Cauvery Water Issue: ಕಾವೇರಿ ಕಾದಾಟ: ಇಂದು ಸುಪ್ರೀಂ ನಲ್ಲಿ ಮಹತ್ವದ ವಿಚಾರಣೆ

ನೈರುತ್ಯ ಮುಂಗಾರು ಮಳೆಯ ಕೊರತೆ ಅಂತರರಾಜ್ಯಗಳ ನಡುವಿನ ಜಲವಿವಾದಕ್ಕೆ ಮತ್ತೆ ಜೀವ ನೀಡಿದೆ.
ಕಾವೇರಿ ನದಿ ನೀರು ಹರಿಸಲು ಕರ್ನಾಟಕಕ್ಕೆ ನಿರ್ದೇಶನ ನೀಡುವಂತೆ ಕೋರಿ ತಮಿಳುನಾಡು ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದು, ಇಂದು ಸುಪ್ರೀಂ ವಿಚಾರಣೆ ಕೈಗೆತ್ತಿಕೊಳ್ಳಲಿದೆ.

ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಚಾರ ಇಂದು ಸುಪ್ರೀಂಕೋರ್ಟ್ ನಲ್ಲಿ ತುರ್ತು ಅರ್ಜಿಯ ವಿಚಾರಣೆ
ನಡೆಯಲಿದೆ. ಕರ್ನಾಟಕ ತಮಿಳುನಾಡು ನದಿ ನೀರಿನ ವಿವಾದ ಕ್ಕಾಗಿಯೇ ನ್ಯಾಯಮೂರ್ತಿ ಬಿ.ಆರ್. ಗವಾಯಿ ನೇತೃತ್ವದ ತ್ರಿ ಸದಸ್ಯ ಪೀಠ ರಚಿಸಿರುವ ಸುಪ್ರೀಂ,
ಎರಡು ರಾಜ್ಯಗಳ ವಾದ – ಪ್ರತಿವಾದ ಆಲಿಸಿ ಅಂತಿಮ ತೀರ್ಪು ನೀಡುವ ಸಾಧ್ಯತೆ ಇದೆ.

ಕಳೆದ ವಾರ ತಮಿಳು ನಾಡು ಕಾವೇರಿ ನೀರಿನ ಸಂಬಂಧ ತುರ್ತು ಅರ್ಜಿಯನ್ನು ಸಲ್ಲಿಸಿತ್ತು. ತಮಿಳುನಾಡು ಅರ್ಜಿಗೆ ಮೇಲ್ಮನವಿ ಸಲ್ಲಿಸಿದ ಕರ್ನಾಟಕ ಸರ್ಕಾರ ಪರ ಹಿರಿಯ ವಕೀಲ ಶ್ಯಾಮ್ ದಿವಾನ್ ಮತ್ತು ಮೋಹನ್ ಕಾತರಕಿ
ಪ್ರತ್ಯೇಕ ಅಫಿಡೆವಿಟ್ ನಲ್ಲಿ ತಮಿಳುನಾಡು ವಿರುದ್ಧ ಆರೋಪ ಮಾಡಿದ್ದಾರೆ.

ಅಫಿಡವಿಟ್ ನಲ್ಲಿ ಏನಿದೆ…?

ತಮಿಳುನಾಡು ಸದ್ಯ 22 ಟಿಎಂಸಿ ನೀರು ಬಳಸಿದೆ. ಸೆಪ್ಟೆಂಬರ್‌ ವರೆಗೂ 9.83 ಟಿಎಂಸಿ ನೀರನ್ನು ಬಳಸಬಹುದಾಗಿದೆ. ಕುರುವೈ ಬೆಳೆಗೆ ಬೇಕಾಗಿರುವುದು 32 ಟಿಎಂಸಿ ನೀರು. ಈಗ ತಮಿಳುನಾಡಿನಲ್ಲಿ 1.85 ಲಕ್ಷ ಹೆಕ್ಟೇರ್ ಕುರುವೈ ಬೆಳೆ ಬೆಳೆಯಲಾಗಿದೆ. ಬೆಳೆಗೆ ಬೇಕಾಗಿದ್ದಕ್ಕಿಂತ ಹೆಚ್ಚಿನ ಮಟ್ಟದಲ್ಲೇ ನೀರಿದ್ದರೂ ಕರ್ನಾಟಕದಿಂದ ನೀರು ಪೂರೈಕೆ‌ ಮಾಡಲು ಆಗ್ರಹಿಸುತ್ತಿದೆ.
ಕರ್ನಾಟಕ ಕಾವೇರಿ ನೀರಿನ ವಿಚಾರದಲ್ಲಿ ಸಂಕಷ್ಟದಲ್ಲಿದೆ. ಈ ವರ್ಷದ ಅಂತ್ಯಕ್ಕೆ ರಾಜ್ಯಕ್ಕೆ 200 ಟಿಎಂಸಿ ನೀರಿನ ಅವಶ್ಯಕತೆ ಇದೆ. ಕುಡಿಯುವ ನೀರಿನ ಸಲುವಾಗಿ ಸಾಕಷ್ಟು ನೀರು ಬಳಸಬೇಕಿದೆ. ಸಂಕಷ್ಟದ ಸ್ಥಿತಿಯಲ್ಲಿಯೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಾ ತಮಿಳುನಾಡಿಗೆ ಪ್ರತಿದಿನ 10ಸಾವಿರ ಕ್ಯೂಸೆಕ್ ನೀರು ಹರಿಸಿ ಆದೇಶ ಪಾಲಿಸಿದೆ.
ಮುಂಗಾರು ಮಳೆಯ ಕೊರತೆಯ ಕಾರಣ ಕೆಆರ್‌ಎಸ್ ಜಲಾಶಯ ಭರ್ತಿಯಾಗಿಲ್ಲ. ಆದರೆ ಡ್ಯಾಂನಿಂದ 15,576 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಆದರೆ ತಮಿಳುನಾಡು ಸರ್ಕಾರ ಜೂನ್, ಜುಲೈ ಮತ್ತು ಆಗಸ್ಟ್‌ ತಿಂಗಳ ನೀರು ಬಿಡುಗಡೆಗಾಗಿ ಆಗ್ರಹಿಸಿದೆ ಎಂದು ದೂರಿದ್ದಾರೆ.

ಸದ್ಯ ತಮಿಳುನಾಡು ಸರ್ಕಾರ ಸಲ್ಲಿಸಿರುವ ತುರ್ತು ಅರ್ಜಿಗೆ ಮಾನ್ಯತೆ ನೀಡಬೇಕಾಗಿಲ್ಲ. ದಿಕ್ಕು ತಪ್ಪಿಸುವ ಕೆಲಸವನ್ನು ತಮಿಳುನಾಡು ಮಾಡುತ್ತಿದೆ. ಕರ್ನಾಟಕವೇ ಸಂಕಷ್ಟದಲ್ಲಿದೆ. ಈ ಸಮಯದಲ್ಲಿ ತುರ್ತು ಅರ್ಜಿಯ ವಿಚಾರಣೆಗೆ ಇದು ಸೂಕ್ತವಲ್ಲವೆಂದು ಕರ್ನಾಟಕ ಸುಪ್ರೀಂಗೆ ಸಲ್ಲಿಸಿರುವ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಇಂದು ತಮಿಳುನಾಡು ಮತ್ತು ಕರ್ನಾಟಕದ ಕಾವೇರಿ ನೀರಿನ ಹಗ್ಗಜಗ್ಗಾಟದ ಭವಿಷ್ಯದ ನಿರ್ಧಾರವಾಗುವ ಸಾಧ್ಯತೆ ಇದ್ದು, ತ್ರಿ ಸದಸ್ಯ ಪೀಠ ಇಂದು ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಲಿದೆ.

More News