ಬೆಂಗಳೂರು: ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಹಾಗೂ ಹೆಚ್ಚು ಕೌಶಲ್ಯವಿರುವ ಕ್ಷೇತ್ರ ಎಂದು ಆಭರಣ ಉದ್ಯಮ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದ್ದರಿಂದ ಆಧುನಿಕ ತಂತ್ರಜ್ಞಾನದಿಂದ ಕೂಡಿದ ಹಾಗೂ ಆಭರಣ ಉತ್ಪಾದನೆಗೆ ಅನುಕೂಲವಾಗುವಂಥ ಅತ್ಯಾಧುನಿಕ ಜುವೆಲ್ಲರಿ ಪಾರ್ಕ್ ನಿರ್ಮಾಣಕ್ಕೆ ಅಗತ್ಯ ಇರುವ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜುವೆಲ್ಲರಿ ಸಂಸ್ಥೆಗೆ ಸಲಹೆ ನೀಡಿದರು.
ಅರಮನೆ ಮೈದಾನದಲ್ಲಿ ಇಂದು ಆಯೋಜಿಸಲಾಗಿರುವ ಸೌತ್ ಜ್ಯುವೆಲ್ಲರಿ ಷೋ ಉದ್ಘಾಟಿಸಿ ಮಾತನಾಡಿದ ಅವರು, ಬ್ಯುಲಿಯನ್ ವಿನಿಮಯ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಭಾರತದ ಆಭರಣ ವ್ಯಾಪಾರ ಅಂತರರಾಷ್ಟ್ರೀಯ ಮಟ್ಟದಲ್ಲಿ ಪೈಪೋಟಿ ಮಾಡಬೇಕಾದ ಸಂದರ್ಭವಿದೆ. ಗೋಲ್ಡ್ ಕಂಟ್ರೋಲ್ ಕಾಯ್ದೆ ತೆಗೆದು ಹಾಕಿದ ನಂತರ ಮುಕ್ತ ವಾತಾವರಣ ನಿರ್ಮಾಣವಾಗಿದೆ. ಚಿನ್ನದ ವ್ಯಾಪಾರ ಉದ್ದಿಮೆಯಾಗಿ ಬೆಳೆದಿದೆ ಎಂದು ಅವರು ಅಭಿಪ್ರಾಯಪಟ್ಟರು.
ಒಡವೆ ಎಂದರೆ ಒಂದು ಆತ್ಮೀಯತೆ. ಆಭರಣದ ವಹಿವಾಟು ಅಂತಃಕರಣವುಳ್ಳ ವ್ಯಾಪಾರ, ಇದು ಬಹಳ ಪುರಾತನ ವೃತ್ತಿಯಾಗಿದ್ದು ಭಾವನಾತ್ಮಕ ಸಂಬಂಧ ಬೆಸೆಯುವಂಥದ್ದು ಎಂದರು. ಆಭರಣ ಮಾಡುವ ಕಲೆ ಸೂಕ್ಷ್ಮವಾದುದ್ದು. ಆಭರಣ ತಯಾರಿ ಕರ್ನಾಟಕದ ಪಾರಂಪರಿಕ ಕಲೆಯಾಗಿದ್ದು, ಇದನ್ನು ಉಳಿಸಿ ಬೆಳೆಸಬೇಕು ಎಂದು ಕರೆನೀಡಿದರು.
ಚಿನ್ನದ ವ್ಯಾಪಾರಿಗಳು ಸಮಾಜದ ಗೌರವ ಮತ್ತು ಬಾಂಧವ್ಯ ಕಾಪಾಡುವ ಬಂಧುಗಳು. ದೇಶಕ್ಕೆ ಆದಾಯ ತರುವ ನಿಟ್ಟಿನಲ್ಲಿ ಕೆಲಸ ಮಾಡಬೇಕಲ್ಲದೆ, 2 ನೇ ಮತ್ತು 3 ನೇ ಸ್ತರದ ನಗರಗಳಲ್ಲಿ ವ್ಯಾಪಾರ ವಹಿವಾಟುಗಳು ವೃದ್ಧಿಸುವಂತೆ ಕೆಲಸ ಮಾಡಬೇಕಾಗಿದೆ ಎಂದು ತಿಳಿಸಿದರು.
ಭಾರತೀಯ ಆರ್ಥಿಕತೆಯಲ್ಲಿ ಉಳಿತಾಯ ಸಂಸ್ಕೃತಿ ಇದೆ. ನಮ್ಮ ಜನರ ಉಳಿತಾಯ ಮನೋಭಾವ ಆಭರಣ ಉದ್ಯಮಕ್ಕೆ ಸಹಕಾರಿಯಾಗಿದೆ ಎಂದು ಹೇಳಿದರು. ಮಾಜಿ ವಿಧಾನ ಪರಿಷತ್ ಸದಸ್ಯ ಟಿ.ಎ.ಸವರಣ ಸೇರಿದಂತೆ ಇನ್ನಿತರ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.