ಹಾಸನ: ಕಡೆಗೂ ಒತ್ತಡಕ್ಕೆ ಮಣಿದ ಜಿಲ್ಲಾಡಳಿತ ಮತ್ತು ಸರ್ಕಾರ ಹಾಸನಾಂಬೆ ದೇವಿಯ ಸಾರ್ವಜನಿಕ ದರ್ಶನಕ್ಕೆ ಷರತ್ತು ಬದ್ಧ ಅವಕಾಶ ನೀಡುವುದಾಗಿ ಅಬಕಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ತಿಳಿಸಿದರು.
ನಗರದಲ್ಲಿ ಇಂದು ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಕಳೆದ ಹಲವಾರು ದಿನಗಳಿಂದ ನಡೆಯುತ್ತಿದ್ದ ಎಲ್ಲಾ ಗೊಂದಲಗಳಿಗೆ ತೆರೆ ಎಳೆದರು. ಪ್ರತಿವರ್ಷ ದಂತೆ ಈ ವರ್ಷವೂ ೨೮ ರಂದು ಹಾಸನಾಂಬ ದೇವಾಲಯ ಬಾಗಿಲು ತೆರಯಲಿದೆ ಎಂದು ತಿಳಿಸಿದರು.

ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಬಾರಿಯಂತೆ ಈ ಬಾರಿಯೂ ಹಾಸನಾಂಬೆ ದರ್ಶನಕ್ಕೆ ಅವಕಾಶ ಕಲ್ಪಿಸದೇ ಇರಲು ತೀರ್ಮಾ ನಿಸಿದ್ದೇವು. ಆದರೆ ರಾಜ್ಯದಲ್ಲಿ ಶಾಲೆಗಳು ಪ್ರಾರಂಭವಾಗಿವೆ, ಕೋವಿಡ್ ಸ್ವಲ್ಪ ಕಡಿಮೆ ಇರುವುದರಿಂದ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸುತ್ತೇವೆ ಎಂದ ಸಚಿವ, ಅ.೨೮, ಮತ್ತು ನ. ೬ ರಂದು ಹೊರತುಪಡಿಸಿ ಉಳಿದ ದಿನಗಳು ದರ್ಶನಕ್ಕೆ ಅವಕಾಶ ಕಲ್ಪಿಸಲು ತೀರ್ಮಾನಿಸಲಾಗಿದೆ ಎಂದರು.
ದರ್ಶನಕ್ಕೆ ಬರುವವರಿಗೆ ವ್ಯಾಕ್ಸಿನ್ ಕಡ್ಡಾಯವಾಗಿ ಹಾಕಿಕೊಳ್ಳಬೇಕು, ವ್ಯಾಕ್ಸಿನ್ ಪಡೆದ ದೃಢೀಕರಣ ಪತ್ರ ಮತ್ತು ಗುರುತಿನ ಚೀಟಿ ಕಡ್ಡಾಯಗೊಳಿಸಲಾಗಿದೆ ಎಂದು ಸಚಿವರ ಮಾಹಿತಿ.

66ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡಕ್ಕಾಗಿ ನಾವು ಅಭಿಯಾನದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಮಾತಾಡ್ ಮಾತಾಡ್ ಕನ್ನಡ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಇದೇ 24ನೇ ತಾರೀಖಿನಿಂದ 30ನೇ ತಾರೀಖಿನವರೆಗೆ ಜಿಲ್ಲಾ ಕೇಂದ್ರ ಹಾಗೂ ತಾಲ್ಲೂಕುಗಳಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಆಚರಿಸಲಾಗುತ್ತಿದೆ ಎಂದರು.