Asia Cup: ಏಷ್ಯಾಕಪ್ ಟೂರ್ನಿಗೆ ಇಂದು ಭಾರತ ತಂಡ ಪ್ರಕಟ ಸಾಧ್ಯತೆ

ಬಹುನಿರೀಕ್ಷಿತ ಏಷ್ಯಾಕಪ್ ಟೂರ್ನಿಗೆ ಇಂದು ಭಾರತ ತಂಡವನ್ನ ಪ್ರಕಟಿಸುವ ಸಾಧ್ಯತೆ ಇದೆ. ಈ ಸಂಬಂಧ ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ.

ಮುಂಬರುವ 2023 ಏಕದಿನ ವಿಶ್ವಕಪ್ ಟೂರ್ನಿ ಹಿನ್ನೆಲೆಯಲ್ಲಿ ಈ ಬಾರಿಯ ಏಷ್ಯಾಕಪ್ ಟೂರ್ನಿಗೆ 17 ಮಂದಿ ಆಟಗಾರರನ್ನ ಆಯ್ಕೆ ಮಾಡಲು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅವಕಾಶ ನೀಡಿದೆ. ಈ ನಿಟ್ಟಿನಲ್ಲಿ ಈಗಾಗಲೇ ತನ್ನ ತಂಡವನ್ನ ಪ್ರಕಟಿಸಿರುವ ಬಾಂಗ್ಲಾದೇಶ, ಪಾಕಿಸ್ತಾನ ತಂಡಗಳು 17 ಮಂದಿ ಆಟಗಾರರ ಹೆಸರುಗಳನ್ನ ಪ್ರಕಟಿಸಿದೆ. ಹೀಗಾಗಿ ಟೀಂ ಇಂಡಿಯಾ ಕೂಡ 17 ಮಂದಿ ಆಟಗಾರರ ಹೆಸರುಗಳನ್ನು ಪ್ರಕಟಿಸುವ ನಿರೀಕ್ಷೆ ಇದೆ.

ಪ್ರಮುಖವಾಗಿ ದೆಹಲಿಯಲ್ಲಿ ನಡೆಯಲಿರುವ ಆಯ್ಕ ಸಮಿತಿ ಸಭೆಗೆ ಟೀಂ‌ ಇಂಡಿಯಾ ನಾಯಕ ರೋಹಿತ್ ಶರ್ಮಾ, ತರಬೇತುದಾರ ರಾಹುಲ್ ದ್ರಾವಿಡ್ ಅವರುಗಳು ಭಾಗವಹಿಸುತ್ತಾರೆ ಎನ್ನಲಾಗಿದೆ. ಆದರೆ ಈ ಇಬ್ಬರು ನೇರವಾಗಿ ದೆಹಲಿಗೆ ತೆರಳಿ ಆಯ್ಕೆ ಸಮಿತಿ ಸಭೆಯಲ್ಲಿ ಭಾಗವಹಿಸುತ್ತಾರೋ ಅಥವಾ ವರ್ಚುವಲ್ ಮೂಲಕ ಸಭೆಗೆ ಹಾಜರಾಗುತ್ತಾರೋ ಎಂಬ ಬಗ್ಗೆ ಸೂಕ್ತ ಮಾಹಿತಿ ಇಲ್ಲ.

ಇನ್ನೂ ಆಟಗಾರರ ಆಯ್ಕ ಬಗ್ಗೆ ಗಮನಿಸಿದರೆ ಟೀಂ ಇಂಡಿಯಾದ ಪ್ರಮುಖ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಅವರುಗಳು ಆಯ್ಕೆಯಾಗುವ ಸಾಧ್ಯತೆ ಹೆಚ್ಚಿದೆ. ಆದರೆ ಇವರ ಹೊರತಾಗಿ ಯಾವೆಲ್ಲಾ ಆಟಗಾರರಿಗೆ ಬಿಸಿಸಿಐ ಆಯ್ಕೆ ಸಮಿತಿ ಮಣೆ ಹಾಕಲಿದೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ. ಪ್ರಮುಖವಾಗಿ ಏಷ್ಯಾಕಪ್ ಟೂರ್ನಿಗೆ ತಂಡಕ್ಕೆ ಆಯ್ಜೆಯಾಗುವ ನಿಟ್ಟಿನಲ್ಲಿ ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್ ಅವರುಗಳ ಹೆಸರು ಚರ್ಚೆಯಾಗಿದೆ. ಆದರೆ ಇವರಿಬ್ಬರು ಸಂಪೂರ್ಣ ಫಿಟ್ ಆಗದ ಹೊರತು ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಕಡಿಮೆ.

ಇವರೊಂದಿಗೆ ಯುವ ಆಟಗಾರರಾದ ಯಶಸ್ವಿ ಜೈಸ್ವಾಲ್, ತಿಲಕ್ ವರ್ಮ ಅವರೊಂದಿಗೆ ಸಂಜೂ ಸ್ಯಾಮ್ಸನ್ ಅವರನ್ನ ಸಹ ಏಷ್ಯಾಕಪ್ ಟೂರ್ನಿಗೆ ಆಯ್ಕೆ ಮಾಡುವ ಬಗ್ಗೆಯೂ ಚರ್ಚೆ ಇದೆ. ಆದರೆ ಯುವ ಆಟಗಾರರಿಗೆ ಆಯ್ಕೆ ಸಮಿತಿ ಅವಕಾಶ ಕೊಡಲಿದೆ ಕಾದು ನೋಡಬೇಕು. ಇನ್ನೂ ‌ಬೌಲಿಂಗ್ ವಿಭಾಗದಲ್ಲಿ ಯುವ ಆಟಗಾರರಾದ ಪ್ರಸಿದ್ಧ ಕೃಷ್ಣ, ಅರ್ಶದೀಪ್ ಸಿಂಗ್, ಉಮ್ರಾನ್ ಮಲ್ಲಿಕ್, ಆವೇಶ್ ಖಾನ್ ಅವರುಗಳು ತಂಡಕ್ಕೆ ಆಯ್ಕೆಯಾಗುವ ನಿರೀಕ್ಷೆ ಹೊಂದಿದ್ದಾರೆ. ಸ್ಪಿನ್ ವಿಭಾಗದಲ್ಲಿ ಅಕ್ಸರ್ ಪಟೇಲ್, ಯುಜ್ವೇಂದ್ರ ಚಹಲ್, ಕುಲ್ದೀಪ್ ಯಾದವ್ ಹಾಗೂ ಆರ್. ಅಶ್ವಿನ್ ಕೂಡ ತಂಡಕ್ಕೆ ಆಯ್ಕೆಯಾಗುವ ಸಾಧ್ಯತೆ ಇದೆ.

ಈ ಬಾರಿಯ ಏಷ್ಯಾಕಪ್ ಟೂರ್ನಿ ಆ.30ರಿಂದ ಆರಂಭವಾಗಲಿದ್ದು, ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ನೇಪಾಳ ತಂಡಗಳು ಮುಖಾಮುಖಿಯಾಗಲಿವೆ. ಇನ್ನೂ ಭಾರತ ತನ್ನ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನ ಎದುರಿಸಲಿದ್ದು, ಉಭಯ ತಂಡಗಳ ನಡುವಿನ ಈ ಹೈವೋಲ್ಟೇಜ್ ಹಣಾಹಣಿ ಸೆಪ್ಟೆಂಬರ್ 2ರಂದು ಪಾಲಕ್ಕೆಲೆಯಲ್ಲಿ ನಡೆಯಲಿದೆ.

More News