ವರ್ಷಕ್ಕೊಮ್ಮೆ ದರ್ಶನ‌ ನೀಡುವ ಹಾಸನಾಂಬ ದೇವಿ: ವಿಧಿ ವಿಧಾನಗಳಿಂದ ತೆರೆದ ಬಾಗಿಲು

ಹಾಸನ : ಕೊರೋನಾ ಹಾವಳಿ ಹಿನ್ನೆಲೆಯಲ್ಲಿ ಎರಡು ಡೋಸ್ ಕೊವಿಡ್ ಲಸಿಕೆ ಪಡೆದ ಭಕ್ತರಿಗೆ ಮಾತ್ರ ಷರತ್ತು ಬದ್ಧ ಅನುಮತಿ ನೀಡಿರುವ ಜಿಲ್ಲಾಡಳಿತ, ಹಾಸನಾಂಬ ದೇವಿ ದರ್ಶನಕ್ಕೆ ಇಂದಿನಿಂದ ಅವಕಾಶ ಕಲ್ಪಿಸಿದೆ.
ಹಾಸನದ ಅಧಿದೇವತೆ ಸುಪ್ರಸಿದ್ಧ ಹಾಸನಾಂಬ ದೇವಿ ಇಂದಿನಿಂದ ಭಕ್ತರಿಗೆ ದರ್ಶನ ನೀಡಲಿದ್ದು ವಿದ್ಯುಕ್ತವಾಗಿ ಧಾರ್ಮಿಕ ವಿಧಿ ವಿಧಾನಗಳ‌‌ ಮೂಲಕ ಸರಿಸುಮಾರು ೧೨.೧೬ ಕ್ಕೆ ಬಾಗಿಲು ತೆರೆಯಲಾಯಿತು. ಅಕ್ಟೋಬರ್ 28 ರಿಂದ ನವೆಂಬರ್ 6 ರವರೆಗೆ ಹಾಸನಾಂಬ ದೇವಾಲಯ ಬಾಗಿಲು ತೆರೆಯಲಿದ್ದು, ಈ ಬಾರಿ 9 ದಿನಗಳ ಕಾಲ ಹಾಸನಾಂಬೆ ದರ್ಶನ ನೀಡಲಿದ್ದಾಳೆ.


ಒಂದು ವರ್ಷದಿಂದ ಬೆಳಗುತ್ತಲೇ ಇರುವ ದೀಪ
ದೇವಾಲಯದ ಬಾಗಿಲು ಹಾಕುವಾಗ ಹಚ್ಚಿಟ್ಟ ದೀಪ, ವರ್ಷ ಪೂರ್ತಿ ಬೆಳಗುತ್ತದೆ. ಮುಂದಿನ ವರ್ಷ ಬಾಗಿಲು ತೆರೆದಾಗ ದೀಪ ಬೆಳಗುತ್ತಲೇ ಇರುತ್ತದೆ. ದೇವರಿಗೆ ಇಟ್ಟ ನೈವೇದ್ಯ ಒಂದು ವರ್ಷದ ನಂತರವೂ ಉತ್ತಮವಾಗಿರುತ್ತದೆ ಎಂಬ ನಂಬಿಕೆಯಿದೆ. ಈ ಹಿನ್ನೆಲೆಯಲ್ಲಿ ದೇವಿಯ ಪವಾಡ ನೋಡಲು ಪ್ರತಿವರ್ಷ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ವರ್ಷಕ್ಕೊಮ್ಮೆ ಮಾತ್ರ ಹಾಸನಾಂಬೆ ದೇವಿ ದರ್ಶನ ಭಾಗ್ಯ ಕರುಣಿಸುತ್ತಾಳೆ. ಹೀಗಾಗಿ ಪ್ರತಿ ವರ್ಷ ಸಾವಿರಾರು ಭಕ್ತರು ದೇವಿಯ ದರ್ಶನವನ್ನು ಪಡೆಯಲು ಆಗಮಿಸುತ್ತಾರೆ.
ಅಶ್ವೀಜ ಮಾಸ ಹುಣ್ಣಿಮೆ ನಂತರ ಬರುವ ಮೊದಲ ಗುರುವಾರ ವಿಧಿ ವಿಧಾನದಂತೆ ಅರ್ಚಕರು ಪೂಜೆ ಸಲ್ಲಿಸಿದರು. ಜಿಲ್ಲಾ ಉಸ್ತುವಾರಿ ಕೆ.ಗೋಪಾಲಯ್ಯ, ಸಚಿವ ಜೆ.ಸಿ.ಮಾಧುಸ್ವಾಮಿ, ಶಾಸಕ‌ ಪ್ರೀತಂ ಜೇ ಗೌಡ , ಜಿಲ್ಲಾಧಿಕಾರಿ ಆರ್.ಗಿರೀಶ್, ಹಾಸನಾಂಬ ದೇವಸ್ಥಾನ ಆಡಳಿತಾಧಿಕಾರಿ ಬಿ.ಎ.ಜಗದೀಶ್ ,ಎಸ್ಪಿ ಆರ್.ಶ್ರೀನಿವಾಸಗೌಡ , ಡಿವೈ ಎಸ್ಪಿ ಪುಟ್ಟಸ್ವಾಮಿಗೌಡ, ಎಎಸ್ಪಿ ನಂದಿನಿ, ಜಿ.ಪಂ.ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬಿ.ಎ ಪರಮೇಶ್ ಸೇರಿದಂತೆ ಇತರೆ ಅಧಿಕಾರಿಗಳ ಸಮ್ಮುಖದಲ್ಲಿ ದೇಗುಲದ ಗರ್ಭಗುಡಿ ಬಾಗಿಲದ ಬೀಗ ಮುದ್ರೆ ತೆರೆಯಲಾಯಿತು.


ಬೆಳಿಗ್ಗೆ ದೇಗುಲದ ಆವರಣದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡಿತು. ಸಂಪ್ರದಾಯದಂತೆ ತಳವಾರ ವಂಶದ ನರಸಿಂಹರಾಜ್ ಅರಸ್ ಅವರು ಬಾಳೆ ಕಂದು ಕಡಿಯುವ ಮೂಲಕ ಬಾಗಿಲು ತೆರೆಯಲು ಅನುವು ಮಾಡಿಕೊಟ್ಟರು. ಹಾಸನಾಂಬ, ಸಿದ್ದೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ದೇವಾಲಯವನ್ನು ವಿವಿಧ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಮೊದಲ ಮತ್ತು ಅಂತಿಮ ದಿನ ಸಾರ್ವಜನಿಕ ದರ್ಶನ ಇರುವುದಿಲ್ಲ. ಉಳಿದ ದಿನ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ
ಪ್ರತಿದಿನ ಬೆಳಗ್ಗೆ ೬ ಗಂಟೆಯಿಂದ ಮಧ್ಯಾಹ್ನ ೧ ರವರೆಗೆ ಹಾಗೂ ಮಧ್ಯಾಹ್ನ ೩ ರಿಂದ ರಾತ್ರಿ ೮ ರವರೆಗೆ ದರ್ಶನಕ್ಕೆ ಅವಕಾಶ
ಕಲ್ಪಿಸಲಾಗಿದೆ. ವಿಶೇಷ ದರ್ಶನಕ್ಕಾಗಿ ೩೦೦ ಹಾಗೂ ೧೦೦೦ ರೂ. ಗಳ ಟಿಕೆಟ್ ದರವನ್ನು ನಿಗದಿಪಡಿಸಲಾಗಿದೆ. ಜಿಲ್ಲಾಡಳಿತ ಭಕ್ತರಿಗೆ ಅಗತ್ಯ ವಿರುವ ಎಲ್ಲ ರೀತಿಯ ಮೂಲಭೂತ ಸೌಕರ್ಯದ ಸೂಕ್ತ ವ್ಯವಸ್ಥೆ ಕಲ್ಪಿಸಿದೆ. ದೇವಾಲಯದ ಒಳಗೆ ಹಾಗೂ ಸುತ್ತಮುತ್ತ ಸಿಸಿ ಟಿವಿ ಕಣ್ಗಾವಲು ಇರಿಸಲಾಗಿದೆ. ದೇವಿಯ ಸುಗಮ ದರ್ಶನಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ವ್ಯಾಕ್ಸಿನ್ ಸರ್ಟಿಫಿಕೇಟ್ ಕಡ್ಡಾಯ
ಕೊರೊನಾ ಕಾರಣ ಎರಡು ಲಸಿಕೆ ಪಡೆದವರಿಗೆ ಮಾತ್ರ ದರ್ಶನಕ್ಕೆ ಅವಕಾಶವಿರುತ್ತದೆ, ವ್ಯಾಕ್ಸಿನ್ ಹಾಕಿಸಿಕೊಂಡ ಸರ್ಟಿಫಿಕೇಟ್ ಅಥವಾ ಮೆಸೇಜ್ ನೊಂದಿಗೆ ಆಧಾರ್ ಕಾರ್ಡ್, ಚುನಾವಣೆ ಗುರುತಿನ ಚೀಟಿ ತೋರಿಸಬೇಕಾಗಿದೆ. ಇದು ಜಿಲ್ಲಾಡಳಿತ ಸೂಚನೆ ಮೇರೆಗೆ ದೇವಾಲಯ ಆಡಳಿತ ಮಂಡಳಿ ಕೈಗೊಂಡಿದೆ.
ದೇವಿ ದರ್ಶನದ ಬಳಿಕ ಮಾತನಾಡಿದ ಕೆ.ಗೋಪಾಲಯ್ಯ, ಕೊರೋನಾ ಹಾವಳಿ ಸಮಯದಲ್ಲೂ ಸಹ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಬಿ.ಎಸ್ ಯಡಿಯೂರಪ್ಪ ಹಾಗೂ ಸಿಎಂ ಬಸವರಾಜ್ ಬೊಮ್ಮಾಯಿ ಅವರ ಉಸ್ತುವಾರಿಯಲ್ಲಿ ಮುಂದಿನ ಅವಧಿಗೆ ಸರ್ಕಾರ ಸುಭದ್ರವಾಗಿ ನಡೆಯಲಿ ಹಾಗೂ ಕೊರೋನಾ ದೇಶದ ಜನರಿಗೆ ಹಾವಳಿಯಿಂದ ಮುಕ್ತಿ ದೊರೆಯಲಿ ಎಂದು ಪ್ರಾರ್ಥನೆ ಮಾಡಲಾಗಿದೆ ಎಂದರು.


ರಣಘಟ್ಟ ಯೋಜನೆಗೆ 125 ಕೋಟಿ ಬಿಡುಗಡೆ ಮಾಡಲಾಗಿದ್ದು ಯೋಜನೆ ಬಿಎಸ್ ಯಡಿಯೂರಪ್ಪ ಹಾಗೂ ಮಾಧುಸ್ವಾಮಿ ಅವರ ಸಹಕಾರ ಇದೆ ಎಂದು ಹೇಳಿದರು. ಜಿಲ್ಲೆಯ ಭಕ್ತಾದಿಗಳಿಗೆ ಈ ಬಾರಿಯು ಹಾಸನಾಂಬ ದರ್ಶನಕ್ಕೆ ಜಿ್ಳಾಲ್ಲಾಡಳಿತ ಸಕಲ ವ್ಯವಸ್ಥೆ ಯನ್ನು ಅಚ್ಚುಕಟ್ಟಾಗಿ ಕಲ್ಪಿಸಿದೆ ಅಧಿಕೃತ ಸಮಯಕ್ಕೆ ಸರಿಯಾಗಿ ಬಾಗಿಲು‌ ತೆರೆಯಲಾಗಿದ್ದು ಎಲ್ಲರು ಶಾಂತಿಯುತವಾಗಿ ದೇವಿ ದರ್ಶನ ಪಡೆಯಬೇಕು ಹಾಗೂ ೦೯ ದಿನದ ಜಾತ್ರಾಮಹೋತ್ಸವ ಯಶಸ್ವಿ ಯಾಗಿ‌ ಜರುಗಲು ಸಹಕರಿಸುವಂತೆ ಮನವಿ‌ ಮಾಡಿದರು.
ಹಾಸನಾಂಬ ದರ್ಶನ ಪಡೆಯುಲು ಆಗಮಿಸುವ ಭಕ್ತಾದಿಗಳು ,ಗಣ್ಯರು ಹಾಗೂ ಸಾವರ್ಜನಿಕರು ದೇವಸ್ಥಾನ ಪ್ರವೇಶಕ್ಕೆ ಹಲವು ಗೇಟ್ ದಾಟಿ ಬರಬೇಕಿದೆ. ವಿಶೇಷ ಪ್ರವೇಶ ಹಾಗೂ ನಿಗದಿತ ಗುರುತಿನ ಚೀಟಿ ಹೊಂದಿರುವವರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿತ್ತು ಈ ಎಲ್ಲಾ ಗೇಟ್ ದಾಟಿ ದೇವಿ ಗರ್ಭಗುಡಿ ಪ್ರವೇಶ.

More News