವಂತೆ ರಾಜ್ಯ ಸರ್ಕಾರವು ಕೇಂದ್ರಕ್ಕೆ ಪತ್ರ ಬರೆದಿದೆ. ಮುಖ್ಯಮಂತ್ರಿ ಕಚೇರಿಯಿಂದ ಕೇಂದ್ರದ ಕೃಷಿ ಸಚಿವಾಲಯಕ್ಕೆ ಪತ್ರ ಬರೆಯಲಾಗಿದೆ. ಬರ ಪರಿಹಾರಕ್ಕೆ ಕೇಂದ್ರವು ಶೇ.೭೫ರಷ್ಟು ಅನುದಾನ ನೀಡಿದರೆ, ರಾಜ್ಯ ಸರ್ಕಾರವು ಶೇ.೨೫ರಷ್ಟು ಅನುದಾನ ನೀಡಲಿದೆ.

ಹೀಗಾಗಿ ಕೇಂದ್ರದ ಷರತ್ತುಗಳನ್ನು ಪಾಲನೆ ಮಾಡಬೇಕಾದ ಅನಿವಾರ್ಯತೆ ರಾಜ್ಯ ಸರ್ಕಾರಕ್ಕಿದೆ. ಕೇಂದ್ರ ಷರತ್ತುಗಳನ್ನು ಪಾಲನೆ ಮಾಡಲೇಬೇಕಿರುವ ಕಾರಣ ರಾಜ್ಯದ ರೈತರ ಹಿತದೃಷ್ಟಿಯಿಂದ ಸರ್ಕಾರವು ಷರತ್ತುಗಳನ್ನು ಸಡಿಲಿಕೆ ಮಾಡುವಂತೆ ಕೋರಿದೆ. ಮುಖ್ಯಮಂತ್ರಿಗಳ ಕಚೇರಿಯು ಕೇಂದ್ರದ ಕೃಷಿ ಸಚಿವಾಲಯಕ್ಕೆ ಪತ್ರ ಬರೆದಿದೆ ಎಂದು ಮೂಲಗಳು ಹೇಳಿವೆ. ಬರಘೋಷಣೆ ಮಾಡಬೇಕಾದರೆ ರಾಜ್ಯ ಸರ್ಕಾರವು ರೈತರು ಬಿತ್ತನೆ ಮಾಡಬಾರದು ಎಂದು ಸೂಚನೆಯ ಪ್ರಮಾಣ ಪತ್ರವನ್ನು ಸಲ್ಲಿಸಬೇಕು ಎಂಬ ಷರತ್ತು ಇದೆ. ರೈತರಿಗೆ ಈ ರೀತಿಯ ಸೂಚನೆ ನೀಡುವುದು ಅಸಾಧ್ಯವಾಗಿರುವ ಕಾರಣ ಈ ಷರತ್ತನ್ನು ಪ್ರಮುಖವಾಗಿ ಕೈಬಿಡುವಂತೆ ಪತ್ರದಲ್ಲಿ ಮನವಿ ಮಾಡಲಾಗಿದೆ. ಅತಿವೃಷ್ಠಿಯಿಂದಾಗಿ ಶೇ.೩೩ರಷ್ಟು ಬೆಳೆ ಹಾನಿಯಾದರೆ ಪರಿಹಾರ ನೀಡಲಾಗುತ್ತದೆ.


ಆದರೆ, ಬರ ಘೋಷಣೆಗೆ ಶೇ.೫೦ರಷ್ಟು ಬೆಳೆ ಹಾನಿಯಾಗಿರಬೇಕು ಎಂಬ ಮಾನದಂಡ ಇದೆ. ಇದರಿಂದ ರೈತರಿಗೆ ಬರ ಪರಿಹಾರ ನೀಡಲು ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಶೇ.೫೦ರಷ್ಟು ಇರುವುದನ್ನು ಶೇ.೩೩ಕ್ಕೆ ಇಳಿಕೆ ಮಾಡಬೇಕು ಎಂಬುದಾಗಿ ಸರ್ಕಾರ ಕೋರಿದೆ ಎಂದು ತಿಳಿದುಬಂದಿದೆ. ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಅಧಿವೇಶನದೊಳಗೆ ಮತ್ತು ಹೊರಗೆ ಬರ ಘೋಷಣೆಗೆ ಇರುವ ಷರತ್ತುಗಳನ್ನು ಸಡಿಲಿಕೆ ಮಾಡುವಂತೆ ಕೋರಿ ಮುಖ್ಯಮಂತ್ರಿಗಳು ಪತ್ರ ಬರೆಯಲಿದ್ದಾರೆ ಎಂದಿದ್ದರು. ಅದರಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೀಗ ಪತ್ರ ಬರೆದು ಬರಘೋಷಣೆ ಇರುವ ಮಾನದಂಡಗಳನ್ನು ಸಡಿಲಿಕೆ ಮಾಡುವಂತೆ ಮನವಿ ಮಾಡಿದ್ದಾರೆ. ಕೇಂದ್ರದ ನಿಯಮಗಳನ್ನು ಪಾಲನೆ ಮಾಡುತ್ತಾ ಕಾದು ಕುಳಿತರೆ, ಸಂಕಷ್ಟದಲ್ಲಿರುವ ಜನರ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಿಲ್ಲ. ಈ ಹಿನ್ನೆಲೆ ಸರ್ಕಾರವು ಮಾನದಂಡಗಳ ಬದಲಾವಣೆಗೆ ಒತ್ತಾಯಿಸಿದೆ ಎನ್ನಲಾಗಿದೆ. ರಾಜ್ಯದ ಹಲವೆಡೆ ಎದುರಾಗಿರುವ ಬರಪರಿಸ್ಥಿತಿಯನ್ನು ನಿಭಾಯಿಸಲು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ರಾಜ್ಯದ ಕೆಲವು ತಾಲೂಕುಗಳಲ್ಲಿ ಬರದ ಛಾಯೆ ಇದೆ. ಕೇಂದ್ರದ ಮಾನದಂಡಗಳ ಪ್ರಕಾರ ಶೇ.೬೦ರಷ್ಟು ಮಳೆಯ ಕೊರತೆಯಾಗಿರಬೇಕು ಮತ್ತು ಕನಿಷ್ಠ ಮೂರು ವಾರ ಸತತವಾಗಿ ಮಳೆ ಬಂದಿರಬಾರದು. ಇದರ ಬದಲಿಗೆ ರಾಜ್ಯದ ಸಮಗ್ರ ಚಿತ್ರಣವನ್ನು ನೋಡಿ ಘೋಷಣೆಗೆ ಅವಕಾಶ ಮಾಡಿಕೊಡಬೇಕು. ಶೇ.೬೦ರಷ್ಟು ಇರುವ ಮಳೆಯ ಕೊರತೆಯನ್ನು ಶೇ.೩೦ಕ್ಕೆ ಇಳಿಕೆ ಮಾಡಬೇಕು ಮತ್ತು ಮೂರು ವಾರ ಸತತವಾಗಿ ಮಳೆಯಾಗಿರಬಾರದು ಎಂಬ ಮಾನದಂಡವನ್ನು ಬದಲಿಸಿ ಅದನ್ನು ಎರಡು ವಾರಕ್ಕೆ ಇಳಿಕೆ ಮಾಡಬೇಕು ಎಂಬ ಸಲಹೆಯನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ.




