ಹುಬ್ಬಳ್ಳಿ: ಬೇರೆ ಪಕ್ಷದವರನ್ನು ಕರೆದುಕೊಂಡು ಬಂದು ಹೊಸ ಸರ್ಕಾರ ಮಾಡೋದು ಇರ್ಲಿ ಮೊದಲು ಶಾಸಕರನ್ನು, ಮಾಜಿ ಶಾಸಕರನ್ನು ಉಳಿಸಿಕೊಳ್ಳಲಿ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ತಿರುಗೇಟು ನೀಡಿದರು.
ಕಾಂಗ್ರೆಸ್ ಶಾಸಕರು ಸಂಪರ್ಕದಲ್ಲಿದ್ದಾರೆ ಎಂಬ ಬಿ.ಎಲ್. ಸಂತೋಷ್ ಹೇಳಿಕೆ ಕುರಿತು ಹುಬ್ಬಳ್ಳಿ ಯಲ್ಲಿ ಮಾತನಾಡಿದ ಜಗದೀಶ್ ಶೆಟ್ಟರ್, ಬಿಎಲ್ ಸಂತೋಷ ಅವರು ಮೊದಲು ಪಕ್ಷದಲ್ಲಿದ್ದವರನ್ನು ಉಳಿಸಿಕೊಳ್ಳಲಿ. ಶಾಸಕರನ್ನು,ಮಾಜಿ ಶಾಸಕರನ್ನು ಉಳಿಸಿಕೊಳ್ಳಲಿ. ಬಿಜೆಪಿ ಪಕ್ಷದ ಅಸ್ತಿತ್ವ ಉಳಸಿಕೊಂಡರೆ ಸಾಕಾಗಿದೆ.ಬೇರೆ ಪಕ್ಷದವರನ್ನು ಕರೆದುಕೊಂಡು ಬಂದು ಹೊಸ ಸರ್ಕಾರ ಮಾಡೋದು ಇರಲಿ ಎಂದು ತಿರುಗೇಟು ನೀಡಿದರು.

ಮುಂದುವರೆದು ಮಾತನಾಡಿದ ಅವರು, ಬರೀ ಆಪರೇಶನ್ ಮಾಡಿ ಸರ್ಕಾರ ರಚನೆ ಮಾಡೋದಾ?
ಇಡೀ ರಾಷ್ಟ್ರದಲ್ಲಿ ಆಪರೇಶನ್ ಮಾಡೋದೇ ಆಯ್ತು. ಕರ್ನಾಟಕದಲ್ಲಿ ಬಿಜೆಪಿಗೆ ಒಂದು ಸಲವೂ ಬಹುಮತ ಬರಲಿಲ್ಲ. ಕಾಂಗ್ರೆಸ್‌ಗೆ ನೋಡಿ 136 ಸೀಟ್ ಬಂದಿದೆ. ಬೆಳಗ್ಗೆಯಿಂದ ಸಾಯಂಕಾಲವರೆಗೂ ಆಪರೇಶನ್ ಮಾಡೋದೆ ಬಿಜೆಪಿ ಕೆಲಸ. ಹಿರಿಯರನ್ನು ಕಡೆಗಣಿಸಿ ಹೊಸಬರನ್ನು ಕರೆದುಕೊಂಡು ಬರೋದು ನಿಮ್ಮ ಕೆಲಸ. ದಿನದಿಂದ ದಿನಕ್ಕೆ ಪಕ್ಷ ಅಧೋಗತಿಗೆ ಹೋಗ್ತಿದೆ.
ಬಿಜೆಪಿ ಈಗ ಮುಳುಗುತ್ತಿರೋ ಹಡಗು ಎಂದು ವ್ಯಂಗ್ಯ ಮಾಡಿದರು.
ಶಾಸಕರು ಅವರ ಸಂಪರ್ಕದಲ್ಲಿದ್ರೆ ನಾಳೆಯಿಂದಾನೇ ಆಪರೇಶನ್ ಸ್ಟಾರ್ಟ್ ಮಾಡಲಿ. ರಾಜೀನಾಮೆ ಕೊಟ್ಟು ಯಾರು ಹೋಗ್ತಾರೆ..? ರಾಜ್ಯದಲ್ಲಿ ಗಟ್ಟಿ ಮುಟ್ಟಾದ ಸರ್ಕಾರವಿದೆ. ಬಿ.ಎಲ್. ಸಂತೋಷ್ ಅವರ ಬಗ್ಗೆ ಬಿಜೆಪಿ ಯೋಚನೆ ಮಾಡಬೇಕು. ದೆಹಲಿಯಲ್ಲಿ ಕೂತ ನಾಯಕರು ಯೋಚನೆ ಮಾಡಬೇಕು.ಕರ್ನಾಟಕದಲ್ಲಿ ಬಿಜೆಪಿ ಅಸ್ತಿತ್ವ ಕಳೆದುಕೊಳ್ತಿದೆ. ಇದಕ್ಕೆ ಕಾರಣ ಬಿಜೆಪಿ ಕೆಲವೇ ಜನರ ಕೈಯಲ್ಲಿರೋದು. ರಾಜ್ಯ ಬಿಜೆಪಿ ನಾಯಕರ ಪರಸ್ಥಿತಿ ಇಡೀ ಜಗತ್ತಿಗೆ ಗೊತ್ತಾಗಿದೆ ಎಂದು ಕುಟುಕಿದರು.
ಬಿಜೆಪಿ ನಾಯಕ ಮುನೇನಕೊಪ್ಪ ರನ್ನ ಕಾಂಗ್ರೆಸ್ ಗೆ ಕರೆತರಲು ಮಾತುಕತೆ ನಡೆಸಿದ್ದೀರಾ ಎಂಬ ಪ್ರಶ್ನೆಗೆ ಮಾತನಾಡಿದ ಅವರು, ಮುನೇನಕೊಪ್ಪ ಜೊತೆ ನಾನು ಮಾತಾಡಿಲ್ಲ. ಹೈಕಮಾಂಡ್ ಕೂಡಾ ನನಗೆ ಏನೂ ಹೇಳಿಲ್ಲ ಎಂದು ತಿಳಿಸಿದರು.




