ಹುಬ್ಬಳ್ಳಿ: ‘ಇತ್ತೀಚಿನ ಬೆಳವಣಿಗೆಗಳನ್ನು ನೋಡಿದರೆ ಬಿಜೆಪಿಯಲ್ಲಿ ಅಂತರಿಕವಾಗಿ ಅಸಮಾಧಾನ ಭುಗಿಲೆದ್ದಿದೆ ಎಂದು ಹೇಳಬಹುದು’ ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು.
ಬಿಜೆಪಿ ಮುಖಂಡರು ಡಿ.ಕೆ. ಶಿವಕುಮಾರ್ ಅವರ ಬಳಿ ಬರುತ್ತಿರುವುದನ್ನು, ಹೋಗುತ್ತಿರುವುದನ್ನು ನೋಡಿದರೆ ಅಸಮಾಧಾನ ಭುಗಿಲೆದ್ದಿರುವುದು ಗೊತ್ತಾಗುತ್ತದೆ ಎಂದರು.
ಕಾವೇರಿ- ಸಂಕಷ್ಟ ಸೂತ್ರ ರಚನೆಗೆ ಆಗ್ರಹ: ಕಾವೇರಿ ನದಿ ನೀರು ಹಂಚಿಕೆ ಕುರಿತಂತೆ ನಮ್ಮ ನಿಲುವನ್ನು ಈಗಾಗಲೇ ಸುಪ್ರೀಂ ಕೋರ್ಟ್ ಗೆ ತಿಳಿಸಿದ್ದೇವೆ. 2-3 ದಿನಗಳಲ್ಲಿ ವಿಚಾರಣೆ ಕೈಗೆತ್ತಿಕೊಳ್ಳಬಹುದು. ಸಂಕಷ್ಟ ಸೂತ್ರ ರಚನೆಯಾಗಬೇಕು ಎನ್ನುವುದು ನಮ್ಮ ಬೇಡಿಕೆ ಎಂದು ಹೇಳಿದರು.

ಸೆಪ್ಟೆಂಬರ್‌ಗೆ ಪ್ರವಾಸೋದ್ಯಮ ನೀತಿ: ಸೆಪ್ಟೆಂಬರ್ ವೇಳೆಗೆ ರಾಜ್ಯದ ಪ್ರವಾಸೋದ್ಯಮ ನೀತಿಗೆ ಅಂತಿಮ ರೂಪ ಕೊಡಲಾಗುವುದು ಎಂದು ತಿಳಿಸಿದರು.
ತಕ್ಕ ಶಾಸ್ತಿ ಆಗಲಿ: ಕೋವಿಡ್ ಸಂಕಷ್ಟದ ಕಾಲದಲ್ಲಿ ಜನರು ರಸ್ತೆಯಲ್ಲಿ ಸಾಯುತ್ತಿರುವಾಗ ಭ್ರಷ್ಟಾಚಾರ ಮಾಡಿದ್ದಾರೆ ಎಂದರೆ ಅವರ ಮನಸ್ಥಿತಿ ಯಾವ ಮಟ್ಟದಲ್ಲಿತ್ತು ಎನ್ನುವುದನ್ನು ಊಹಿಸಿಕೊಳ್ಳಬೇಕು. ತನಿಖೆಯಾಗಲಿ, ಕಾರಣರಾದವರಿಗೆ ತಕ್ಕ ಶಾಸ್ತಿಯಾಗಲಿ ಎಂದರು