FATHER KILLED DAUGHTER IN KOLAR: ಕೋಲಾರದಲ್ಲಿ ಮರ್ಯಾದ ಹತ್ಯೆ : ತಂದೆಯಿಂದಲೇ 19 ವರ್ಷದ ಪುತ್ರಿಯ ಹತ್ಯೆ : ಮೂವರ ಬಂಧನ

ಕೋಲಾರ : ಅನ್ಯ ಜಾತಿಯ ಯುವಕನನ್ನು ಪ್ರೀತಿಸುತ್ತಿರುವ ಮಾಹಿತಿ ತಿಳಿದ ತಂದೆ, ತನ್ನ 19 ವರ್ಷ ವಯಸ್ಸಿನ ಮುದ್ದು ಮಗಳನ್ನು ಕೊಲೆ ಮಾಡಿರುವ ಘಟನೆ ಕೋಲಾರದಲ್ಲಿ ನಡೆದಿದೆ.
ಇದೊಂದು ಮರ್ಯಾದ ಹತ್ಯೆಯಾಗಿದೆ ಎಂದು ಕೋಲಾರ ಗ್ರಾಮಾಂತರ ಪೊಲೀಸರು ತಿಳಿಸಿದ್ದು, ಪುತ್ರಿಯನ್ನು ಮಾರ್ಯಾದಾ ಹತ್ಯೆಗೈದ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.

ಕೋಲಾರ ತಾಲ್ಲೂಕು ತೊಟ್ಲಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ರಮ್ಯ (19) ಕೊಲೆಯಾದ ಯುವತಿಯಾಗಿದ್ದು, ತಂದೆ ವೆಂಕಟೇಶಗೌಡ ಎಂಬುವರಿಂದ ಕೊಲೆಯಾಗಿದ್ದಾಳೆ.
ಅನ್ಯ ಜಾತಿಯ ಯುವಕನನ್ನು ಪ್ರೀತಿಸುತ್ತಿರುವ ಮಾಹಿತಿ ಸಿಕ್ಕಿದ್ದ ಹಿನ್ನಲೆಯಲ್ಲಿ ಆಕೆಗೆ ಸಾಕಷ್ಟು ಬುದ್ದಿ ಹೇಳಲಾಗಿತ್ತು. ಆದರೂ ಅವರ ಮಾತನ್ನು ಕೇಳದ ಮಗಳು, ತನ್ನ ಪ್ರೀತಿಯನ್ನು ಮುಂದುವರೆಸಿದ್ದಳು ಎನ್ನಲಾಗಿದೆ. ಕಳೆದ ಅಗಸ್ಟ್ 25 ರಂದು ಮಗಳನ್ನು ಕೊಂದು ಅಂತ್ಯ ಸಂಸ್ಕಾರ ಮಾಡಿ ಮುಗಿಸಿದ್ದರು ಎಂದು ತಿಳಿದುಬಂದಿದೆ.

ಊರಿನಲ್ಲಿ ಕೊಲೆ ‌ಮಾಡಿರುವ ಕುರಿತು ಗುಸು ಗುಸು ಮಾತುಗಳು ಕೇಳಿಬಂದಿರುವ ಹಿನ್ನಲೆಯಲ್ಲಿ ಪೊಲೀಸರು ರಮ್ಯಳ ತಂದೆಯನ್ನು ಪೊಲೀಸ್ ಠಾಣೆಗೆ ಕೆರದು ವಿಚಾರಣೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಕೊಲೆ ಪ್ರಕರಣ ಬಯಲಾಗಿದೆ. ಇಂದು ಬೆಳ್ಳಂಬೆಳಿಗ್ಗೆ ತಹಶಿಲ್ದಾರ್ ಹರ್ಷವರ್ಧನ್ ಅವರ ಸಮ್ಮುಖದಲ್ಲಿ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ.
ಕೋಲಾರ ಗ್ರಾಮಾಂತರ ಪೊಲೀಸರು ರಮ್ಯಾಳ ತಂದೆ ವೆಂಕಟೇಶಗೌಡ, ಮೋಹನ್ ಹಾಗೂ ಚೌಡೇಗೌಡ ಎಂಬುವವರನ್ನು ಬಂಧಿಸಿ, ವಿಚಾರಣೆ ಕೈಗೆತ್ತಿಕೊಂಡಿದ್ದಾರೆ.

More News