BBMP Chief Engineer Death: ಬಿಬಿಎಂಪಿ ಕಛೇರಿಯಲ್ಲಿ ಬೆಂಕಿ ಅವಘಡ: ಚಿಕಿತ್ಸೆ ಫಲಿಸದೇ ಇಂಜಿನಿಯರ್ ನಿಧನ

ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಗಾಯಗೊಂಡಿದ್ದ ಮುಖ್ಯ ಇಂಜಿನಿಯರ್‌ ಶಿವಕುಮಾರ್‌ ಚಿಕಿತ್ಸೆ ಫಲಿಸದೇ ಇಹಲೋಕ ತ್ಯಜಿಸಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಬಿಬಿಎಂಪಿ (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ಯ ಗುಣನಿಯಂತ್ರಣ ವಿಭಾಗದ ಪ್ರಯೋಗಾಲಯ ಮತ್ತು ಕಚೇರಿ ಕಟ್ಟಡದಲ್ಲಿ ಬೆಂಕಿ ಹೊತ್ತಿಕೊಂಡಿತ್ತು. ಹೊತ್ತಿ ಉರಿದ ಬೆಂಕಿಯಿಂದಾಗಿ 9 ಮಂದಿ ಬಿಬಿಎಂಪಿ ನೌಕರರಿಗೆ ತೀವ್ರ ಗಾಯಗೊಂಡು, ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಬೆಂಕಿ ಅವಘಡ ವೇಳೆ ವಿಷಾನಿಲ ದೇಹದ ಶ್ವಾಸಕೋಶಕ್ಕೆ ಹೊಕ್ಕಿ ಮುಖ್ಯ ಇಂಜಿನಿಯರ್‌ ಶಿವಕುಮಾರ್‌ ಮತ್ತೊಬ್ಬ ಮಹಿಳಾ ಸಿಬ್ಬಂದಿಯ ಸ್ಥಿತಿ ಗಂಭೀರವಾಗಿತ್ತು. ಹೀಗಾಗಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಐಸಿಯು ವಾರ್ಡ್‌ಗೆ ಶಿಫ್ಟ್‌ ಮಾಡಲಾಗಿತ್ತು. ಆದ್ರೆ ಗಂಭೀರ ಗಾಯದಿಂದ ಬಳಲುತ್ತಿದ್ದ ಗಾಯಾಳು ಶಿವಕುಮಾರ್ ಚಿಕಿತ್ಸೆ ಫಲಿಸದೇ ಇಂದು ಕೊನೆಯುಸಿರು ಎಳೆದಿದ್ದಾರೆ.

ನಂಜನಗೂಡು ಮೂಲದವರಾದ ಮೃತ ಶಿವಕುಮಾರ್ ಬಿಬಿಎಂಪಿಯ ಸೂಪರಟೆಂಡೆಂಟ್ ಇಂಜಿನಿಯರ್ ಆಗಿ ಪಾಲಿಕೆಯಲ್ಲಿ ಕಳೆದ 16 ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಪತ್ನಿ ಹಾಗೂ ಇಬ್ಬರು ಚಿಕ್ಕ ವಯಸ್ಸಿನ ಹೆಣ್ಣು ಮಕ್ಕಳು ಅವ್ರಿಗಿದ್ದರು.

ಇನ್ನು ಬಿಬಿಎಂಪಿ ಗುಣಮಟ್ಟದ ಪರೀಕ್ಷಾ ಪ್ರಯೋಗಾಲಯ ಅಗ್ನಿ ದುರಂತಕ್ಕೆ ಸಿಲುಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಿಬಿಎಂಪಿ ಮುಖ್ಯ ಇಂಜಿನಿಯರ್ ಶಿವಕುಮಾರ್ ಅವರ ನಿಧನಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸಂತಾಪ ಸೂಚಿಸಿದ್ದಾರೆ.
ಮುಖ್ಯ ಇಂಜಿನಿಯರ್ ಶಿವಕುಮಾರ್ ಅವರ ಅಗಲಿಕೆ ಸುದ್ದಿ ಕೇಳಿ ಬೇಸರವಾಗಿದೆ. ಕೆಲ ದಿನಗಳ ಹಿಂದಷ್ಟೇ ನಾನು ಆಸ್ಪತ್ರೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದ್ದೆ. ವೈದ್ಯರು ಉತ್ತಮ ಚಿಕಿತ್ಸೆ ನೀಡಿದರೂ ಅವರ ಸ್ಥಿತಿ ಚಿಂತಾಜನಕವಾಗಿತ್ತು. ಅವರು ಗುಣಮುಖರಾಗಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದೆವು. ನಮ್ಮ ಪ್ರಾರ್ಥನೆ ಫಲ ನೀಡಲಿಲ್ಲ.
ಚಿಕ್ಕ ವಯಸ್ಸಿನಲ್ಲಿ ಈ ಅವಘಡದಿಂದ ಪ್ರಾಣ ಕಳೆದುಕೊಂಡಿರುವುದು ಮನಸ್ಸಿಗೆ ನೋವು ಉಂಟು ಮಾಡಿದೆ. ಶಿವಕುಮಾರ್ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಅಗಲಿಕೆ ನೋವನ್ನು ಭರಿಸುವ ಶಕ್ತಿ ಅವರ ಕುಟುಂಬ ಸದಸ್ಯರು ಹಾಗೂ ಬಂಧು ಮಿತ್ರರಿಗೆ ಕರುಣಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ” ಎಂದು ಡಿ.ಕೆ. ಶಿವಕುಮಾರ್ ಅವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

More News