BJP MLA ON GRUHA LAKSHMI SCHEME: ಬಿಜೆಪಿ ಪಕ್ಷ ನನಗೆ ಪಿಎಂ ಮೋದಿಯವರ ಕಾರ್ಯಕ್ರಮದ ಮಾಹಿತಿ ನೀಡಲಿಲ್ಲ: ಶಾಸಕನಾಗಿ ಸರ್ಕಾರದ ಯೋಜನೆ ಜನರಿಗೆ ತಲುಪಿಸುತ್ತಿದ್ದೇನೆ: ಎಸ್ ಟಿ ಸೋಮಶೇಖರ್

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನ ಇಸ್ರೋ ಭೇಟಿ ವೇಳೆ ನನಗೆ ಎರಡು ಬಸ್ ನಲ್ಲಿ ಜನ ಕಳುಹಿಸಿ ಅಂತಾ ಹೇಳಿದ್ದರು ಹಾಗೆನೇ, ಮೋದಿ ಬರುವ ಸಮಯ, ಕಾರ್ಯಕ್ರಮದ ಬಗ್ಗೆ ಯಾವುದೇ ಮಾಹಿತಿ ಕೊಡಲಿಲ್ಲ ಎಂದು ಪರೋಕ್ಷವಾಗಿ ಬಿಜೆಪಿ ಮುಖಂಡರ ನಡವಳಿಕೆ ವಿರುದ್ಧ ಶಾಸಕ ಎಸ್ ಟಿ ಸೋಮಶೇಖರ್ ತಮ್ಮ ಅಸಮಾಧಾನ ಹೊರಹಾಕಿದರು.

ಬೆಂಗಳೂರಿನಲ್ಲಿ ಇಂದು ಗೃಹಲಕ್ಷ್ಮೀ ಯೋಜನೆಗೆ ಹೆಸರು ನೋಂದಾಯಿಸಿಕೊಳ್ಳುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪಕ್ಷದ ಕಚೇರಿಯಲ್ಲಿ ಕೂಡಾ ಮೋದಿಯವರು ಬರುವು ಸಂಬಂಧ ಸಭೆ ನಡೆಸಿದ್ದರು, ಅಲ್ಲಿಗೂ ನನ್ನನ್ನು ಕರೆಯಲಿಲ್ಲ ಎಂದು ಹೇಳಿದರು.
ನಾನು ಪಕ್ಷ ಬಿಡುವುದರ ಬಗ್ಗೆ ಯಾರ ಜತೆಗೂ ಚರ್ಚೆ ಮಾಡಿಲ್ಲ, ಕಾಂಗ್ರೆಸ್ ನಾಯಕರ ಜತೆಗೂ ಇದರ ಬಗ್ಗೆ ಮಾತನಾಡಿಲ್ಲ ಸಿಎಂ ಜತೆಗೂ ರಾಜಕೀಯ ಮಾತಾಡಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಕಾಂಗ್ರೆಸ್ ಗೆ ನನ್ನ ಬೆಂಬಲಿಗರು ಅಷ್ಟೇ ಅಲ್ಲ, ಎಲ್ಲ‌ ಕ್ಷೇತ್ರಗಳಿಂದಲೂ ಹೋಗಿದ್ದಾರೆ ಎಂದರು.

ಯಾರು ಶಾಸಕರ ಜತೆ ಇರಬೇಕು ಅನ್ಕೊಂಡಿದಾರೋ ಅವರು ನನ್ನ ಜತೆಯೇ ಇದ್ದಾರೆ ಎಂದು ಸ್ಪಷ್ಟಪಡಿಸಿದ ಸೋಮಶೇಖರ್, ಈ ಬೆಳವಣಿಗೆ ಸಂಬಂಧ ಯಡಿಯೂರಪ್ಪ ಅವರ ಜತೆಗೂ ಮಾತುಕತೆ ಮಾಡಿದ್ದೇನೆ, ದುಡುಕಬೇಡ ಅಂತ ಯಡಿಯೂರಪ್ಪ ಹೇಳಿದ್ದಾರೆ ಎಂದರಲ್ಲದೆ, ನಾನು ದುಡುಕುತ್ತಿಲ್ಲ ಎಂದರು.

ಗೃಹ ಲಕ್ಷ್ಮಿ ಯೋಜನೆ ಬಗ್ಗೆ ಸಭೆ
ಗೃಹ ಲಕ್ಷ್ಮಿ ಯೋಜನೆ ಬಗ್ಗೆ ಸಭೆ ವಿಚಾರವಾಗಿ ಮಾತನಾಡಿದ ಅವರು, ನಾನು ಜವಾಬ್ದಾರಿಯುತ ಶಾಸಕನಾಗಿ ಸರ್ಕಾರದ ಯೋಜನೆ ತಲುಪಿಸುವ ಪ್ರಯತ್ನ ಮಾಡುತ್ತಿದ್ದೇನೆ, ನಾಳೆ ನನ್ನ ಕ್ಷೇತ್ರದ ಜನರು ಸರ್ಕಾರದ ಯೋಜನೆ ಬಗ್ಗೆ ಕೇಳಿದರೆ ಅದು ಬೇರೆ ಸರ್ಕಾರದ ಯೋಜನೆ ಅಂತಾ ಹೇಳಲಿಕ್ಕಾಗುತ್ತಾದಾ? ಯಾವುದೇ ಸರ್ಕಾರ ಇದ್ದರೂ ಯೋಜನೆ‌ ತಲುಪಿಸುವುದು ಜವಾಬ್ದಾರಿಯುತ ಶಾಸಕನಾಗಿ ನನ್ನ ಕರ್ತವ್ಯ ಎಂದು ಸ್ಪಷ್ಟನೆ ನೀಡಿದರು.
ಯಾರು ಏನೇ ಕಮೆಂಟ್ ಮಾಡಿದರೂ ನಾನು ಚಿಂತೆ ಮಾಡುವ ಅವಶ್ಯಕತೆ ಇಲ್ಲ ಎಂದು ಹೇಳಿದ ಬಿಜೆಪಿ ಶಾಸಕ ಎಸ್.ಟಿ ಸೋಮಶೇಖರ್, ನಮ್ಮ ಯಶವಂತಪುರ ಕ್ಷೇತ್ರದಲ್ಲಿ Apl ಹಾಗು bpl ಎಷ್ಟು ಜನ ಇದ್ದಾರೆ, ನಮ್ಮ ಕ್ಷೇತ್ರದಲ್ಲಿ ಗೃಹ ಲಕ್ಷ್ಮೀ ಯೋಜನೆಗೆ ಎಷ್ಟು ಫಲಾನುಭವಿಗಳು ಇದಾರೆ ಎಂಬ ಮಾಹಿತಿ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದರು.

More News