Chess World Cup: ಚೆಸ್ ಲೋಕದ ಧ್ರುವತಾರೆ ಈ ಚದುರಂಗ ಆಟದ ಚತುರ ಪ್ರಜ್ಞಾನಂದ

ವಿಶ್ವದ‌ ಕ್ರೀಡಾಲೋಕವನ್ನೇ ತನ್ನತ್ತ ಸೆಳೆದಿರುವ ಭಾರತದ ಯುವ ಚೆಸ್ ಆಟಗಾರ ಪ್ರಜ್ಞಾನಂದ ಚೆಸ್ ವಿಶ್ವಕಪ್ ಗೆಲ್ಲುವ ಹೊಸ್ತಿಲಲ್ಲಿ ನಿಂತಿದ್ದಾರೆ. ತಮ್ಮ ಅದ್ಭುತ ಆಟದಿಂದಲೇ ಕೋಟ್ಯಾಂತರ ಕ್ರೀಡಾಭಿಮಾನಿಗಳ ಗಮನ ಸೆಳೆದಿರುವ 18 ವರ್ಷದ ಪೋರ ಈ ಹಂತಕ್ಕೆ ಬೆಳೆದಿದ್ದೆ ಅದ್ಭುತ.

ತಮಿಳುನಾಡಿನ ಚೆನ್ನೈನಲ್ಲಿ 2005ರ ಆಗಸ್ಟ್ 10ರಂದು ಮಧ್ಯಮ ವರ್ಗದಲ್ಲಿ ಜನಿಸಿದ ಪ್ರಜ್ಞಾನಂದ, ಬಾಲ್ಯದಿಂದಲೇ ಚೆಸ್ ಕ್ರೀಡೆಯ ಬಗ್ಗೆ ಹೆಚ್ಚಿನ‌ ಆಸಕ್ತಿ ಹೊಂದಿದ್ದರು. ಬಾಲ್ಯದಲ್ಲಿ ಅಪ್ಪ ತಂದುಕೊಟ್ಟ ಆಟಿಕೆಯ ಚೆಸ್ ಬೋರ್ಡ್ ಹಿಡಿದು ಬೆಳೆದ ಪ್ರಜ್ಞಾನಂದ, ಇಂದು ತಮ್ಮ ಚಾಣಾಕ್ಷ ಆಟದ ಮೂಲಕ ಇಡೀ ವಿಶ್ವವೇ ತಮ್ಮತ್ತ ತಿರುಗಿ ನೋಡುವಂತೆ ಬೆಳೆದು ನಿಂತಿದ್ದಾರೆ. ಇವರ ಈ ಅಮೋಘ ಕ್ರೀಡಾ ಸಾಧನೆ ಅಂತಾರಾಷ್ಟ್ರೀಯ ಪ್ರಶಸ್ತಿ ಸೇರಿದಂತೆ ಹತ್ತಾರು ಪ್ರಶಸ್ತಿ, ಪುರಸ್ಕಾರಗಳು ಒಲಿದು ಬಂದಿವೆ.

10ನೇ ವರ್ಷದಲ್ಲೇ ಕಿರಿಯ ಅಂತಾರಾಷ್ಟ್ರೀಯ ಮಾಸ್ಟರ್ ಆಗಿ ಸಾಧನೆ ಮೆರೆದ ಪ್ರಜ್ಞಾನಂದ, ಇದಾದ ಎರಡು ವರ್ಷಗಳ ನಂತರ ಎರಡನೇ ಕಿರಿಯ ಗ್ರ್ಯಾಂಡ್ ಮಾಸ್ಟರ್ ಆಗಿ ಮಿಂಚಿದ್ದರು. ಬಳಿಕ 2013ರಲ್ಲಿ ಕೇವಲ 8 ವರ್ಷ ವಯಸ್ಸಿನಲ್ಲಿ 8 ವರ್ಷದೊಳಗಿನ ವರ್ಲ್ಡ್ ಯೂತ್ ಚೆಸ್ ಚಾಂಪಿಯನ್‌ಶಿಪ್‌ ಪ್ರಶಸ್ತಿಯನ್ನು ಗೆದ್ದ ಪ್ರಜ್ಞಾನಂದ, ಕೇವಲ ಏಳು ವರ್ಷದವರಾಗಿದ್ದಾಗ FIDE ಮಾಸ್ಟರ್ ಸಾಧನೆ ಮಾಡಿದರು. ನಂತರ 2015ರಲ್ಲಿ 10 ವರ್ಷದೊಳಗಿನವರ ಪ್ರಶಸ್ತಿ ಕೂಡಾ ಗೆದ್ದರು.

ವಿಶ್ವನಾಥನ್ ಆನಂದ್ ಸ್ಪೂರ್ತಿ
ತಮ್ಮ ಚಾಣಾಕ್ಷತೆ ಹಾಗೂ ಅದ್ಭುತ ಬುದ್ದಿವಂತಿಕೆ ಮೂಲಕ ಚದುರಂಗದ ಆಟದಲ್ಲಿ ಚಾಂಪಿಯನ್ ಪಟ್ಟಕ್ಕೇರುವ ಸನಿಹದಲ್ಲಿರುವ ಪ್ರಜ್ಞಾನಂದ ಅವರಿಗೆ ಐದು ಬಾರಿಯ ವಿಶ್ವ ಚಾಂಪಿಯನ್ ಮತ್ತು ಭಾರತದ ಮೊದಲ ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್ ಅವರೇ ಸ್ಫೂರ್ತಿ ಆಗಿದ್ದಾರೆ. ಬಾಲ್ಯದಿಂದಲೂ ವಿಶ್ವನಾಥನ್ ಆನಂದ್ ಅವರ ಚೆಸ್ ಪಂದ್ಯಗಳನ್ನು ನೋಡುತ್ತಾ ಬೆಳೆದಿರುವ ಪ್ರಜ್ಞಾನಂದ ಇಂದು ಅವರದ್ದೇ ಹಾದಿಯಲ್ಲಿ ಸಾಗುತ್ತಿದ್ದಾರೆ.

ಇನ್ನೂ ಆರ್.ಬಿ. ರಮೇಶ್ ಅವರ ಮಾರ್ಗದರ್ಶನ ಪಡೆದು ಸಾಗುತ್ತಿರುವ ಪ್ರಜ್ಞಾನಂದ ಅವರ ಅಕ್ಕ ವೈಶಾಲಿ ರಮೇಶಬಾಬು ಕೂಡ ಕೂಡ ಚೆಸ್ ಆಟದಲ್ಲಿ ಅದ್ಭುತ ಸಾಧನೆ ಮಾಡಿದ್ದಾರೆ. ಖ್ಯಾತ ಚೆಸ್ ಆಟಗಾರ್ತಿಯಾಗಿದ್ದು, ಈ ಹಿಂದೆ ಅವರು 14 ವರ್ಷದೊಳಗಿನ ಮತ್ತು 12 ವರ್ಷದೊಳಗಿನ ಬಾಲಕಿಯರ ವಿಶ್ವ ಯೂತ್ ಚೆಸ್ ಚಾಂಪಿಯನ್‌ಶಿಪ್ ಗೆದ್ದ ಸಾಧನೆ ವೈಶಾಲಿ ರಮೇಶಬಾಬು ಮಾಡಿದ್ದಾರೆ. ಅಲ್ಲದೇ ಕಳೆದ ವರ್ಷ ಚೆನ್ನೈನಲ್ಲಿ ನಡೆದ ಚೆಸ್ ಒಲಿಂಪಿಯಾಡ್‌ನಲ್ಲಿ ಈ ಸಹೋದರ-ಸಹೋದರಿ ಜೋಡಿ ವೈಯಕ್ತಿಕ ಸ್ಪರ್ಧೆಗಳಲ್ಲಿ ಕಂಚಿನ ಪದಕ ಗೆದ್ದಿದ್ದರು.

ಇಂದು ಫೈನಲ್ ಪಂದ್ಯ
ವಿಶ್ವದ ಗಮನ ಸೆಳೆದಿರುವ ಚೆಸ್‌ ವಿಶ್ವಕಪ್‌ ಫೈನಲ್‌ ಪಂದ್ಯ ಇಂದು ನಡೆಯಲಿದ್ದು, ವಿಶ್ವದ ನಂಬರ್ 1 ಆಟಗಾರ ಮ್ಯಾಗ್ನಸ್ ಕಾರ್ಲ್‌ಸೆನ್ ವಿರುದ್ಧ ಭಾರತದ ಯುವ ಚೆಸ್ ಚಾಂಪಿಯನ್ ಪ್ರಜ್ಞಾನಂದ ಅವರು ಟೈ ಬ್ರೇಕರ್‌ ಆಡಲಿದ್ದಾರೆ. ಈ ಪಂದ್ಯದಲ್ಲಿ ಪ್ರಜ್ಞಾನಂದ ಗೆದ್ದರೆ, ಜಾಗತಿಕ ಮಟ್ಟದಲ್ಲಿ ಹೊಸ ದಾಖಲೆ ನಿರ್ಮಾಣವಾಗಲಿದ್ದು, ಈ ಕ್ಷಣಕ್ಕಾಗಿ ಇಡೀ ಭಾರತೀಯ ಕ್ರೀಡಾಲೋಕವೇ ಕಾದು ಕುಳಿತಿದೆ.

More News