CONTRACTOR’S INQUIRY STARTED: ಆರಂಭವಾದ ಗುತ್ತಿಗೆದಾರರ ವಿಚಾರಣೆ: ಎಲ್ಲಾ ದಾಖಲಾತಿಗಳನ್ನು ಪಡೆಯುತ್ತಿರುವ ವಿಚಾರಣಾಧಿಕಾರಿ ಶೇಷಾದ್ರಿಪುರಂ ಎಸಿಪಿ

ಬೆಂಗಳೂರು : ಕಳೆದ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಸಂಬಂಧ ತನಿಖೆ ನಡೆಸುತ್ತಿರುವ ಶೇಷಾದ್ರಿಪುರಂ ಎಸಿಪಿ ಪ್ರಕಾಶ್ ತಂಡದ ಮುಂದೆ ಇಂದು ಅನೇಕ ಗುತ್ತಿಗೆದಾರರು ಹಾಜರಾಗಿ ತಮ್ಮ ಹೇಳಿಕೆ ನೀಡಿದರು. ಹಾಗೆಯೇ ಕಾಮಗಾರಿ ಸಂಬಂಧ ದಾಖಲಾತಿಗಳನ್ನು ಸಲ್ಲಿಸಿದರು.
ಇಂದು ಸುಮಾರು ಬೆಂಗಳೂರಿನ 20 ಗುತ್ತಿಗೆದಾರರನ್ನ ವಿಚಾರಣೆಗೆ ಎಸಿಪಿ ಪ್ರಕಾಶ್ ಅವರು ಕರೆದಿದ್ದು, ನಿನ್ನೆ ಹಲವರ ವಿಚಾರಣೆಯನ್ನು ವಿಚಾರಣಾಧಿಕಾರಿಯಾದ ಎಸಿಪಿ ನಡೆಸಿದ್ದಾರೆ. ಕೆಲವರಿಗೆ ದಾಖಲೆ ಪತ್ರ ಸಲ್ಲಿಸಲು ಸೂಚನೆ ನೀಡಿದ್ದಾರೆ.

ಶೇಷಾದ್ರಿಪುರಂ ಎಸಿಪಿ ಕಚೇರಿ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಗುತ್ತಿಗೆದಾರರ ಸಂಘಟನೆ ಅಧ್ಯಕ್ಷ ಮಂಜುನಾಥ್, ನಿನ್ನೆಯಿಂದ ವಿಚಾರಣೆ ನಡೆಯುತ್ತಿದೆ, ಕೆಲವರು ನಿನ್ನೆ ಬಂದು ಕೆಲವರು ಇಂದು ವಿಚಾರಣೆಗೆ ಹಾಜರಾಗಿದ್ದಾರೆ.

28 ತಿಂಗಳಿಂದ ಬಿಲ್ ಬಾಕಿ ಇತ್ತು, ನಾವು ಎಲ್ಲರಿಗೂ ಮನವಿ ಮಾಡಿಕೊಂಡಿದ್ದೇವೆ, ಆದ್ರೆ, ಅದು ಸರಿ ಹೋಗಲಿಲ್ಲ, ಆದ್ದರಿಂದ ನಾವು ರಾಜ್ಯಪಾಲರಿಗೆ ದೂರು ನೀಡಿದ್ದೇವೆ, ಕಾಮಾಗಾರಿ ಬಿಲ್ ಗೆ ಸಂಬಂಧಪಟ್ಟಂತೆ ಎಲ್ಲಾ ದಾಖಲಾತಿ ಕೇಳಿದ್ದಾರೆ, ನಿನ್ನೆ ಕೆಲವರು ಕೊಟ್ಟಿದ್ದಾರೆ, ಇಂದು ಕೆಲವರು ಕೊಡುತ್ತಿದ್ದಾರೆ ಎಂದು ಹೇಳಿದರು.
ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ವಿರುದ್ಧ ಶೇಕಡಾ 15% ಕಮಿಷನ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಾವು ಯಾರ ಮೇಲೂ ಇಲ್ಲಿವರೆಗೂ ಆರೋಪ ಮಾಡಿಲ್ಲ, ಕೆಲವೊಬ್ಬರು ಗುತ್ತಿಗೆದಾರ ಸಂಘಟನೆಗಳಲ್ಲಿ ಚರ್ಚೆ ಮಾಡಿದ್ದಾರೆ ಅಷ್ಟೇ, ಬೇರೆ ಎನು ಇಲ್ಲ ಎಂದು ಸ್ಪಷ್ಟನೆ ನೀಡಿದರು.

More News