ಕ್ರಿಕೆಟ್ ಜಗತ್ತಿನ ಸಾಂಪ್ರದಾಯಿಕ ಎದುರಾಳಿಗಳೆಂದೇ ಕರೆಯಲ್ಪಡುವ ಭಾರತ ಹಾಗೂ ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯಕ್ಕಾಗಿ ಇಡೀ ಕ್ರಿಕೆಟ್ ಲೋಕವೇ ಕಾದು ಕುಳಿತಿದ್ದು, ಉಭಯ ತಂಡಗಳು ಸೆಪ್ಟೆಂಬರ್ 2ರಂದು ನಡೆಯುವ ಪಂದ್ಯವನ್ನ ಎದುರು ನೋಡುತ್ತಿವೆ.
ಮುಂಬರುವ ಏಕದಿನ ವಿಶ್ವಕಪ್‌ಗೆ ಆತ್ಮವಿಶ್ವಾಸವನ್ನ ಹೆಚ್ಚಿಸಿಕೊಳ್ಳಲು ಉಭಯ ತಂಡಗಳಿಗೂ ಈ ಪಂದ್ಯ ಅತ್ಯಂತ ಮಹತ್ವದ್ದಾಗಿದೆ. ಹೀಗಾಗಿ ಏಷ್ಯಾಕಪ್‌ನ ಈ ಮುಖಾಮುಖಿಯಲ್ಲಿ ಜಯಭೇರಿ ಬಾರಿಸಲು ಎರಡು ತಂಡಗಳು ತಮ್ಮದೇ ರಣತಂತ್ರವನ್ನ ರೂಪಿಸಿಕೊಂಡಿವೆ. ಈ ನಡುವೆ ಹೈವೋಲ್ಟೇಜ್ ಕದನದಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿರುವ ಪಾಕಿಸ್ತಾನದ ಬಲಿಷ್ಠ ಬ್ಯಾಟರ್‌ಗಳ ಆಟಕ್ಕೆ ಕಡಿವಾಣ ಹಾಕುವುದು ಟೀಂ ಇಂಡಿಯಾ ಬೌಲರ್‌ಗಳಿಗೆ ದೊಡ್ಡ ಚಾಲೆಂಜ್ ಆಗಿದೆ.

ಸದ್ಯ ಏಷ್ಯಾಕಪ್ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ನೇಪಾಳ ವಿರುದ್ಧ 238 ರನ್‌ಗಳಿಂದ ಗೆದ್ದಿರುವ ಪಾಕಿಸ್ತಾನ, ಜಯದ ಅಲೆಯಲ್ಲಿದೆ. ತಂಡದ ನಾಯಕ ಬಾಬರ್ ಆಜಂ ಹಾಗೂ ಇಫ್ತಿಕರ್ ಅಹ್ಮದ್, ಸದ್ಯಕ್ಕೆ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ನೇಪಾಳ ವಿರುದ್ಧ ಈ ಇಬ್ಬರು ಅಮೋಘ ಶತಕ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಹೀಗಾಗಿ ಆರಂಭಿಕ ಪಂದ್ಯದಲ್ಲೇ ಭರ್ಜರಿ ಶತಕ ಬಾರಿಸಿ ಸದ್ದು ಮಾಡಿರುವ ಈ ಇಬ್ಬರನ್ನ ಕಟ್ಟಿಹಾಕುವುದು ಭಾರತದ ಬೌಲರ್‌ಗಳಿಗೆ ಸವಾಲಾಗಿದೆ.
ಇವರಿಬ್ಬರ ಜೊತೆಗೆ ತಂಡದ ಪ್ರಮುಖ ಬ್ಯಾಟರ್‌ಗಳಾದ ಮೊಹಮ್ಮದ್ ರಿಜ್ವಾನ್ ಸಹ ಉತ್ತಮ ಲಯದಲ್ಲಿದ್ದಾರೆ.
ಇನ್ನೂ ಆರಂಭಿಕರಾದ ಫಕರ್ ಜಮಾನ್, ಇಮಾಮ್-ಉಲ್-ಹಕ್ ಅವರುಗಳು ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಕಂಡಿದ್ದರು, ಭಾರತ ವಿರುದ್ಧದ ಬಿಗ್ ಮ್ಯಾಚ್‌ನಲ್ಲಿ ತಮ್ಮ ಬ್ಯಾಟಿಂಗ್ ಫಾರ್ಮ್‌ಗೆ ಮರಳುವ ನಿರೀಕ್ಷೆ ಹೊಂದಿದ್ದಾರೆ. ಜೊತೆಗೆ ಏಕದಿನ ಕ್ರಿಕೆಟ್‌ನಲ್ಲಿ ಸದ್ಯ ಪಾಕಿಸ್ತಾನ ನಂ.1 ತಂಡವಾಗಿರುವುದು ಕೂಡ ಪಾಕಿಸ್ತಾನದ ಆತ್ಮವಿಶ್ವಾಸವನ್ನ ಇಮ್ಮಡಿಗೊಳಿಸಿದೆ.

ಮೇಲ್ನೋಟಕ್ಕೆ ಟೀಂ ಇಂಡಿಯಾದ ಬೌಲಿಂಗ್ ವಿಭಾಗ ಬಲಿಷ್ಠವಾಗಿದ್ದು, ಎದುರಾಳಿ ಪಾಕಿಸ್ತಾನದ ಬ್ಯಾಟರ್‌ಗಳಿಗೆ ಕಡಿವಾಣ ಹಾಕುವ ಸಾಮರ್ಥ್ಯ ಭಾರತೀಯ ಬೌಲರ್‌ಗಳು ಹೊಂದಿದ್ದಾರೆ. ಆದರೆ ತಂಡದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ, ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡು ಭಾರತ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ್ದಾರೆ. ಮತ್ತೊಂದೆಡೆ ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಅವರುಗಳು ಸಹ ಕೆಲವು ದಿನಗಳ ವಿಶ್ರಾಂತಿಯ ಬಳಿಕ ತಂಡಕ್ಕೆ ಮರಳಿದ್ದಾರೆ. ಪರಿಣಾಮ ಮೂವರು ವೇಗಿಗಳು ಯಾವ ರೀತಿ ತಮ್ಮ ಬೌಲಿಂಗ್ ಲಯ ಕಂಡುಕೊಳ್ಳುತ್ತಾರೆ ಎಂಬ ಕುತೂಹಲವಿದೆ.
ಇನ್ನೂ ಸ್ಪಿನ್ ವಿಭಾಗದಲ್ಲಿ ಕುಲ್ದೀಪ್ ಯಾದವ್, ಏಷ್ಯಾಕಪ್‌ಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿರುವ ಪ್ರಮುಖ ಸ್ಪಿನ್ನರ್ ಆಗಿರುವುದರಿಂದ ಇವರ ಮೇಲೂ ಸಾಕಷ್ಟು ಒತ್ತಡವಿದೆ. ಅಲ್ಲದೇ ಆಲ್ರೌಂಡರ್‌ಗಳಾದ ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ ಅವರು ಸಹ ಬೌಲಿಂಗ್‌ನಲ್ಲಿ ತಂಡಕ್ಕೆ ಆಸರೆಯಾಗಬೇಕಾದ ಅನಿವಾರ್ಯತೆ ಇದೆ.




