AFG v PAK: ಪಾಕಿಸ್ತಾನದ ವಿರುದ್ಧ ಭರ್ಜರಿ ಶತಕ: ಧೋನಿ ದಾಖಲೆ ಮುರಿದ ಗುರ್ಬಾಜ್

ಪಾಕಿಸ್ತಾನ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಅಫ್ಘಾನಿಸ್ತಾನ 1 ವಿಕೆಟ್ ರೋಚಕ ಸೋಲು ಕಂಡರು, ಅಫ್ಘಾನ್ ತಂಡದ ರೆಹಮಾನುಲ್ಲಾ ಗುರ್ಬಾಜ್ ಭರ್ಜರಿ ಶತಕ ಸಿಡಿಸುವ ಮೂಲಕ ಗಮನ ಸೆಳೆದರು. ಅಲ್ಲದೇ ಈ ಶತಕದೊಂದಿಗೆ ಟೀಂ ಇಂಡಿಯಾದ ಮಾಜಿ ‌ಕ್ಯಾಪ್ಟನ್ ಎಂಎಸ್ ಧೋನಿ ಹೆಸರಿನಲ್ಲಿದ್ದ ದಾಖಲೆಯನ್ನೂ ಅಳಿಸಿ ಹಾಕಿದ್ದಾರೆ.

ಪಾಕಿಸ್ತಾನ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ ರೆಹಮಾನುಲ್ಲಾ ಗುರ್ಬಾಜ್, 151 ಎಸೆತಗಳಿಗೆ 14 ಬೌಂಡರಿ, 3 ಸಿಕ್ಸರ್​​ಗಳ ನೆರವಿನಿಂದ 151 ರನ್‌ಗಳಿಸಿ ಮಿಂಚಿದರು. ಇದರೊಂದಿಗೆ ಪಾಕಿಸ್ತಾನದ ವಿರುದ್ಧ ಶತಕ ದಾಖಲಿಸಿದ ಅಫ್ಘಾನಿಸ್ತಾನದ ಮೊದಲ ಆಟಗಾರ ಎಂಬ ಹೆಗ್ಗಳಿಕೆ ಪಡೆದರು. ಅಪ್ಟೇ ಅಲ್ಲದೇ ಪಾಕಿಸ್ತಾನದ ಎದುರು ಅಧಿಕ ರನ್ ಕಲೆಹಾಕಿದ ವಿಕೆಟ್ ಕೀಪರ್ ಬ್ಯಾಟರ್ ಎಂಬ ದಾಖಲೆ ಕೂಡ ಗುರ್ಬಾಜ್ ಬರೆದರು.

ಇನ್ನೂ ತಮ್ಮ ಅಮೋಘ ಶತಕದಿಂದ ಮಿಂಚಿದ ಗುರ್ಬಾಜ್, ಟೀಂ ಇಂಡಿಯಾದ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಹೆಸರಿನಲ್ಲಿದ್ದ ದಾಖಲೆ ಸಹ ಬ್ರೇಕ್ ಮಾಡಿದ್ದಾರೆ. ಈ ಹಿಂದೆ 2005ರಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಪಂದ್ಯದಲ್ಲಿ ಧೋನಿ, 123 ಎಸೆತಗಳಲ್ಲಿ 148 ರನ್‌ಗಳಿಸಿದ್ದರು. ಈ ಶತಕದ ಮೂಲಕ ಮಹೀ, ಪಾಕಿಸ್ತಾನದ ಎದುರು ಗರಿಷ್ಠ ರನ್‌ಗಳಿಸಿದ ವಿಕೆಟ್ ಕೀಪರ್ ಎಂಬ ದಾಖಲೆ ಹೊಂದಿದ್ದರು. ಆದರೆ ದಶಕಗಳ ಬಳಿಕ ಈ ದಾಖಲೆಯನ್ನ ಇದೀಗ ಗುರ್ಬಾಜ್ ಮುರಿದಿದ್ದಾರೆ.

ಕೇವಲ ಧೋನಿ ದಾಖಲೆ ಮುರಿಯುವುದಷ್ಟೇ ಅಲ್ಲದೇ, 21ನೇ ವಯಸ್ಸಿನೊಳಗೆ ಏಕದಿನ ಕ್ರಿಕೆಟ್‌ನಲ್ಲಿ ಹೆಚ್ಚು ಶತಕ ಬಾರಿಸಿದ 3ನೇ ಬ್ಯಾಟರ್ ಎಂಬ ಹೆಗ್ಗಳಿಕೆ ಸಹ ಗುರ್ಬಾಜ್ ತಮ್ಮದಾಗಿಸಿಕೊಂಡರು. ಪ್ರಸ್ತುತ ಈ ಪಟ್ಟಿಯಲ್ಲಿ 6 ಶತಕ ಸಿಡಿಸಿದ ಶ್ರೀಲಂಕಾದ ಉಪುಲ್ ತರಂಗ, ಸೌತ್ ಆಫ್ರಿಕಾದ ಕ್ವಿಂಟನ್ ಡಿಕಾಕ್ ಮೊದಲೆರಡು ಸ್ಥಾನಗಳಲ್ಲಿ ಇದ್ದಾರೆ. ಸದ್ಯ ಐದು ಶತಕ ಸಿಡಿಸಿರುವ ಗುರ್ಬಾಜ್ 3ನೇ ಸ್ಥಾನಕ್ಕೇರಿದ್ದಾರೆ. ಅಫ್ಘಾನಿಸ್ತಾನದ ಪ್ರಮುಖ ಬ್ಯಾಟರ್ ಆಗಿರುವ ಗುರ್ಬಾಜ್, 23 ಇನಿಂಗ್ಸ್​ಗಳಲ್ಲಿ ಐದು ಶತಕ ಬಾರಿಸಿದ್ದರೆ. ಪಾಕ್ ತಂಡದ ಇಮಾಮ್-ಉಲ್-ಹಕ್ ಮತ್ತು ಸೌತ್ ಆಫ್ರಿಕಾದ ಕ್ವಿಂಟನ್ ಡಿ ಕಾಕ್ 19 ಇನ್ನಿಂಗ್ಸ್‌ಗಳಲ್ಲಿ 5 ಶತಕ ಬಾರಿಸಿದ್ದರು.

More News