PRIVATE TRANSPORT BUNDH: ಸೆಪ್ಟಂಬರ್ 11 ಕ್ಕೆ ಖಾಸಗಿ ಸಾರಿಗೆ ಒಕ್ಕೂಟ ಬಂದ್ ಗೆ ಕರೆ : ಖಾಸಗಿ ಬಸ್, ಟ್ಯಾಕ್ಸಿ, ಸ್ಕೂಲ್ ವ್ಯಾನ್ ಬಂದ್ ನಲ್ಲಿ ಭಾಗಿ

ಬೆಂಗಳೂರು : ತಮ್ಮ ಹಲವು ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಒಕ್ಕೂಟ ಸೆಪ್ಟೆಂಬರ್ 11 ಕ್ಕೆ ಬೆಂಗಳೂರು ಬಂದ್ ಗೆ ಕರೆ ನೀಡಿದೆ.
ಬೆಂಗಳೂರಿನಲ್ಲಿ ಈ ವಿಚಾರ ತಿಳಿಸಿದ ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಒಕ್ಕೂಟ ಅಧ್ಯಕ್ಷ ನಟರಾಜ್ ಶರ್ಮಾ, ಶಕ್ತಿ ಯೋಜನೆಯಿಂದ ನಾವು ಬೀದಿಪಾಲಾಗಿದ್ದೇವೆ. ರಾಜ್ಯ ಸರ್ಕಾರ ಪರ್ಯಾಯವಾಗಿ ತಮಗೆ ಬದುಕಿಗೆ ಆಸರೆಯಾಗಬೇಕು ಎಂದು ಒತ್ತಾಯಿಸಿದರಲ್ಲದೆ, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಒಟ್ಟು 32 ಖಾಸಗಿ ಸಾರಿಗೆ ಒಕ್ಕೂಟಗಳು ನಿನ್ನೆ ಸಭೆ ನಡೆಸಿ ಈ ತೀರ್ಮಾನ ಕೈಗೊಂಡಿದೆ, ಸೆಪ್ಟಂಬರ್ 11ರೊಳಗೆ ತಮ್ಮ ಬೇಡಿಕೆ ರಾಜ್ಯ ಸರ್ಕಾರ ಈಡೇರಿಸಬೇಕು, ಇಲ್ಲದಿದ್ದರೆ ಬಂದ್ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇದು ಸರ್ಕಾರದ ವಿರುದ್ಧ ಖಾಸಗಿ ಸಾರಿಗೆ ಒಕ್ಕೂಟಗಳ ಸಮರ ಎಂದು ಹೇಳಿದ ಅವರು, ಶಕ್ತಿ ಯೋಜನೆ ಜಾರಿ ಬಳಿಕ ಖಾಸಗಿ ಚಾಲಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಸರ್ಕಾರದ ಜೊತೆ ಮಾತುಕತೆಗೆ ಯತ್ನಿಸಲಾಗಿದೆ, ಹಾಗೆಯೇ ಹಲವು ಬಾರಿ ಮನವಿ ಮಾಡಿದರೂ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.

ಈ ಹಿಂದೆ ಆಗಸ್ಟ್ 31ರೊಳಗೆ ತಮ್ಮ ಸಮಸ್ಯೆ ಬಗೆಹರಿಸುವುದಾಗಿ ಸಾರಿಗೆ ಸಚಿವರು ಭರವಸೆ ನೀಡಿದ್ದರು. ಆದ್ರೆ ಡೆಡ್ ಲೈನ್ ಮುಗಿದ್ರೂ ಸಮಸ್ಯೆ ಬಗೆಯರಿಯದ ಹಿನ್ನೆಲೆಯಲ್ಲಿ ಬಂದ್ ಗೆ ಕರೆ ನೀಡಲಾಗಿದೆ ಎಂದರು. ಅಗಸ್ಟ್ 10 ರ ಭಾನುವಾರ ರಾತ್ರಿಯಿಂದ ಸೋಮವಾರ ಮಧ್ಯ ರಾತ್ರಿವರೆಗೆ ಬಂದ್ ನಡೆಸಲಾಗುವುದು ಎಂದರು.
ಸೆಪ್ಟೆಂಬರ್ 11 ರಂದು ಆಟೋ ಟ್ಯಾಕ್ಸಿ, ಖಾಸಗಿ ಬಸ್, ಸ್ಕೂಲ್ ಬಸ್ ಎಲ್ಲವೂ ಸಂಚಾರ ಬಂದ್ ಮಾಡಲಿವೆ, ಏರ್ ಪೋರ್ಟ್ ನಿಂದ ಯಾವುದೇ ವಾಹನ, ಆಟೋ, ಟ್ಯಾಕ್ಸಿ ಓಡಾಟ ನಡೆಸಲ್ಲ ಎಂದು ಅವರು ತಿಳಿಸಿದರು.

ಖಾಸಗಿ ಸಾರಿಗೆ ಒಕ್ಕೂಟದ ಬೇಡಿಕೆಗಳೇನು?
ಚಾಲಕರಿಗೆ 10 ಸಾವಿರ ಮಾಸಿಕ ಪರಿಹಾರ ಧನ ನೀಡಬೇಕು,
ಬೈಕ್, ರ್ಯಾಪಿಡ್ ಟ್ಯಾಕ್ಸಿಗಳನ್ನು ಸಂಪೂರ್ಣವಾಗಿ ನಿಷೇಧಿಸಬೇಕು.
ಅಸಂಘಟಿತ ವಾಣಿಜ್ಯ ಚಾಲಕರ ಮತ್ತು ಸಾರಿಗೆ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು.
ಸೌಲಭ್ಯ ಯೋಜನೆಯಡಿ ಆಟೋ, ಟ್ಯಾಕ್ಸಿ ಚಾಲಕರಿಗೆ ಕಡಿಮೆ ಬಡ್ಡಿ ಸಾಲ ನೀಡಬೇಕು.
ವೈಟ್ ಬೋರ್ಡ್ ವಾಹನದಲ್ಲಿ ಬಾಡಿಗೆ ಮಾಡುವುದನ್ನು ನಿಲ್ಲಿಸಬೇಕು.
ಚಾಲಕರ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಬೇಕು.
ಓಲಾ, ಊಬರ್ ಆಪ್ ಆಧಾರಿತ ಸೇವೆಗಳ ನಿರ್ಬಂಧಿಸಬೇಕು.
ಖಾಸಗಿ ಬಸ್ ಗಳಿಗೂ ಶಕ್ತಿ ಯೋಜನೆ ಅಡಿ ಸೇವೆಗೆ ಅವಕಾಶ ನೀಡಬೇಕು.
ಖಾಸಗಿ ವಾಹನಗಳನ್ನ ಕಿ.ಮೀ ಆಧಾರದಲ್ಲಿ ಸರ್ಕಾರ ಬಾಡಿಗೆಗೆ ಪಡೆಯಬೇಕು.
ನಿಯಮ ಬಾಹಿರವಾಗಿ ವಾಹನ ವಶಕ್ಕೆ ಪಡೆಯುವ ಫೈನಾನ್ಸ್ ಕಂಪನಿಗಳ ವಿರುದ್ಧ ಕ್ರಮಕೈಗೊಳ್ಳಬೇಕು.

More News