ಏಷ್ಯಾಕಪ್-2023ರ ಟೂರ್ನಿಗೆ ಟೀಂ ಇಂಡಿಯಾದ 17 ಮಂದಿ ಆಟಗಾರರ ತಂಡವನ್ನ ಪ್ರಕಟಿಸಲಾಗಿದೆ. ಅನುಭವಿ ಆಟಗಾರರ ಜೊತೆಗೆ ಹಲವು ಯುವ ಆಟಗಾರರು ಸಹ ಮಹತ್ವದ ಟೂರ್ನಿಯಲ್ಲಿ ಸ್ಥಾನ ಪಡೆದಿದ್ದು, ಮುಂಬರುವ ಏಕದಿನ ವಿಶ್ವಕಪ್ ಪಂದ್ಯಾವಳಿ ಹಿನ್ನೆಲೆಯಲ್ಲಿ ಈ ಯುವ ಆಟಗಾರರ ಮೇಲೆ ಸಾಕಷ್ಟು ನಿರೀಕ್ಷೆ ಹೊಂದಲಾಗಿದೆ.
ಆ.30ರಿಂದ ಆರಂಭವಾಗಲಿರುವ ಏಷ್ಯಾಕಪ್ ಪಂದ್ಯಾವಳಿಯಲ್ಲಿ ಟೀಂ ಇಂಡಿಯಾ ಆಟಗಾರರು ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ ಸೇರಿದಂತೆ ಇತರ ತಂಡಗಳ ವಿರುದ್ಧ ಹಣಾಹಣಿ ನಡೆಸಲಿದೆ. ಈ ಎಲ್ಲಾ ತಂಡಗಳ ಸವಾಲು ಎದುರಿಸಲು ತಯಾರಿ ಮಾಡಿಕೊಂಡಿರುವ ಭಾರತಕ್ಕೆ ಯುವ ಆಟಗಾರರೇ ಶಕ್ತಿಯಾಗಿದ್ದಾರೆ. ಹೀಗಾಗಿ ಯುವ ಆಟಗಾರರಾದ ಶುಭ್ಮನ್ ಗಿಲ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮ, ಇಶಾನ್ ಕಿಶನ್, ಪ್ರಸಿದ್ಧ ಕೃಷ್ಣ ಅವರ ಪ್ರದರ್ಶನದ ಮೇಲೆ ಎಲ್ಲರ ಗಮನ ನೆಟ್ಟಿದೆ.

ಮುಂಬರುವ ಏಕದಿನ ವಿಶ್ವಕಪ್ ಪಂದ್ಯಾವಳಿಗೆ ತಂಡವನ್ನ ಆಯ್ಕೆ ಮಾಡುವ ದೃಷ್ಟಿಯಿಂದಲೇ ಏಷ್ಯಾಕಪ್ ಟೂರ್ನಿಗೆ 17 ಆಟಗಾರರನ್ನ ಆಯ್ಕೆ ಮಾಡಲಾಗಿದೆ. ಅಲ್ಲದೇ ಏಷ್ಯಾಕಪ್ ಟೂರ್ನಿಯಲ್ಲಿ ನೀಡುವ ಪ್ರದರ್ಶನದ ಆಧಾರದ ಮೇಲೆ ಏಕದಿನ ವಿಶ್ವಕಪ್ ಟೂರ್ನಿಗೆ ತಂಡವನ್ನ ಆಯ್ಕೆ ಮಾಡಲು ಬಿಸಿಸಿಐ ಚಿಂತನೆ ನಡೆಸಿದೆ. ಹೀಗಾಗಿ ಮೊದಲ ಬಾರಿಗೆ ಏಕದಿನ ಪಂದ್ಯವನ್ನಾಡುವ ತವಕದಲ್ಲಿರುವ ತಿಲಕ್ ವರ್ಮ ಸೇರಿದಂತೆ ಏಕದಿನ ಕ್ರಿಕೆಟ್‌ನಲ್ಲಿ ನಿರೀಕ್ಷಿತ ಯಶಸ್ಸು ಪಡೆಯದ ಸೂರ್ಯಕುಮಾರ್ ಯಾದವ್ ಕೂಡ ಏಷ್ಯಾಕಪ್ ಟೂರ್ನಿಯಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸಬೇಕಿದೆ.

ಇವರೊಂದಿಗೆ ಆರಂಭಿಕ ಬ್ಯಾಟರ್ ಶುಭ್ಮನ್ ಗಿಲ್, ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್, ವೇಗಿ ಪ್ರಸಿದ್ಧ ಕೃಷ್ಣ ಕೂಡ ಏಕದಿನ ವಿಶ್ವಕಪ್‌ನಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆಯುವ ಲೆಕ್ಕಾಚಾರ ಇಟ್ಟುಕೊಂಡೇ ಏಷ್ಯಾಕಪ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಬೇಕಾಗಿದೆ. ಯುವ ಆಟಗಾರರ ಜೊತೆಗೆ ಗಾಯದ ಸಮಸ್ಯೆ ಬಳಿಕ ತಂಡಕ್ಕೆ ಕಮ್ ಬ್ಯಾಕ್ ಮಾಡುತ್ತಿರುವ ಕನ್ನಡಿಗ ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್ ಅವರುಗಳು ಕೂಡ ನಿರೀಕ್ಷಿತ ಪ್ರದರ್ಶನ ನೀಡಬೇಕಾಗಿದೆ.

ಕೇವಲ ಯುವ ಆಟಗಾರರು ಮಾತ್ರವಲ್ಲದೇ ಟೀಂ ಇಂಡಿಯಾದ ಅನುಭವಿ ಆಟಗಾರರು ಸಹ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಗಬೇಕಾದ ಅನಿವಾರ್ಯತೆ ಎದುರಾಗಿದೆ. ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಸಾಕಷ್ಟು ಪೈಪೋಟಿ ಶುರುವಾಗಿದ್ದು, ಈ ನಿಟ್ಟಿನಲ್ಲಿ ತಂಡದ ಅನುಭವಿ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಹಾಗೂ ಕುಲ್ದೀಪ್ ಯಾದವ್ ಅವರುಗಳ ಮೇಲೂ ದೊಡ್ಡಮಟ್ಟದ ಒತ್ತಡವಿದೆ.
ಹೀಗಾಗಿ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆದಿರುವ 17 ಮಂದಿ ಆಟಗಾರರ ಪೈಕಿ ಪ್ಲೇಯಿಂಗ್ ಇಲವೆನ್ ನಲ್ಲಿ ಯಾರಿಗೇ ಅವಕಾಶ ಸಿಕ್ಕರೂ ಅದನ್ನ ಸರಿಯಾದ ರೀತಿಯಲ್ಲಿ ಬಳಸಿಕೊಂಡು ತಂಡಕ್ಕೆ ಯಶಸ್ಸು ತಂದುಕೊಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.