ಹುಬ್ಬಳ್ಳಿ : 2004 ರಿಂದ ಇಲ್ಲಿಯವರೆಗೆ ನಡೆದ ಎಲ್ಲಾ ಉಪಚುನಾವಣೆಯಲ್ಲಿ ಹೆಚ್ ಡಿ ಕುಮಾರಸ್ವಾಮಿ ಸೂಟ್‌ಕೇಸ್ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ ಎಂದು ಶಾಸಕ ಜಮೀರ್ ಅಹ್ಮದ್ ಖಾನ್ ಆರೋಪಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಯನಗರ ಬೈ ಎಲೆಕ್ಷನ್‌ನಲ್ಲಿ ಕುಮಾರಸ್ವಾಮಿ ಜನರಿಗೆ ಯಾರು ಅಂತಾನೇ ಗೊತ್ತೆ ಇರಲಿಲ್ಲ, ನಾನೇ ಮಾಜಿ ಪ್ರಧಾನಮಂತ್ರಿಯವರ ಮಗ ಅಂತ ಪರಿಚಯ ಮಾಡಿಕೊಟ್ಟಿದ್ದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸುಮ್ಮನೆ ನನ್ನನ್ನು ಕೆಣಕಬೇಡಿ ಕುಮಾರಸ್ವಾಮಿಯವರೇ ಎಂದು ಆಕ್ರೋಶ ವ್ಯಕ್ತಪಡಿಸಿದ ಜಮೀರ್, ನಿಮ್ಮ ಕೆಲಸ ನೀವು ಮಾಡಿ ನನ್ನ ಕೆಲಸ ನಾನು ಮಾಡ್ತೀನಿ, ನಾನು ಬಾಯಿ ಮುಚ್ಚಿಕೊಂಡು ಕುಳಿತಿದ್ದೆ, ಅವರು ನನ್ನ ಬಗ್ಗೆ ಕೀಳಾಗಿ ಮಾತನಾಡಿದ್ದಕ್ಕೆ ಅವರ ಬಗ್ಗೆ ಇಂದು ಹೇಳುತ್ತಿದ್ದೇನೆ ಎಂದರು.
ಪ್ರತಿಯೊಂದು ಚುನಾವಣೆ ಸಂದರ್ಭದಲ್ಲಿ ಕುಮಾರಸ್ವಾಮಿ ಅವರಿಗೆ ಅಲ್ಪಸಂಖ್ಯಾತರ ನೆನಪು ಏಕೆ ಆಗುತ್ತಿಲ್ಲ ಎಂದು ಪ್ರಶ್ನಿಸಿದ ಅವರು, ಕೇವಲ ಅಲ್ಪಸಂಖ್ಯಾತರಿಗೆ ಅಷ್ಟೇ ಅಲ್ಲ, ಎಲ್ಲರಿಗೂ ಅವರು ಮೋಸ ಮಾಡಿದ್ದಾರೆ ಎಂದು ಕಿಡಿಕಾರಿದರು.
ಸ್ವಂತ ತಮ್ಮನ ಏಳಿಗೆ ಸಹಿಸಲಿಲ್ಲ ಕುಮಾರಸ್ವಾಮಿ
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಅಧಿಕಾರ ಕೊಡಿ ಎಂದು ನಾನು ಕುಮಾರಸ್ವಾಮಿಗೆ ಹೇಳಿದ್ದೆ, ಹೆಚ್.ಡಿ.ರೇವಣ್ಣ ಎಲ್ಲಿ ಉಪಮುಖ್ಯಮಂತ್ರಿ ಆಗ್ತಾರೆಂಬ ಭಯದಿಂದ ಯಡಿಯೂರಪ್ಪನವರಿಗೆ ಅಧಿಕಾರ ಬಿಟ್ಟು ಕೊಡಲಿಲ್ಲ, ಇದರ ಬಗ್ಗೆ ನನ್ನ ಬಳಿ ವಿಡಿಯೋ ದಾಖಲೆ ಇದೆ ಎಂದು ಆರೋಪಿಸಿದರು.
ಕುಮಾರಸ್ವಾಮಿ ಸ್ವಂತ ಸಹೋದರನ ಏಳಿಗೆಯನ್ನ ಸಹಿಸಿಕೊಳ್ಳುವುದಿಲ್ಲ, ಇನ್ನು ನಮ್ಮ ಏಳಿಗೆಯನ್ನ ಅವರು ಸಹಿಸಿಕೊಳ್ಳುತ್ತಾರಾ ಎಂದು ಪ್ರಶ್ನಿಸಿದರಲ್ಲದೆ, ಸೋಲುವ ಸಮಯದಲ್ಲಿ ಕುರಿ ಬಲಿ ಕೊಟ್ಟ ಹಾಗೆ, ಅಲ್ಪಸಂಖ್ಯಾತರನ್ನ ಬಲಿ ಕೊಡ್ತಾರೆ ಎಂದು ಜಮೀರ್ ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ಅಲ್ಪಸಂಖ್ಯಾತರಿಗೆ ಅನೇಕ ಯೋಜನೆಗಳನ್ನು ನೀಡಿದ್ದಾರೆ, ಎಲ್ಲಾ ಜನರಿಗೂ ಹಲವು ಭಾಗ್ಯಗಳನ್ನು ನೀಡಿದ್ದಾರೆ. ಕುಮಾರಸ್ವಾಮಿ ಅಲ್ಪಸಂಖ್ಯಾತರಿಗೆ ಏನೂ ನೀಡಲಿಲ್ಲ, ಅದಕ್ಕೆ ನಾನು ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದ್ದು ಎಂದು ಸ್ಪಷ್ಟಪಡಿಸಿದ ಜಮೀರ್, ನನ್ನ ರಾಜಕೀಯ ಗುರುಗಳು ದೇವೇಗೌಡ್ರು ಮತ್ತು ಸಿದ್ದರಾಮಯ್ಯ, ದೇವೇಗೌಡ್ರು 100% ಸೆಕ್ಯೂಲರ್ ರಾಜಕಾರಣಿ ಎಂದು ತಿಳಿಸಿದರು.
ಕುಮಾರಸ್ವಾಮಿ ಅವರ ಟೀಕೆಗೆ ಎದುರೇಟು ನೀಡಿದ ಜಮೀರ್, ನಾನು ಬಸ್ ಮಾಲೀಕ, ನಮ್ಮ ಅಜ್ಜನ ಕಾಲದಿಂದಲೂ ನಾವು ಮಾಲೀಕರೇ ಎಂದು ಸ್ಪಷ್ಟಪಡಿಸಿದರು. ಅವರಿಗೆ ಎಲ್ಲಿಯೂ ಕುಳಿತುಕೊಳ್ಳಲು ಜಾಗ ಇರಲಿಲ್ಲ, ನಮ್ಮ ಕಚೇರಿಯಲ್ಲಿ ನಾಲ್ಕು ಗಂಟೆಗಳ ಕಾಲ ಬಂದು ಕುಳಿತುಕೊಳ್ಳುತ್ತಿದ್ದರು, ಹಾಗೆನೇ ಕುಮಾರಸ್ವಾಮಿಯವರನ್ನ ನಾನೇ ಸಾಕಿದ್ದೇನೆ, ಅವರಿಗೆ ಜಾಗ ಕೊಟ್ಟಿದ್ದೇನೆ, ಅವರ ಹಾಗೆ ನಾನು ಬಿಬಿಎಂಪಿಯಲ್ಲಿ ಕಸ ಗೂಡಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.