ಬೆಂಗಳೂರು : ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದೆಂದು ಹೇಳುವ ಮೂಲಕ ‘ಬಾಂಬೆ ಬಾಯ್ಸ್’ ನಲ್ಲಿ ಇಬ್ಬರು ಬಿಜೆಪಿ ಶಾಸಕರು ಮತ್ತೆ ಘರ್ ವಾಪಸಿ ಆಗುತ್ತಿರುವ ವಿಚಾರವಾಗಿ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಯಾವುದೇ ರೀತಿಯ ಗುಟ್ಟು ಬಿಟ್ಟುಕೊಡಲಿಲ್ಲ.
ಬೆಂಗಳೂರಿನಲ್ಲಿ ಇಂದು ಸದಾಶಿವನಗರದ ಅವರ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವಾಗ ಏನು ಬೇಕಾದರೂ ಆಗಬಹುದು, ಯಾರು ಬರುತ್ತಾರೆ ಏನು ಎಂಬುದನ್ನ ನಾನು ಹೇಳೋದಿಲ್ಲ ಎಂದು ತಿಳಿಸಿದರು.
ಕೆಲವು ಕಾರ್ಯಕರ್ತರು ಬಹಳ ಉತ್ಸಾಹದಿಂದ ಕೆಲಸ ಮಾಡುತ್ತಿದ್ದಾರೆ, ಸ್ಥಳೀಯ ಮಟ್ಟದಲ್ಲಿ ಯಾರೆಲ್ಲ ಕಾಂಗ್ರೆಸ್ ಸೇರುವುದಕ್ಕೆ ಸಿದ್ದ ಅವರಿಗೆಲ್ಲ ಸೇರಿಸಿಕೊಳ್ಳಿ ಅಂತ ಹೇಳಿದ್ದೇನೆ ಎಂದು ಹೇಳಿದ ಡಿ ಕೆ ಶಿವಕುಮಾರ್, ಸೋಮಶೇಖರ್ ಕಾಂಗ್ರೆಸ್ ಸೇರ್ಪಡೆ ವಿಚಾರ ಅವರ ವೈಯಕ್ತಿಕ ವಿಚಾರ ಎಂದು ಹೇಳಿದರು.
ಸೋಮಶೇಖರ್ ಕರೆತರಲು ನೆಲಮಂಗಲ ಶಾಸಕರಿಗೆ ಟಾಸ್ಕ್ ಕೊಟ್ಟಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಅದು ಇನ್ನೂ ನಂಗೆ ಗೊತ್ತಿಲ್ಲ ಎಂದು ಹೇಳಿದರು. ಬಿಜೆಪಿ ನಾಯಕರು ಯಾರ ಬಳಿ ಮಾತನ್ನಾಡುತ್ತಿದ್ದಾರೆ ಎಂದು ಗೊತ್ತಿದ್ದರು ನೀವು ಸುಮ್ಮನೆ ಇದ್ದೀರಿ ಎಂಬ ಪ್ರಶ್ನೆಗೆ, ಬೆಕ್ಕು ಕಣ್ಣುಮುಚ್ಚಿಕೊಂಡು ಹಾಲು ಕುಡಿಯುತ್ತಿದೆ ಎಂದು ನೀವು, ಬಿಜೆಪಿಯವರು ಅಂದುಕೊಂಡಿದ್ದಾರೆ. ಸರ್ಕಾರ ಇದೆ, ಅವರು ಏನು ಪಾಠ ಕಲಿಸಿದ್ದಾರೆ, ಆ ಪಾಠ ನಮಗೆ ನೆನಪಿದೆ ಎಂದರು.
ನಮಲ್ಲಿ 135 ಮತ್ತು ಇಬ್ಬರು ಶಾಸಕರಿದ್ದಾರೆ, ರಾಜ್ಯದಲ್ಲಿ ಉತ್ತಮ ಆಡಳಿತ ಕೊಡಬೇಕು, ಬಿಜೆಪಿ ಮತ್ತು ಜೆಡಿಎಸ್ ನವರಿಗೆ ನೆಮ್ಮದಿ ಇಲ್ಲ, ನೆಮ್ಮದಿಗೆ ಅವರೇ ಔಷಧಿ ಕಂಡು ಹಿಡಿದುಕೊಳ್ಳಲಿ, ಯಾರು ಏನು ಮಾತಾಡುತ್ತಾರೆ ಎಂದು ನಾವು ಗಮನಿಸಿದ್ದೇವೆ, ಗೆದ್ದವರು, ಸೋತವರು ಮಾತಾಡುತ್ತಿದ್ದಾರೆ, ಮಾತಿಗೆ ನಾಲಿಗೆಗೆ ಬೀಗ ಹಾಕಲು ಆಗೋದಿಲ್ಲ ಎಂದು ಹೇಳಿದರು.

ಜೆಡಿಎಸ್ ಶಾಸಕರನ್ನು ಸಂಪರ್ಕಿಸಿದ ವಿಚಾರವಾಗಿ ಮಾತನಾಡಿದ ಅವರು, ನನ್ನ ಬಳಿ ಯಾರು ಸಹ ಮಾತನ್ನಾಡಿಲ್ಲ, ಆದರೆ ನನಗೆ ಎಲ್ಲರೂ ಪರಿಚಯಸ್ಥರೇ, ರಾಜ್ಯದ 224 ಶಾಸಕರೂ ಪರಿಚಯಸ್ಥರೇ, ಎಲ್ಲರ ಜೊತೆಗೆ ರಾಜಕೀಯ ಸಂಬಂಧ ಇಲ್ಲದಿದ್ದರೂ ವೈಯಕ್ತಿಕ ಸಂಬಂಧ ಬೆಳೆಸಿಕೊಂಡಿದ್ದೇನೆ ಎಂದರು.
ಕಾಂಗ್ರೆಸ್ ಬಿಟ್ಟು ಹೋಗಿರುವ ಕೆಲವರು ವಾಪಸ್ ಬಂದರೆ ಸ್ವಾಗತ ಇದೆಯಾ ಎಂಬ ಪ್ರಶ್ನೆಗೆ, ರಾಜಕೀಯದಲ್ಲಿ ಏನು ಪರ್ಮನೆಂಟ್ ಇದೆ ಹೇಳಿ, ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು ಎಂದು ಮಾರ್ಮಿಕವಾಗಿ ನುಡಿದರು.




