ಹಾನಗಲ್ : ಇಂದಿಗೂ ಕಾಂಗ್ರೆಸ್ ಪಕ್ಷ ಬ್ರಿಟಿಷರ ಒಡೆದಾಳುವ ನೀತಿಯನ್ನು ಅನುಸರಿಸುತ್ತಿದೆ ಎಂದು ಮುಖ್ಯಮಂತ್ರಿ ಆರೋಪಿಸಿದರು.
ಹಾನಗಲ್ ವಿಧಾನಸಭಾ ಕ್ಷೇತ್ರದ ಆಡೂರು ಗ್ರಾಮದಲ್ಲಿ ಇಂದು ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ ಪರವಾಗಿ ಮತಯಾಚನೆ ಮಾಡಿದ ನಂತರ ಮತದಾರರನ್ನು ಉದ್ದೇಶಿಸಿ ಮಾತನಾಡಿದರು. ಕಾಂಗ್ರೆಸ್ ಪಕ್ಷವನ್ನು ಕಟ್ಟಿದ್ದು ಬ್ರಿಟಿಷ್ ವ್ಯಕ್ತಿ. ಒಡೆದಾಳುವುದು ಬ್ರಿಟಿಷರ ನೀತಿಯನ್ನು ಅವರು ಸದಾ ಅನುಸರಿಸಿಕೊಂಡು ಬಂದವರು. ಈಗ ಅದೇ ಸಂಸ್ಕೃತಿಯನ್ನು ಕಾಂಗ್ರೆಸ್ ಮುಂದುವರಿಸಿದೆ ಎಂದು ಬೊಮ್ಮಾಯಿ ಆರೋಪಿಸಿದರು.
ಅಲ್ಪಸಂಖ್ಯಾತರ ಸಮುದಾಯಕ್ಕೆ ಅತಿ ಹೆಚ್ಚು ಅನ್ಯಾಯ ಮಾಡಿದ ಯಾವುದಾದರೂ ಪಕ್ಷವಿದ್ದರೆ ಅದು ಕಾಂಗ್ರೆಸ್ ಪಕ್ಷ ಎಂದು ಆರೋಪಿಸಿದ ಸಿಎಂ, ಕಳೆದ 5 ವರ್ಷ ಕಾಂಗ್ರೆಸ್ ಅಧಿಕಾರದಲ್ಲಿತ್ತು, ಏನು ಅಭಿವೃದ್ಧಿ ಮಾಡಿದ್ರು? ಎಂದು ಪ್ರಶ್ನಿಸಿದ ಅವರು ಬರೀ ಜಾತಿ ,ಮತ, ಪಂಥ ಇವುಗಳ ರಾಜಕೀಯವನ್ನು ಕಾಂಗ್ರೆಸ್ ಪಕ್ಷದವರು ಮಾಡಿದ್ದಾರೆ. ಎಲ್ಲಾ ಸಮುದಾಯಗಳನ್ನು ಒಡೆಯುವ ಕೆಲಸ ಮಾಡಿದ್ದಾರೆ ಎಂದರು.

ಕಾಂಗ್ರೆಸ್ ಸುಳ್ಳಿನ ಕಂತೆಯನ್ನೇ ಹೇಳಿದ್ರೂ ಜನ ತೀರ್ಮಾನ ಮಾಡಿದ್ದಾರೆ. ಜಾತ್ಯಾತೀತ ಪಕ್ಷವೆಂದು ಕರೆದುಕೊಳ್ಳುವ ಕಾಂಗ್ರೆಸ್ ಜಾತಿಯನ್ನೇ ಹಿಡಿದು ಜನರನ್ನು ಒಲೈಸುವ ಪ್ರಯತ್ನ ಮಾಡುತ್ತಿದ್ದಾರೆ. ಅಲ್ಪಸಂಖ್ಯಾತ ಬಂಧುಗಳಿಗೆ ಕಾಂಗ್ರಸ್ ಏನು ಮಾಡಿದೆ. ಅವರ ಪರಿಸ್ಥಿತಿ ಏನಿತ್ತು ಹಾಗೆಯೇ ಇದೆ. ಈ ಸಮುದಾಯದ ಮಕ್ಕಳಿಗೆ 10 ವರ್ಷವಾದ ಕೂಡಲೇ ಕೈಯಲ್ಲಿ ಪುಸ್ತಕ ಪೆನ್ ಇರುವುದಿಲ್ಲ ಎಂದರು.
ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ಹೆಸರಲ್ಲಿ ಜಾತಿ ಒಡೆದ ಕಾಂಗ್ರೆಸ್
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಸಾಮಾಜಿಕ ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ಹೆಸರಿನಲ್ಲಿ ಒಂದು ಆಯೋಗವನ್ನು ರಚಿಸಿತು. ಆಯೋಗದ ಮೂಲಕ ಯಾವುದೇ ಸಮೀಕ್ಷೆ ನಡೆಸದೆ ಕೇವಲ ಜಾತಿ ಉಪಜಾತಿಗಳ ಪಟ್ಟಿ ತಯಾರಿಸಲಾಯಿತು ಎಂದು ಆರೋಪಿಸಿದರು.

ಇನ್ನೊಂದು ಕಡೆ ಕಾಂಗ್ರೆಸ್ ಪಕ್ಷದವರು ನೀರಾವರಿ, ಕೆರೆ ತುಂಬಿಸುವ ಯೋಜನೆ, ಅಭಿವೃದ್ಧಿ ಬಗ್ಗೆ ಮಾತಾಡೋಲ್ಲ. ಶಾಲೆ, ಆಸ್ಪತ್ರೆ ಕಟ್ಟಡಗಳು ಸಿ.ಎಂ ಉದಾಸಿ ಅವರ ಹೆಸರು ಹೇಳುತ್ತವೆ. ಐದು ವರ್ಷ ಆಡಳಿತ ಮಾಡಿದ ಸಿದ್ದರಾಮಯ್ಯ ಹಾನಗಲ್ ತಾಲ್ಲೂಕಿಗೆ ಏನು ಕೊಡುಗೆ ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದರು. ದಾಖಲೆ ಸಮೇತ ನಾವು ಮಾಡಿರುವ ಸಾಧನೆ ತೋರುತ್ತೇವೆ. ಮುಂದಿನ ಚುನಾವಣೆಯ ವೇಳೆಗೆ 7500 ಸಾವಿರ ಮನೆಗಳನ್ನು ಕಟ್ಟಲಾಗುವುದು ಎಂದು ಘೋಷಿಸಿದರು.