ಬೆಂಗಳೂರು : ಡಿಎಂಕೆ ಸಚಿವ ಉದಯನಿಧಿ ಸ್ಟಾಲಿನ್ ಅವರದ್ದು ದುರಹಂಕಾರದ ಹೇಳಿಕೆಯಾಗಿದ್ದು, ಅವರ ಹೇಳಿಕೆ ಅಜ್ಞಾನದಿಂದ ಕೂಡಿದೆ, ಪಕ್ಷದಿಂದ ಈ ಸಚಿವರನ್ನು ಉಚ್ಛಾಟನೆ ಮಾಡಬೇಕು ಹಾಗೆಯೇ, ತಮಿಳುನಾಡು ಡಿಎಂಕೆ ಸರ್ಕಾರ ವಜಾ ಆಗಬೇಕು, ಡಿಎಂಕೆ ಪಕ್ಷದ ಮಾನ್ಯತೆಯನ್ನು ರದ್ದಾಗಬೇಕೆಂದು ಬಿಜೆಪಿ ಶಾಸಕ ಸಿ.ಎನ್.ಅಶ್ವಥ್ ನಾರಾಯಣ ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉದಯನಿಧಿ ಸ್ಟಾಲಿನ್ ಅವರ ಹೇಳಿಕೆ ದುರಹಂಕಾರದ ಹೇಳಿಕೆಯಾಗಿದೆ, ತಕ್ಷಣವೇ ಅವರು ಅದನ್ನು ವಾಪಾಸ್ಸು ಪಡೆಯಬೇಕೆಂದು ಆಗ್ರಹಿಸಿದರು.
ಸನಾತನ ನಿರ್ಮೂಲನೆ ಆಗಬೇಕು ಎಂಬ ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆಗೆ ಅವರು ದೇಶದ ಜನರ ಕ್ಷಮೆ ಕೇಳಬೇಕೆಂದು ಒತ್ತಾಯಿಸಿದರು.
ಒಂದು ದೇಶ ಒಂದು ಚುನಾವಣೆ ಅನ್ನೋದು ಜನರ ಅಪೇಕ್ಷೆ
ಕೇಂದ್ರದ ಬಿಜೆಪಿ ಸರ್ಕಾರ ಜಾರಿ ತರಲು ಉದ್ದೇಶಿಸಿರುವ ಒಂದು ದೇಶ ಒಂದು ಚುನಾವಣೆ ಅನ್ನೋದು ಜನರ ಅಪೇಕ್ಷೆಯಾಗಿದೆ ಎಂದರು, ಇದಕ್ಕೆ ಇಂಡಿಯ ಒಕ್ಕೂಟದ ವಿರೋಧ ಸರಿಯಲ್ಲ, ಅವರೂ ಸಮಿತಿಯಲ್ಲಿ ಇದ್ದಾರೆ, ಅವರ ಅಭಿಪ್ರಾಯ ಸಲ್ಲಿಸಲಿ, ನಾಳೇನೇ ಒಂದು ದೇಶ ಒಂದು ಚುನಾವಣೆ ಆಗಲ್ಲ, ಈ ನಿಟ್ಟಿನಲ್ಲಿ ಪ್ರಕ್ರಿಯೆಗಳು ಶುರುವಾಗಿವೆ ಎಂದರು.
ಎಲ್ಲದಕ್ಕೂ ವಿರೋಧ ಮಾಡೋದು ಸರಿಯಲ್ಲ, ರಾಜಕಾರಣ ಮಾಡೋದು ಸರಿಯಲ್ಲ ಎಂದು ಅಶ್ವಥ್ ನಾರಾಯಣ ಹೇಳಿದರು.
ಬಿಜೆಪಿ ಮುಖಂಡರುಗಳಾದ ಬಿ ಸಿ ಪಾಟೀಲ್, ರಾಜುಗೌಡರು ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿದ್ದಾಗಲೇ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬಂದವರಿದ್ದಾರೆ, ರಾಜಕೀಯದಲ್ಲಿ ಒಬ್ಬರಿಗೊಬ್ಬರು ಪರಿಚಯ, ಗೆಳೆಯರೂ ಇದ್ದಾರೆ ಎಂದು ಸಮಜಾಯಿಸಿ ನೀಡಿದರು.
ವಿಪಕ್ಷದವರೂ ಸಿಎಂ, ಡಿಸಿಎಂ ಭೇಟಿ ಮಾಡಲೇಬೇಕಾಗುತ್ತದೆ, ಇಂಥ ಭೇಟಿಗಳಿಗೆಲ್ಲ ಬೇರೆ ಅರ್ಥ ಕಲ್ಪಿಸುವ ಅಗತ್ಯ ಇಲ್ಲ ಎಂದು ಹೇಳಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಗೆ ಭವಿಷ್ಯ ಇಲ್ಲ ಎಂದು ಅಶ್ವಥ್ ನಾರಾಯಣ ಭವಿಷ್ಯ ನುಡಿದರು.
ಕಾಂಗ್ರೆಸ್ ನವರು ಕೆಲವರಿಗೆ ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ ಎಂದು ಹೇಳಿದ ಅವರು, ಅವರ ಬ್ಲಾಕ್‌ಮೇಲ್ ವಿಫಲವಾಗುತ್ತೆ ಎಂದರು.




