ಹೆಗಲ ಮೇಲಿನ ಮಂಗ, ಸುತ್ತುವರಿದ ವಾನರರಿಗೆ ಬಾಳೆಹಣ್ಣು ತಿನ್ನಿಸಿ, ಆಟವಾಡಿ, ಕಾಲ ಕಳೆದ ಸಚಿವರು

ಕೊಪ್ಪಳ : ರಾಜ್ಯದಲ್ಲಿ ನಡೆಯುತ್ತಿರುವ ಉಪಚುನಾವಣೆ ಆಡಳಿತರೂಢ ಬಿಜೆಪಿ ಮುಖಂಡರ ನಿದ್ದೆಗೆಡಿಸಿದೆ. ಅದರಲ್ಲೂ ಮುಖ್ಯಮಂತ್ರಿಯವರಂತೂ ಫುಲ್ ಬ್ಯುಸಿಯಾಗಿದ್ದಾರೆ. ಕಳೆದ ಸುಮಾರು ಎರಡು ವಾರಗಳಿಂದ ಹಾನಗಲ್ ಮತ್ತು ಸಿಂಧಗಿಯಲ್ಲೇ ತಂಗಿದ್ದು, ಎಡೆಬಿಡದೇ ಚುನಾವಣಾ ಪ್ರಚಾರದಲ್ಲಿ ತಂಗಿದ್ದಾರೆ.

ಇನ್ನೊಂದೆಡೆ ಅವರ ಸಚಿವ ಸಂಪುಟದ ಸಹದ್ಯೋಗಿಗಳಲ್ಲಿ ಕೆಲವರು ಚುನಾವಣಾ ಪ್ರಚಾರದಲ್ಲಿ ಕಾಣಿಸಿಕೊಂಡರೆ, ಇನ್ನು ಕೆಲವರು ಇತ್ತ ವಿಧಾನ ಸೌಧದಲ್ಲೂ ಇಲ್ಲ, ಎಲ್ಲಿ ಹೋಗಿದ್ದಾರೆ ಎನ್ನುವುದೇ ಮತದಾರರು ತಿಳಿಯದಂತಾಗಿದ್ದಾರೆ. ಆದರೆ, ಇಲ್ಲೊಬ್ಬ ಸಚಿವರು ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದಾರೆ. ಆವಾಗ ಅಲ್ಲಿ ಕೋತಿಗಳಿಗೆ ಬಾಳೆಹಣ್ಣು ತಿನ್ನಿಸಿ ಮಜಾ ಸವಿಯುತ್ತಿದ್ದಾರೆ.   

ಕಳೆದ ಎರಡು ದಿನಗಳ ಹಿಂದೆ ನಡೆದ ಘಟನೆ ಇದಾಗಿದೆ. ಸಚಿವರ ಭುಜವೇರಿದ ವಾನರರು, ಹತ್ತಾರು ಮಂಗಗಳು ಸುತ್ತುವರೆದವು, ಅವುಗಳೊಂದಿಗೆ ಆಟವಾಡಿ ಕಾಲ ಕಳೆದು. ಅವುಗಳಿಗೆ ತಿನ್ನಲು ಬಾಳೆ ಹಣ್ಣು ನೀಡಿ ಖುಷಿ ಪಟ್ಟರು  ಸಚಿವ ಶ್ರೀರಾಮುಲು.

ಕೊಪ್ಪಳದ ಕಿಷ್ಕಿಂದಾ ಪ್ರದೇಶದ ಪಂಪಾ ಸರೋವರದಲ್ಲಿ ಈ ಘಟನೆ ನಡೆದಿದ್ದು, ಪಂಪಾಸರೋವರ್ ಬಳಿಯ ಶ್ರೀಮಹಾಲಕ್ಷ್ಮಿ ದೇವಸ್ಥಾನಕ್ಕೆ ಸಾರಿಗೆ ಸಚಿವ ಶ್ರೀರಾಮುಲು ಭೇಟಿ ಮಾಡಿದ ಸಂದರ್ಭದಲ್ಲಿ ಈ ಘಟನೆ ಜರುಗಿದೆ.

ದೇವರ ದರ್ಶನ ಪಡೆದು ಆವರಣದಲ್ಲಿ ತೆರಳುತ್ತಿರುವಾಗ ಕೆಲವು ವಾನರರು ಹತ್ತಿರ ಬಂದರು. ಇವುಗಳನ್ನು ಪುಳಕಿತರಾದ ಸಚಿವ ಶ್ರೀರಾಮುಲು, ಅವುಗಳಿಗೆ ಬಾಳೆ ಹಣ್ಣು ತಿನ್ನಿಸಿದರು. ಸಚಿವರನ್ನು ಸುತ್ತುವರೆದ ಹತ್ತಾರು ಮಂಗಳಲ್ಲಿ ಒಂದು ವಾನರ ಸಚಿವರ ಹೆಗಲ ಮೇಲೆ ಹತ್ತಿ ಕುಳಿತಿತ್ತು.

ಸಚಿವ ಹೆಗಲ ಮೇಲೆಯೇ ಇದ್ದ ಮಂಗಕ್ಕೆ ಬಾಳೆಹಣ್ಣು ನೀಡಿದರು. ಆ ಕೋತಿಯೂ ಕೂಡ ಬಾಳೆಹಣ್ಣನ್ನು ತಿಂದು ಮತ್ತೆ ಮತ್ತೆ ಬೇಕು ಎಂದು ಕೇಳುತ್ತಿದ್ದ ದೃಷ್ಯ ಕಂಡುಬಂದಿತ್ತು.

ಇನ್ನಷ್ಟು ಬಾಳೆಹಣ್ಣುಗಳನ್ನು ತರಿಸಿದ ಸಚಿವರು, ವಾನರರಿಗೆ ತಿನ್ನಿಸಿ ಕಾಲ ಕಳೆದರು. ವಾನರಗಳೊಂದಿಗೆ ಕೆಲಸಮಯ ಕಾಲ ಕಳೆದಿದ್ದು ನನ್ನ ಜೀವನ ಅವಿಸ್ಮರಣಿಯ ಘಟನೆ ಎಂದು ಇದೇ ಸಂದರ್ಭದಲ್ಲಿ ಅವರು ಹೇಳಿಕೊಂಡಿದ್ದಾರೆ. ಶ್ರೀರಾಮುಲು ತಲೆಯ ಮೇಲೆ ವಾನರ ಕುಳಿತ ಫೋಟೊ ಫುಲ್ ವೈರಲ್ ಆಗಿದೆ.

More News