ಸಿನ್ಮಾದಲ್ಲಿ ಎದ್ವಾತದ್ವಾ ಡೈಲಾಗ್, ಮಾತಿನಿಂದಲೇ ಫೇಮ್ ಗಿಟ್ಟಿಸಿಕೊಂಡ “ಬುದ್ದಿವಂತ” ಭರದಲ್ಲಿ ಮಾತನಾಡಿದ ಒಂದು ಪದದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ರೀಲ್ ಒಕೆ, ರಿಯಲ್ ನಲ್ಲೂ ಹಿಂಗ್ಯಾಕೆ ಎಂದು ಗರಂ ಆದ ಮಂದಿ ನಟನ ವಿರುದ್ಧ ಎರಡು ಎಫ್ ಐ ಆರ್ ದಾಖಲಿಸಿದ್ದಾರೆ. ಇತ್ತ ಬಂಧನ ಭೀತಿಯಿಂದ ಉಪೇಂದ್ರ ನಾಪತ್ತೆ ಯಾಗಿದ್ದಾರೆ.
ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಅಡಿ ಉಪೇಂದ್ರ ಮೇಲೆ ಪ್ರಕರಣ ದಾಖಲಾಗಿದ್ದು, ಎಸಿಪಿ ಮಟ್ಟದ ಅಧಿಕಾರಿಯಿಂದ ತನಿಖೆ ನಡೆಯುತ್ತಿದೆ. ಇದೂವರೆಗೂ ಉಪೇಂದ್ರ ವಿರುದ್ದ ಎರಡು ಎಫ್ ಐ ಆರ್ ದಾಖಲಾಗಿದ್ದು, ವಿಚಾರಣೆ ಎದುರಿಸಬೇಕಾಗಿದೆ. ಎಫ್ ಐ ಆರ್ ದಾಖಲಾದ ಹಿನ್ನಲೆ ಉಪೇಂದ್ರರ ನಿವಾಸಕ್ಕೆ ತೆರಳಿ ನೋಟಿಸ್ ನೀಡಿದ್ದ ಬೆಂಗಳೂರಿನ ಸಿಕೆ ಅಚ್ಚುಕಟ್ಟು ಠಾಣೆ ಪೊಲೀಸರು, ವಿಚಾರಣೆ ಹಾಜರಾಗುವಂತೆ ಆದೇಶ ಹೊರಡಿಸಿದ್ದರು. ಇದೀಗ ಬಂಧನ ಭೀತಿ ಹಿನ್ನಲೆಯಲ್ಲಿ ನಟ ಉಪೇಂದ್ರ ಫೋನ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾರೆ.

ನಟನ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲು
ನಟ ಉಪೇಂದ್ರ ವಿರುದ್ಧ ಬೆಂಗಳೂರಿನ ಹಲಸೂರು ಪೊಲೀಸ್ ಠಾಣೆಯಲ್ಲಿ ಮತ್ತೊಂದು ಕೇಸ್ ದಾಖಲಿಸಲಾಗಿದೆ. ರಣಧೀರ ಪಡೆ ಮುಖ್ಯಸ್ಥ, ಹರೀಶ್, ನಟನ ಹೇಳಿಕೆ ವಿರುದ್ಧ ದೂರು ನೀಡಿದ್ದು, IPC ಸೆಕ್ಷನ್ 505(1)(A), 153 A, 295 A, ಅಟ್ರಾಸಿಟಿ ಕಾಯ್ದೆ 3(1)(R)(S) ಅನ್ವಯ ಎಫ್ ಐ ಆರ್ ದಾಖಲಿಸಲಾಗಿದೆ




