ಅರ್ಷದ್ ತುಂಬಾ ಚೆನ್ನಾಗಿ ಸ್ಪರ್ಧಿಸಿರುವುದನ್ನು ನೋಡಿ ಸಂತೋಷವಾಯ್ತು. ನಮ್ಮ ಎರಡೂ ದೇಶಗಳು ಈಗ ಹೇಗೆ ಬೆಳೆಯುತ್ತಿವೆ ಎಂದು ನಾವಿಬ್ಬರೂ ಮಾತಾಡಿಕೊಂಡೆವು. ಮೊದಲು ಈ ಸ್ಥಾನಕ್ಕೆ ಯುರೋಪಿಯನ್ ಕ್ರೀಡಾಪಟುಗಳಷ್ಟೇ ಬರಲು ಸಾಧ್ಯವಿತ್ತು. ಈಗ ನಾವು ಆ ಮಟ್ಟವನ್ನು ತಲುಪಿದ್ದೇವೆ ಎಂದು ಚಿನ್ನದ ಹುಡುಗ ನೀರಜ್ ಚೋಪ್ರಾ ಸಂತಸ ವ್ಯಕ್ತಪಡಿಸಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ಪಂಧ್ಯಾವಳಿ ಅಂದ್ರೆ ಅದೊಂದು ಶತ್ರು ನಡುವಿನ ಯುದ್ಧ ಎಂದೇ ಬಿಂಬಿತವಾಗ್ತಿರುವ ಕಾಲದಲ್ಲಿ ಕ್ರೀಡಾಪಟು ನೀರಜ್ ಹೇಳಿಕೆ ಭಾರೀ ಮೆಚ್ಚುಗೆ ಗೆ ಪಾತ್ರವಾಗಿದೆ. ನೀರಜ್ ಚೋಪ್ರಾ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಬಂಗಾರದ ಪದಕ ಗೆದ್ದ ಭಾರತದ ಮೊದಲ ಅಥ್ಲೀಟ್ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಚಾಂಪಿಯನ್‌ಷಿಪ್‌ನ ಕೊನೆಯ ದಿನ ನಡೆದ ಪುರುಷರ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ 25 ವರ್ಷದ ನೀರಜ್ 88.17 ಮೀಟರ್ ಜಾವೆಲಿನ್ ಎಸೆಯುವುದರೊಂದಿಗೆ ಇತಿಹಾಸ ನಿರ್ಮಿಸಿದ್ದರೆ, ಪಂದ್ಯದಲ್ಲಿ ಪಾಕಿಸ್ತಾನದ ಅರ್ಷದ್ ನದೀಮ್ 87.82 ಮೀಟರ್ ಎಸೆಯುವ ಮೂಲಕ ಎರಡನೇ ಸ್ಥಾನ ಪಡೆದಿದ್ದಾರೆ.

ಈ ಕುರಿತು ಮಾತನಾಡಿದ ನೀರಜ್ ಚೋಪ್ರಾ, ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ವಿರುದ್ಧ ಪಾಕಿಸ್ತಾನದ ಬಗ್ಗೆ ಹೆಚ್ಚಿನ ಚರ್ಚೆ ನಡೆಯುತ್ತದೆ. ಆದರೆ ಅದನ್ನ ನಾನು ಗಂಭೀರವಾಗಿ ತೆಗೆದ್ಕೊಂಡಿಲ್ಲ. ಐರೋಪ್ಯ ರಾಷ್ಟ್ರಗಳು ಪ್ರಾಬಲ್ಯ ಮೆರೆದಿದ್ದ ಸಂದರ್ಭದಲ್ಲಿ ಭಾರತ ಹಾಗೂ ಪಾಕಿಸ್ತಾನ ಮಾಡಿರುವ ಸಾಧನೆ ಮುಖ್ಯ. ಭಾರತ ಹಾಗೂ ಪಾಕಿಸ್ತಾನ ದೊಡ್ಡ ಸ್ಥಾನವನ್ನು ಪಡೆದಿರುವುದನ್ನು ನೋಡಲು ನನಗೆ ತುಂಬಾ ಸಂತೋಷವಾಗಿದೆ ಎಂದಿದ್ದಾರೆ.




