Asia Cup: ಇಂದಿನಿಂದ ಏಷ್ಯಾಕಪ್: ಆರಂಭಿಕ ಪಂದ್ಯದಲ್ಲಿ ಪಾಕಿಸ್ತಾನ vs ನೇಪಾಳ ಕದನ

ಬಹುನಿರೀಕ್ಷಿತ ಏಷ್ಯಾಕಪ್-2023 ಟೂರ್ನಿಗೆ ಇಂದಿನಿಂದ ಚಾಲನೆ ದೊರೆಯಲಿದ್ದು, ಮೊದಲ ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ನೇಪಾಳ ತಂಡಗಳು ಮುಖಾಮುಖಿ ನಡೆಸಲಿವೆ.

ವರ್ಷಾಂತ್ಯದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಪಂದ್ಯಾವಳಿ ಬೆನ್ನಲ್ಲೇ ಏಷ್ಯಾಕಪ್ ನಡೆಯುತ್ತಿರುವ ಪರಿಣಾಮ ಟೂರ್ನಿಯಲ್ಲಿ ಭಾಗವಹಿಸುತ್ತಿರುವ ಎಲ್ಲಾ ತಂಡಗಳಿಗೂ ಇದು ಪ್ರಮುಖ ಪಂದ್ಯಾವಳಿ ಆಗಿದೆ. ಈ ಬಾರಿಯ ಏಷ್ಯಾಕಪ್ ಟೂರ್ನಿಯಲ್ಲಿ ಒಟ್ಟು ಆರು ತಂಡಗಳು ಪಾಲ್ಗೊಳ್ಳುತ್ತಿದ್ದು, ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ತಂಡಗಳ ಜೊತೆಗೆ ಇದೇ ಮೊದಲ ಬಾರಿಗೆ ‌ನೇಪಾಳ ತಂಡ ಏಷ್ಯಾಕಪ್ ಟೂರ್ನಿಯಲ್ಲಿ ತನ್ನ ಸಾಮರ್ಥ್ಯ ಪ್ರದರ್ಶನಕ್ಕೆ ಮುಂದಾಗಿದೆ.

ಇಂದಿನ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ನೇಪಾಳ ತಂಡಗಳು ಹಣಾಹಣಿ ನಡೆಸಲಿವೆ. ಸದ್ಯ ಏಕದಿನ ಕ್ರಿಕೆಟ್‌ನಲ್ಲಿ ಸದ್ಯ ನಂ.1 ತಂಡವಾಗಿರುವ ಪಾಕಿಸ್ತಾನ ಇಂದಿನ ಪಂದ್ಯದಲ್ಲಿ ಗೆದ್ದು ಶುಭಾರಂಭ ಮಾಡುವ ಲೆಕ್ಕಾಚಾರದಲ್ಲಿದ್ದರೆ. ಪಾಕ್ ತಂಡಕ್ಕೆ ಟಕ್ಕರ್ ಕೊಡಲು ನೇಪಾಳ ತಂಡದ ಆಟಗಾರರು ಸಹ ಸಕಲ ರೀತಿಯಲ್ಲಿ ತಯಾರಾಗಿದ್ದಾರೆ. ಇತ್ತೀಚಿಗೆ ಅಫ್ಘಾನಿಸ್ತಾನದ ವಿರುದ್ಧ ನಡೆದ 3 ಪಂದ್ಯಗಳ ಏಕದಿನ ಸರಣಿ ಗೆದ್ದಿರುವ ಪಾಕಿಸ್ತಾನಕ್ಕೆ ಟಾಂಗ್ ನೀಡುವುದು ಕ್ರಿಕೆಟ್ ಶಿಶು ನೇಪಾಳಕ್ಕೆ ಸುಲಭದ ಮಾತಲ್ಲ.

ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಅತ್ಯಂತ ಬಲಿಷ್ಠ ಆಟಗಾರರ ಪಡೆಯನ್ನೇ ಹೊಂದಿರುವ ಪಾಕಿಸ್ತಾನಕ್ಕೆ ನೇಪಾಳ ಸುಲಭದ ಗುರಿಯಾಗುವ ಸಾಧ್ಯತೆ ಇದೆ. ಇದರ ಜೊತೆಗೆ ಇಂದಿನ ಪಂದ್ಯ ಮುಲ್ತಾನ್ ಮೈದಾನದಲ್ಲಿ ನಡೆಯುತ್ತಿರುವುದು ಪಾಕಿಸ್ತಾನಕ್ಕೆ ತವರಿನ ಲಾಭ ಸಹ ಇದೆ. ಪಾಕಿಸ್ತಾನದ ಪರ ನಾಯಕ ಬಾಬರ್ ಆಜಂ, ಇಮಾಮ್‌ ಉಲ್ ಹಕ್, ವೇಗಿ ಶಹೀನ್ ಅಫ್ರಿದಿ, ಮೊಹಮ್ಮದ್ ನವಾಜ಼್ ಸೇರಿ ಇನ್ನೂ ಹಲವು ಆಟಗಾರರು ಅತ್ಯುತ್ತಮ ಫಾರ್ಮ್ ಕಂಡುಕೊಂಡಿದ್ದು, ಏಷ್ಯಾಕಪ್ ನಲ್ಲೂ ಈ ಫಾರ್ಮ್ ಮುಂದುವರಿಸುವ ನಿರೀಕ್ಷೆಯಲ್ಲಿದ್ದಾರೆ.

ಮತ್ತೊಂದೆಡೆ ರೋಹಿತ್ ಪೌಡಲ್ ನಾಯಕತ್ವದಲ್ಲಿ ಕಣಕ್ಕಿಳಿಯುತ್ತಿರುವ ನೇಪಾಳ ತಂಡ ಏಷ್ಯಾಕಪ್ ಟೂರ್ನಿಯಲ್ಲಿ ತನ್ನ ಮೊದಲ ಹೆಜ್ಜೆ ಇಡಲು ಸಜ್ಜಾಗಿದೆ. ತನ್ನ ಮೊದಲ ಪಯಣದಲ್ಲಿ ನಿರೀಕ್ಷಿತ ಯಶಸ್ಸು ಪಡೆಯದಿದ್ದರು, ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಆಡಬೇಕೆಂಬುದು ನೇಪಾಳ ಆಟಗಾರರ ಲೆಕ್ಕಾಚಾರವಾಗಿದೆ. ನಾಯಕ ರೋಹಿತ್ ಪೌಡಲ್ ನೇಪಾಳ ತಂಡದ ಪ್ರಮುಖ ಬ್ಯಾಟರ್ ‌ಆಗಿದ್ದರೆ, ಸ್ಪಿನ್ನರ್ ಸಂದೀಪ್ ಲಾಮಿಚನ್ನೆ ತಂಡದ ಅನುಭವಿ ಬೌಲರ್ ಆಗಿದ್ದಾರೆ. ಉಳಿದಂತೆ ಯಾವುದೇ ಆಟಗಾರರು ಸಹ ದೊಡ್ಡಮಟ್ಟದಲ್ಲಿ ಗುರುತಿಸಿಕೊಂಡಿಲ್ಲ. ಹೀಗಾಗಿ ಇಂದಿನ ಪಂದ್ಯದಲ್ಲಿ ಪಾಕಿಸ್ತಾನ ತಂಡವೇ ಗೆಲುವಿನ‌ ಫೇವರೆಟ್ ಎನಿಸಿದೆ.

More News