OPERATION CONGRESS CLARIFICATION FROM S T SOMASHEKAR: ಕಾಂಗ್ರೆಸ್ ಸೇರೋ ಕುರಿತು ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ನೀಡಿರುವ ಸ್ಪಷ್ಟನೆ ಹೀಗಿದೆ

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ನನ್ನ ಕ್ಷೇತ್ರದ ಅಭಿವೃದ್ಧಿ ಕಾಮಗಾರಿ ಸಂಬಂಧ ಭೇಟಿ ಮಾಡಿ ಚರ್ಚಿಸಿದ್ದೇನೆ ವಿನಹ ಬೇರೆ ಯಾವುದೇ ರಾಜಕೀಯ ಮಾತುಕತೆಯಾಗಿಲ್ಲ ಎಂದು ಮಾಜಿ ಸಚಿವ, ಹಾಲಿ ಶಾಸಕ ಎಸ್.ಟಿ ಸೋಮಶೇಖರ್ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸೇರ್ಪಡೆ ಕುರಿತು ಸ್ಪಷ್ಟನೆ ನೀಡಿದರು. ಸಿಎಂ ಸಿದ್ದರಾಮಯ್ಯ ಅವರ ಭೇಟಿಗೆ ಶಾಸಕರು ಯಾರಿಗೂ ಅಪಾಯಿಂಟ್ಮೆಂಟ್ ಬೇಕಿಲ್ಲ. ಕ್ಷೇತ್ರದ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಿದ್ದೇನೆ, ಬಿಡಿಎ ಛೇರ್ಮನ್, ಕಾರ್ಪೋರೇಷನ್ ಕಮೀಷನರ್ ಕರೆಸಿ ಸಮಸ್ಯೆ ಬಗೆಹರಿಸೋದಾಗಿ ಹೇಳಿದ್ದಾರೆ ಎಂದರು.

ತಮ್ಮ ಕ್ಷೇತ್ರಕ್ಕೆ 7.64 ಕೋಟಿ ಅನುದಾನ ಬಿಡುಗಡೆ ಮಾಡಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಕ್ಷೇತ್ರದಲ್ಲಿ ಸಮಸ್ಯೆ ಆಗಿತ್ತು. ಒಂದೇ ಒಂದು ಬೋರ್ವೆಲ್ ಕೊರೆಸಲು ಆಗಿರಲಿಲ್ಲ. ಗಾಡಿಯಲ್ಲಿ ನೀರು ಕೊಡೋದಕ್ಕೂ ಸಮಸ್ಯೆ ಆಗಿತ್ತು. ಈ ಬಗ್ಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಬಳಿಯೂ ಮಾತಾಡಿದ್ದೆ. ಡೆವಲಪ್ಮೆಂಟ್ ಹಣ ಸ್ಟಾಪ್ ಮಾಡಿ, ಕುಡಿಯುವ ನೀರಿನ ಹಣ ಸ್ಟಾಪ್ ಮಾಡಬೇಡಿ ಅಂತ ಮನವಿ ಮಾಡಿದ್ದೇ, ಆದ್ದರಿಂದ ಹಣ ಬಿಡುಗಡೆಯಾಗಿದೆ ಎಂದು ವಿವರಿಸಿದರು.
ಲೋಕಸಭಾ ಚುನಾವಣೆ ಸಂದರ್ಭದಲ್ಲಿ ತಮ್ಮ ಬೆಂಬಲಿಗರು ಕಾಂಗ್ರೆಸ್ ಸೇರ್ಪಡೆಯಾದ್ರೆ ಸಮಸ್ಯೆ ಆಗಲ್ವಾ ಅನ್ನೋದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕಾರ್ಪೊರೇಷನ್ ವಾರ್ಡಿಗೆ ಹಲವಾರು ಅಕಾಂಕ್ಷಿಗಳು ಇದ್ದಾರೆ. ಹಲವು ಜಾತಿ, ಸಮುದಾಯದವರಿದ್ದಾರೆ. ಸಂಘಟನೆಗೆ ಸಮಸ್ಯೆ ಆಗಲ್ಲ. ಕ್ಯಾಟಗಿರಿ ಚೇಂಜ್ ಮಾಡಬಹುದು ಅನ್ನೋ ಆತಂಕದಿಂದ ಸೇರುತ್ತಿದ್ದಾರೆ ಎಂದರು.

ಮಾಜಿ ಸಿಎಂ ಯಡಿಯೂರಪ್ಪ ಅವರು ಕರೆದಿರುವ ಸಭೆಗೆ ಗೈರು ಹಾಜರಾಗಿರುವ ಸಂಬಂಧ ಮಾತನಾಡಿದ ಅವರು, ಯಡಿಯೂರಪ್ಪ ಅವರು ನನ್ನ ಜೊತೆ ಮಾತನಾಡಿದ್ದಾರೆ, ನನಗೆ ತಡವಾಗಿ ಮೆಸೇಜ್ ಸಿಕ್ಕಿದ್ದರಿಂದ ನಾನು ಸಭೆಗೆ ತೆರಳಲು ಆಗಿರಲಿಲ್ಲ. ಯಡಿಯೂರಪ್ಪ ಅವರು ನಮ್ಮ ನಾಯಕರು. ನನ್ನನ್ನ ಬಿಜೆಪಿಗೆ ಕರೆತಂದವರು ಅವರೇ. ಸಹಕಾರ ಸಚಿವರನ್ನಾಗಿ ಮಾಡಿ, ಮೈಸೂರು ಉಸ್ತುವಾರಿ ಕೂಡ ನೀಡಿದರು, ಕೆಲಸ ಪ್ರಾಮಾಣಿಕವಾಗಿ ಮಾಡ್ತಾರೆ ಅಂತ ಹೇಳಿದ್ದರು. ಆದ್ದರಿಂದ ಯಡಿಯೂರಪ್ಪ ಅವರ ಹೊರತಾಗಿ ನಾನು ಏನೂ ಮಾಡಲ್ಲ ಎಂದರು.


ವಿರೋಧಿಗಳಿಗೆ ಶಿಸ್ತು ಕ್ರಮ
ತಮ್ಮ ವಿರೋಧಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಂಡಿರುವುದರ ಸಂಬಂಧ ಮಾತನಾಡಿದ ಅವರು, ಯಾರನ್ನೂ ಸಸ್ಪೆಂಡ್ ಮಾಡಿ, ತೊಂದರೆ ಮಾಡಿ ಅನ್ನೋದು ನಾನು ಹೇಳಿಲ್ಲ. ನೆಮ್ಮದಿಯಾಗಿ ಕೆಲಸ ಮಾಡಲು ಅವಕಾಶ ನೀಡಿ ಅನ್ನೋದು ನನ್ನ ಚಿಂತನೆ. ಇಬ್ನರನ್ನ ಸಸ್ಪೆಂಡ್ ಮಾಡಿದಾಕ್ಷಣಕ್ಕೆ ಒಳ ಹೊರಗೂ ಇರತಕ್ಕಂತದ್ದು ಬದಲಾಗಲ್ಲ ಎಂದು ಸಮಾಜಾಯಿಸಿ ನೀಡಿದರು.

ಕಾಂಗ್ರೆಸ್ ನ ಮುಖಂಡರು ಸಂಪರ್ಕ ಮಾಡಲು ನಾನು ಪ್ರಬಲ ನಾಯಕ ಅಲ್ಲ. ನಾನು ಯಶವಂತಪುರ ಕ್ಷೇತ್ರಕ್ಕೆ ಮಾತ್ರ ಸೀಮಿತ. ಯಶವಂತಪುರ ಹೊರತುಪಡಿಸಿ ಯಾವ ನಾಯಕ ನಾನಲ್ಲ. ಸಮುದಾಯದ ಪ್ರಬಲ ನಾಯಕನೂ ಅಲ್ಲ. ಸಂಪರ್ಕ ಮಾಡ್ತಾರೆ ಅಂದ್ರೆ ನಾನೂ ಕಾಂಗ್ರೆಸ್‌ನಲ್ಲಿ 20 ವರ್ಷ ಇದ್ದೆ. ಹಾಗಾಗಿ ನನ್ನ ಸಂಪರ್ಕ ಮಾಡಿದ್ದಾರೆ ಎಂದರು.
ಕಳೆದ ಬಾರಿ ಚುನಾವಣೆ ಮೊದಲು ಸಂಪರ್ಕ ಮಾಡಿದ್ದರು. ನಾನು ಕಾಂಗ್ರೆಸ್‌ಗೆ ಹೋಗಿಲ್ಲಾ, ಆದ್ರೂ ಕ್ರಿಯೇಟ್ ಮಾಡಿದ್ದಾರೆ, ಸೋಮಶೇಖರ್ ಈ ವಾರದಲ್ಲಿ ಹೋಗುತ್ತಾರೆ, ಬೈರತಿ ಬಸವರಾಜ್ ಕೂಡ ಊರಲ್ಲಿ ಇರಲಿಲ್ಲ. ನಾನು ಬಿಜೆಪಿ ಬಿಡಲ್ಲ ಎಂದರು.

More News