Chandrayaan-3: ಭೂಮಿಯ ಮೇಲೆ ಪ್ರತಿಜ್ಞೆ ಮಾಡಿದ್ದನ್ನ ಚಂದ್ರನ ಮೇಲೆ ನಿಜಗೊಳಿಸಿದ್ದೇವೆ: ಪ್ರಧಾನಿ ಮೋದಿ ಸಂತಸ

ಈ ಕ್ಷಣ ಅವಿಸ್ಮರಣೀಯ, ಈ ಕ್ಷಣ ಅಸಾಧಾರಣವಾಗಿದೆ, ಈ ಕ್ಷಣ ಅಭಿವೃದ್ಧಿ ಹೊಂದಿದ ಭಾರತದ ಶಂಖ ನಾದ ,ಇದು ನವ ಭಾರತದ ಸಂಭ್ರಮದ ಕ್ಷಣ ಎಂದು ಪ್ರಧಾನಿ ನರೇಂದ್ರ ಮೋದಿ ಚಂದ್ರಯಾನ 3 ಕುರಿತು ಶ್ಲಾಘಿಸಿದ್ದಾರೆ.

ಬ್ರಿಕ್ಸ್ ಸಮ್ಮೇಳನದಲ್ಲಿ ಭಾಗಿಯಾಗಲು ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ನೇರಪ್ರಸಾರ ವೀಕ್ಷಿಸಿ ಯಶಸ್ಸಿನ ಕುರಿತು ಕೊಂಡಾಡಿದ್ದಾರೆ. ಕಷ್ಟಗಳ ಸಾಗರವನ್ನು ದಾಟುವ ಕ್ಷಣ. ಇದು ವಿಜಯದ ಚಂದ್ರನ ಹಾದಿಯಲ್ಲಿ ನಡೆಯಲು ಕ್ಷಣ. ಈ ಕ್ಷಣವು 140 ಕೋಟಿ ಹೃದಯಗಳ ಬಡಿತಗಳ ಶಕ್ತಿಯಾಗಿದೆ. ಇದು ಭಾರತದಲ್ಲಿ ಹೊಸ ಶಕ್ತಿ, ಹೊಸ ನಂಬಿಕೆ, ಹೊಸ ಪ್ರಜ್ಞೆಯ ಕ್ಷಣವಾಗಿದೆ. ಭಾರತದ ಉದಯೋನ್ಮುಖ ಭವಿಷ್ಯಕ್ಕಾಗಿ ಕರೆ ನೀಡುವ ಕ್ಷಣವಿದು ಎಂದು ಪ್ರಧಾನಿ ಮೋದಿ ಸಂತಸ ವ್ಯಕ್ತಪಡಿಸಿದರು.

ಮುಂದುವರೆದು ಮಾತನಾಡಿದ ಅವರು, ಯಾವುದೇ ದೇಶ ಚಂದ್ರನ ದಕ್ಷಿಣ ಧ್ರುವಕ್ಕೆ ತಲುಪಿಲ್ಲ. ನಮ್ಮ ವಿಜ್ಞಾನಿಗಳ ಕಠಿಣ ಪರಿಶ್ರಮದಿಂದ ನಾವು ಅಲ್ಲಿಗೆ ತಲುಪಿದ್ದೇವೆ. ಇಂದು ನಾವು ಬಾಹ್ಯಾಕಾಶದಲ್ಲಿ ನವ ಭಾರತದ ಹೊಸ ಹಾರಾಟಕ್ಕೆ ಸಾಕ್ಷಿಯಾಗಿದ್ದೇವೆ. ಅಮೃತ ಕಾಲದ ಮೊದಲ ಬೆಳಕಿನಲ್ಲಿ ಈ ಯಶಸ್ಸಿನ ಅಮೃತ ಮಳೆ ಸುರಿದಿದೆ. ನಾವು ಭೂಮಿಯ ಮೇಲೆ ಪ್ರತಿಜ್ಞೆ ಮಾಡಿದ್ದೇವೆ ಮತ್ತು ಅದನ್ನು ಚಂದ್ರನ ಮೇಲೆ ನಿಜಗೊಳಿಸಿದ್ದೇವೆ. ನಮ್ಮ ವೈಜ್ಞಾನಿಕ ಸಹೋದ್ಯೋಗಿಗಳು ಹೇಳಿದಂತೆ ಭಾರತ ಈಗ ಚಂದ್ರನ ಮೇಲಿದೆ. ಇದೊಂದು ಐತಿಹಾಸಿಕ ಕ್ಷಣ ಎಂದು ಕೊಂಡಾಡಿದರು.

More News