ಹಾವೇರಿ: ಮೊಬೈಲ್ ಕದ್ದು ಅವುಗಳಲ್ಲಿ ಫೋನ್ ಪೇ ಮತ್ತು ಗೂಗಲ್ ಪೇ ಬಳಸಿ ಹಣ ಲಪಾಟಾಯಿಸುತ್ತಿದ್ದ ಅಂತರ್ ರಾಜ್ಯ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.
3 ಅಂತರ್ ರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಹಾವೇರಿ ಜಿಲ್ಲೆಯ ಗುತ್ತಲ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳು ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯದ ಮೂಲದವರಾಗಿದ್ದು, ಗುಂಜಾರಿಯಾ ಸಾಯಿಕುಮಾರ್ , ಅಕುಲ್ ವಡಿವೆಲು ಜೊತೆಗೆ 12 ವಯಸ್ಸಿನ ಅಪ್ರಾಪ್ತ ಬಾಲಕ ನನ್ನು ವಶಕ್ಕೆ ಪಡೆಯಲಾಗಿದೆ.

ಈ ಮೂರು ಮಂದಿ ಬೇರೆ ಬೇರೆ ರಾಜ್ಯಗಳಿಂದ ಬಂದಿದ್ದು, ಇವರ ಸ್ನೇಹ ಶುರುವಾಗಿದೆ. ಬಳಿಕ ಹೊಟ್ಟೆ ಪಾಡಿಗೆ ದಂಧೆ ಪ್ರಾರಂಭಿಸಿದವರು ನಂತರ ತಮ್ಮ ದಂಧೆಯನ್ನೇ ಹೈಟೆಕ್ ಲೆವೆಲ್ ನಲ್ಲಿ ಪ್ರಾರಂಭಿಸಲು ಶುರು ಮಾಡಿದ್ದಾರೆ. ಟಾಟಾ ಇಂಡಿಗೋ ಕಾರ್ ನಲ್ಲಿ ಚಲಿಸುತ್ತಿದ್ದಂತೆ ಒಂಟಿಯಾಗಿ ರಸ್ತೆ ಬದಿ ತೆರಳುತ್ತಿದ್ದವರ ಮೊಬೈಲ್ ಕಸಿದು ಪರಾರಿ ಆಗುತ್ತಿದ್ದರು. ನಂತರ ಗೂಗಲ್ ಪೇ, ಫೋನ್ ಪೇ ಬಳಸಿ ಬ್ಯಾಂಕ್ ಖಾತೆಯ ಹಣಕ್ಕೆ ಖನ್ನ ಹಾಕ್ತಿದ್ದ ಕಳ್ಳರ ಹೆಡೆಮುರಿಯನ್ನ ಕೊನೆಗೂ ಪೊಲೀಸರು ಕಟ್ಟಿದ್ದಾರೆ.
ಸಿಕ್ಕ ಸಿಕ್ಕಲ್ಲಿ ಮೊಬೈಲ್ ಕದ್ದು ಓಡ್ತಿದ್ದವರ ಕಾಟದಿಂದ ಬೇಸತ್ತ ಸ್ಥಳೀಯರು, ಪೊಲೀಸ್ ಠಾಣೆಯಲ್ಲಿ ಅನೇಕ ದೂರು ದಾಖಲಿಸಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು. ಕೊನೆಗೂ ಖದೀಮರನ್ನ ರೆಡ್ ಹ್ಯಾಂಡ್ ಆಗಿ ವಶಕ್ಕೆ ಪಡೆಯುವಲ್ಲಿ ಸಿಪಿಐ ಸಂತೋಷ ಪವಾರ & ಪಿಎಸ್ಐ ಶಂಕರಗೌಡ ಪಾಟೀಲ ಹಾಗೂ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ಬಂಧಿತರಿಂದ 1.36 ಲಕ್ಷ ರೂಪಾಯಿ ಹಣ, 27 ವಿವಿಧ ಕಂಪನಿಯ ಮೊಬೈಲ್ ಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಟಾಟಾ ಇಂಡಿಗೋ ಕಾರು ವಶಕ್ಕೆ ಪಡೆದಿದ್ದು, ಹಾವೇರಿ ಬಿಟ್ಟು ಇನ್ನೂ ಎಲ್ಲೆಲ್ಲಿ ಏನೇನು ಕೃತ ಎಸಗಿದ್ದಾರೆ ಎಂಬ ಬಗ್ಗೆ ತನಿಖೆ ನಡೆಸಲಾಗ್ತಿದೆ.




